ಸೋಮವಾರಪೇಟೆ, ಜು. 5: ಸೋಮವಾರಪೇಟೆ ತಾಲೂಕಿನಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಗದ್ದೆಗಳಲ್ಲಿ ಉಳುಮೆ, ಬಿತ್ತನೆ, ಸಸಿಮಡಿ ತಯಾರಿ ಕಾರ್ಯ ಪ್ರಗತಿಯಲ್ಲಿದ್ದು, ಅನ್ನದಾತ ರೈತ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಹಲವು ಭಾಗಗಳಲ್ಲಿ ಈಗಾಗಲೇ ನಾಟಿ ಕಾರ್ಯ ಪ್ರಾರಂಭವಾಗಿದೆ. ಭಾರೀ ಮಳೆಯಾದ ಶಾಂತಳ್ಳಿ ಹೋಬಳಿಯಾದ್ಯಂತ ಕೃಷಿ ಚಟುವಟಿಕೆ ಹೆಚ್ಚು ಬಿರುಸುಗೊಂಡಿದೆ. ರೈತರು ಎತ್ತು ಹಾಗೂ ನೇಗಿಲಿನೊಂದಿಗೆ ಗದ್ದೆಗೆ ಇಳಿದಿದ್ದಾರೆ. ರೈತಸ್ನೇಹಿ ಎತ್ತುಗಳ ಮೂಲಕ ಉಳುಮೆ ಕಾರ್ಯ ಭರದಿಂದ ಸಾಗಿದ್ದು, ಹಲವು ಭಾಗಗಳಲ್ಲಿ ಟ್ರ್ಯಾಕ್ಟರ್‍ಗಳು ಗದ್ದೆಗೆ ಇಳಿದಿವೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ 3,600 ಹೆಕ್ಟೇರ್‍ನಲ್ಲಿ ಮುಸುಕಿನ ಜೋಳ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ.

ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಈಗಾಗಲೇ 70 ಇಂಚಿನಷ್ಟು ಮಳೆಯಾಗಿದ್ದು, ಭಾರೀ ಮಳೆಯಾದ ಹಿನ್ನೆಲೆ ಸಸಿಮಡಿ ತಯಾರಿ ಕಾರ್ಯ ಈಗಷ್ಟೇ ಪ್ರಾರಂಭವಾಗಿದೆ. ಇದರೊಂದಿಗೆ ಈ ವ್ಯಾಪ್ತಿಯ ಬೆಟ್ಟದಳ್ಳಿ, ಕುಮಾರಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ, ಬೀಕಳ್ಳಿ, ಹಂಚಿನಳ್ಳಿ, ನಾಡ್ನಳ್ಳಿ, ಕುಡಿಗಾಣ ಪ್ರದೇಶಗಳಲ್ಲಿ ಕೃಷಿಕ ವರ್ಗ ಗದ್ದೆ ಉಳುಮೆಯಲ್ಲಿ ನಿರತವಾಗಿದೆ.

ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ, ಸುಂಟಿಕೊಪ್ಪ ಹೋಬಳಿಗಳಲ್ಲಿ ಗದ್ದೆಗಳನ್ನು ಉಳುಮೆ ಕಾರ್ಯಕ್ಕೆ ಸಿದ್ದಪಡಿಸುವ ಸಂಬಂಧ ಕೆಲವು ರೈತರು ಟಿಲ್ಲರ್, ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಕೆಲವು ಕಡೆ ಜೋಡೆತ್ತುಗಳನ್ನು ಬಳಸಿಕೊಂಡು ಉಳುಮೆ ಕಾರ್ಯ ನಡೆಯುತ್ತಿದೆ.

ತಾಲೂಕಿನಲ್ಲಿ 10,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ಎಕರೆಯಲ್ಲಿ 16 ರಿಂದ 18 ಕ್ವಿಂಟಾಲ್ ಫಸಲು ತೆಗೆಯುವ ಗುರಿ ಇದೆ. 3,600 ಹೆಕ್ಟೆರ್‍ನಲ್ಲಿ ಮುಸುಕಿನ ಜೋಳ, ಬಾಳೆ, ಶುಂಠಿ ಬೆಳೆಯಲಾಗಿದೆ. ಹಿಂಗಾರುವಿನಲ್ಲಿ 500 ರಿಂದ 600 ಹೆಕ್ಟೆರ್‍ನಲ್ಲಿ ದ್ವಿದಳ ಧಾನ್ಯ, 60 ಹೆಕ್ಟೆರ್‍ನಲ್ಲಿ ರಾಗಿ ಬೆಳೆಯಲಾಗುತ್ತಿದೆ ಎಂದು ಕೃಷಿ ಇಲಾಖಾ ವರದಿ ತಿಳಿಸಿದೆ.

ತಾಲೂಕಿನ 6 ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತದ ಬಿತ್ತನೆ ಬೀಜವನ್ನು ವಿತರಿಸಲಾಗಿದೆ. ಸಸಿಮಡಿಗೆ ಸೂಕ್ತ ಸಮಯವಾಗಿದ್ದು, ತುಂಗಾ, ಬಾಂಗ್ಲರೈಸ್ 2655, ಐಆರ್ 64, ಅತಿರಾ ತಳಿಗಳನ್ನು ರೈತರು ಬೆಳೆಯಬಹುದು. ಈ ತಳಿ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ತಿಳಿಸಿದ್ದಾರೆ.

ಕೃಷಿ ಸಂಬಂಧಿತ ಯಾವದೇ ಮಾಹಿತಿ, ಸಲಹೆಗಳು ಬೇಕಿದ್ದಲ್ಲಿ ಹೋಬಳಿ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೃಷಿ ಇಲಾಖಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಡಾ. ರಾಜಶೇಖರ್ ಮಾಹಿತಿ ನೀಡಿದ್ದಾರೆ.

ಕೊಳೆರೋಗ ಹತೋಟಿಗೆ ಸೂಚನೆ: ಕಳೆದ ಕೆಲವು ವರ್ಷಗಳಿಂದ ಅಂತರವನ್ನು ಕಾಯ್ದುಕೊಂಡು ಬೀಳುತ್ತಿದ್ದ ಮಳೆಯಿಂದಾಗಿ ಕಾಫಿಗಿಡಗಳಲ್ಲಿ ಕೊಳೆರೋಗ ಅಪರೂಪವಾಗಿತ್ತು. ಪ್ರಸಕ್ತ ಸಾಲಿನ ಆರಂಭದಲ್ಲಿ ಬಿದ್ದ ಹೂಮಳೆ ತಾಲೂಕಿನಾದ್ಯಂತ ಉತ್ತಮವಾಗಿದ್ದು, ಗಿಡಗಳಲ್ಲಿ ಕಾಯಿ ಕಚ್ಚಿತ್ತು. ಇದರಿಂದ ಸಂತಸಗೊಂಡಿದ್ದ ಬೆಳೆಗಾರರು ಮುಂದಿನ ಬೆಳೆಯಿಂದ ಬರುವ ವರಮಾನದ ಲೆಕ್ಕಾಚಾರವನ್ನು ಹಾಕುತ್ತಾ ಒಂದಷ್ಟು ನಗುಮುಖದಲ್ಲಿ ದಿನದೂಡುತ್ತಿದ್ದರು.

ಇದೀಗ ಬೀಳುತ್ತಿರುವ ನಿರಂತರ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ನೀರಿನ ತೇವಾಂಶ ಇಂಗದೇ ಕಾಫಿ ಗಿಡದ ಎಲೆಗಳು ಕೊಳೆಯುತ್ತಿದ್ದರೆ, ಮತ್ತೊಂದೆಡೆ ಕಾಯಿ ಕಚ್ಚಿರುವ ಕಾಫಿ ಗೊಂಚಲಿನಲ್ಲಿ ತೊಟ್ಟುಗಳೂ ಕೊಳೆಯುತ್ತಾ ಕಾಫಿ ಫಸಲು ನೆಲ ಕಚ್ಚುತ್ತಿದೆ. ಇನ್ನು ಕಾಫಿತೋಟಗಳಲ್ಲಿ ಕಾಫಿ ಕಾಂಡಕೊರಕ ರೋಗ, ಎಲೆ ಚುಕ್ಕೆ ರೋಗ ಸೇರಿದಂತೆ ಇರುವ ರೋಗಗ್ರಸ್ತ ಗಿಡಗಳನ್ನು ಬೇರು ಸಹಿತ ಕಿತ್ತು ಮರು ನಾಟಿ ಮಾಡಲು ಬೆಳೆಸಿದ್ದ ನರ್ಸರಿಯಲ್ಲಿನ ಗಿಡಗಳ ಎಲೆಗಳು ಸಹಿತ ಕೊಳೆಯಲು ಆರಂಭವಾಗಿರುವದು ಕಾಫಿ ಬೆಳೆಗಾರರ ನಿದ್ದೆಗೆಡಿಸಿದೆ.

ಈ ಹಿಂದೆ ಪುಷ್ಪಗಿರಿ ತಪ್ಪಲಿನ ಗ್ರಾಮಗಳಾದ ಹೆಗ್ಗಡಮನೆ, ಬೆಟ್ಟದಳ್ಳಿ, ಕುಂದಳ್ಳಿ, ಶಾಂತಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಮಾತ್ರ ಅತೀ ಹೆಚ್ಚು ಮಳೆ ಬೀಳುತ್ತಿತ್ತು. ಆದರೆ ಈ ಬಾರಿ ಸೋಮವಾರಪೇಟೆ, ಸುಂಟಿಕೊಪ್ಪ, ಶನಿವಾರಸಂತೆ ಹೋಬಳಿಗಳಲ್ಲೂ ಅಕಾಲಿಕ ಮಳೆಯಾಗಿದೆ. ಮುಂಗಾರಿಗೆ ಮುನ್ನ 1 ತಿಂಗಳಲ್ಲಿ ಸುಮಾರು 30ರಿಂದ 50 ಇಂಚಿನಷ್ಟು ಮಳೆಯಾಗಿದೆ. ಮಳೆ ಬಿಡುವು ಕೊಡದಿರುವದರಿಂದ ಕಾಫಿ ಫಸಲಿನೊಂದಿಗೆ ಈಗಾಗಲೆ ಗರಿ ಬಿಟ್ಟಿರುವ ಕಾಳು ಮೆಣಸಿನ ಗರಿಗಳೂ ಕೂಡ ನೆಲಕ್ಕುರುಳಲಿದೆ ಎಂಬ ಆತಂಕ ಕೃಷಿಕ ವರ್ಗದಲ್ಲಿ ಮೂಡಿದೆ.

ಈಗಾಗಲೇ ಕೊಳೆರೋಗ ಬಾಧಿಸದ ತೋಟಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶೇ. 1 ರ ಬೋಡೋ ದ್ರಾವಣವನ್ನು ಸಿಂಪಡಿಸಬೇಕು. ಇರುವ ಕಾಫಿ ಗಿಡಗಳ ಮಧ್ಯೆ ಗಾಳಿಯಾಡುವಂತೆ ಗಿಡಗಳನ್ನು ಹಾಗೂ ಮರದ ಜೋಲುಗಳನ್ನು ತೆಗೆಯಬೇಕು. ಸುರಿಯುತ್ತಿರುವ ಮಳೆ-ಗಾಳಿಯಿಂದಾಗಿ ಮರಗಳಿಂದ ಎಲೆಗಳು ಉದುರಿ ಕಾಫಿ ಗಿಡಗಳ ಮೇಲೆ ಸಂಗ್ರಹವಾಗಿರುವದನ್ನು ತೆರವುಗೊಳಿಸಿ, ಗಾಳಿ ಬೆಳಕು ಸರಾಗವಾಗಿ ಹರಿದಾಡುವಂತೆ ಮಾಡಬೇಕು. ಕಾಫಿ ಗಿಡಗಳ ಬುಡಗಳಲ್ಲಿ ನೀರು ಸಂಗ್ರಹವಾಗದಂತೆ ಮಾಡಿ, ಬೇರಿಗೂ ಗಾಳಿಯಾಡುವಂತೆ ನೋಡಿಕೊಳ್ಳಬೇಕು ಎಂದು ಕಾಫಿ ಮಂಡಳಿ ಅಧಿಕಾರಿಗಳು ಕೃಷಿಕರಿಗೆ ಸಲಹೆ ನೀಡಿದ್ದಾರೆ.

ಈಗಾಗಲೇ ಕೊಳೆರೋಗ ಬಾಧಿಸಿರುವ ಗಿಡಗಳಲ್ಲಿ ರೋಗ ಬಾಧಿತ ರೆಕ್ಕೆಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಹಾಗೆ ತೆಗೆದ ರೋಗ ಬಾಧಿತ ರೆಕ್ಕೆಗಳನ್ನು ಹಾಗೂ ಕೊಳೆಯುತ್ತಿರುವ ಕಾಫಿ ಫಸಲನ್ನು ತೋಟದಿಂದ ಹೊರ ಹಾಕಬೇಕು. ನಂತರ 120 ಗ್ರಾಂ ಬಾವಿಷ್ಟನ್ ದ್ರಾವಣವನ್ನು 200 ಲೀಟರ್ ನೀರಿನಲ್ಲಿ ಸಿಂಪಡಿಸಿ ಗಿಡಗಳ ಮೇಲೆ ಸಿಂಪಡಿಸಬೇಕು. ಈ ಕ್ರಮಗಳನ್ನು ಅನುಸರಿಸುವದರೊಂದಿಗೆ ಏಕರೆಗೆ ಒಂದು ಚೀಲ ಯೂರಿಯ ಗೊಬ್ಬರವನ್ನು ಸಾಲುಗಳ ಮಧ್ಯೆ ಎರಚಬೇಕು. ಹೀಗೆ ಮಾಡಿದ್ದಲ್ಲಿ ಕೊಳಚೆಯನ್ನು ನಿಯಂತ್ರಿಸಿ, ಕಾಯಿ ಉದುರುವದನ್ನು ತಡೆಗಟ್ಟಬಹುದು ಎಂದು ಕಾಫಿ ಮಂಡಳಿ ತಿಳಿಸಿದೆ.

ನರ್ಸರಿಗೆ ಬುಟ್ಟಿಗಳನ್ನು ತಯಾರಿಸುವಾಗ ಸರಿಯಾಗಿ ಮಣ್ಣು, ಸಗಣಿಯನ್ನು ಒಣಗಿಸದೇ ಇರುವದರಿಂದ ಕಾಫಿ ಸಸಿಗಳು ಬುಡ ಸಹಿತ ಕೊಳೆಯುತ್ತವೆ. ಇದನ್ನು ನಿಯಂತ್ರಿಸಲು ಈಗಾಗಲೇ ನರ್ಸರಿ ಮಾಡಿರುವ ಜಾಗವನ್ನು ಬದಲಿಸಬೇಕು. ರೋಗ ಬಾಧಿತ ಸಸಿಗಳನ್ನು ಬುಟ್ಟಿ ಸಹಿತ ನರ್ಸರಿಯಿಂದ ಹೊರ ಹಾಕಬೇಕು. ನಂತರ 1 ಲೀಟರ್ ನೀರಿಗೆ 1 ಮಿ.ಲೀ ಅಥವಾ ಡೈಥೇನ್ ಎಂ-45ನ್ನು 5 ಗ್ರಾಂನ್ನು ಸಸಿಗಳ ಮೇಲೆ ಸಿಂಪಡಿಸಬೇಕು. ನರ್ಸರಿಗೆ ಗಾಳಿ-ಬೆಳಕು ಸರಾಗವಾಗಿ ಬೀಳುವಂತೆ ನೋಡಿಕೊಳ್ಳಬೇಕು ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಮಾಹಿತಿ ನೀಡಿದ್ದಾರೆ.

ಸಕಾಲದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರಷ್ಟೇ ನಷ್ಟದಿಂದ ಪಾರಾಗಬಹುದು. ಕಾಫಿ ತೋಟ ನಿರ್ವಹಣೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಕಾಫಿ ಮಂಡಳಿಯನ್ನು ಸಂಪರ್ಕಿಸಬಹುದು ಎಂದು ಮುರುಳೀಧರ್ ತಿಳಿಸಿದ್ದಾರೆ.