ಮಡಿಕೇರಿ, ಜು. 8: ಕೊಡಗು ಜಿಲ್ಲೆಯಾದ್ಯಂತ ತೃತೀಯ ದಿನವೂ ಪುನರ್ವಸು ಮಳೆ ತನ್ನ ಅಬ್ಬರ ಮುಂದುವರಿಸಿದೆ. ಪರಿಣಾಮ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲೆಡೆ ಪಟ್ಟಣ ಪ್ರದೇಶಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಇಂದು ಭಾಗಮಂಡಲ ಸಂಗಮ ಎಂದಿನಂತೆ ಜಲಾವೃತಗೊಂಡಿದ್ದರೂ, ನಾಪೋಕ್ಲು ಹಾಗೂ ಮಡಿಕೇರಿ ಮಾರ್ಗಗಳಲ್ಲಿ ವಾಹನಗಳ ಓಡಾಟಕ್ಕೆ ಸಮಸ್ಯೆ ಎದುರಾಗಲಿಲ್ಲ.ಬದಲಾಗಿ ಕಾವೇರಿ ಹೊಳೆ ಎಲ್ಲೆಡೆ ತುಂಬಿ ಹರಿಯತೊಡಗಿದ್ದು, ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ಹಾಗೂ ಉಪನದಿಗಳಲ್ಲಿಯೂ ನೀರಿನ ಹರಿಯುವಿಕೆ ಹೆಚ್ಚಾಗಿದ್ದು, ಎಲ್ಲೆಡೆ ಗದ್ದೆ ಬಯಲುಗಳು ಜಲಾವೃತಗೊಂಡಿರುವ ಸನ್ನಿವೇಶ ಗೋಚರಿಸಿದೆ. ಕದನೂರು, ನಿಟ್ಟೂರು ವ್ಯಾಪ್ತಿ ಕೃಷಿ ಭೂಮಿಯಲ್ಲಿ ನೀರು ಅಧಿಕ ಸಂಗ್ರಹಗೊಂಡಿದೆ.

ಉತ್ತರಕೊಡಗಿನ ಗಾಳಿಬೀಡು ಗ್ರಾ.ಪಂ. ಹಾಗೂ ಗರ್ವಾಲೆ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮಗಳಲ್ಲಿ ಭತ್ತದ ಪೈರು ಹಾಗೂ ನಾಟಿ ಮಾಡಿರುವ ಗದ್ದೆಗಳು ಕಳೆದ ಎರಡು ದಿನಗಳಿಂದ ಸಂಪೂರ್ಣ ಜಲಾವೃತಗೊಂಡು ಸಾಕಷ್ಟು ಪೈರು ಹಾನಿಗೊಂಡಿದೆ ಎಂದು ಅಲ್ಲಿನ ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಈ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಒಂದು ವಾರದಿಂದ ವಿದ್ಯುತ್ ಸಂಪರ್ಕವಿಲ್ಲದೆ ಮೊಬೈಲ್ ಇತ್ಯಾದಿ ಸಂಪರ್ಕ ಕೂಡ ಸ್ಥಗಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಾಕು ಪ್ರಾಣಿಗಳ ಸಹಿತ ದನಗಳ ಮೇವಿಗೂ ತೊಂದರೆಯಾಗಿದ್ದು, ವಿಪರೀತ ಚಳಿಯೊಂದಿಗೆ ಮಳೆಯ ನಡುವೆ ಗಾಳಿ ರಭಸದಿಂದ ಬೀಸತೊಡಗಿದೆ ಎಂದು ಕಷ್ಟವನ್ನು ವಿವರಿಸಿದ್ದಾರೆ.

ಮುಟ್ಲು, ಹಮ್ಮಿಯಾಲ, ಹಚ್ಚಿನಾಡು, ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯ ಸುತ್ತಮುತ್ತ ಭಾರೀ ಗಾಳಿ ಮಳೆಯೊಂದಿಗೆ ಪುಷ್ಪಗಿರಿ ತಪ್ಪಲು ಶಾಂತಳ್ಳಿ ಹೋಬಳಿಯಲ್ಲೂ ವರುಣ ತನ್ನ ಮುನಿಸು ಮುಂದುವರಿಸಿದೆ.

ಹಾರಂಗಿ ಭರ್ತಿ

ಮಡಿಕೇರಿ ಸಹಿತ ಈ ಗ್ರಾಮೀಣ ಭಾಗಗಳಲ್ಲಿ ಮಳೆಯ ತೀವ್ರತೆಯ ಪರಿಣಾಮದಿಂದ ಹಾರಂಗಿ ಜಲಾಶಯ ನಿನ್ನೆ ಒಂದೇ ದಿನದಲ್ಲಿ ಸುಮಾರು ಆರು ಅಡಿಗಳಷ್ಟು ನೀರು ಭರ್ತಿಗೊಂಡು, ಜಲಾಶಯದಿಂದ ನೀರು ಹೊರಬಿಡಬೇಕಾಯಿತು ಎಂದು ಹಾರಂಗಿ ಉಪವಿಭಾಗದ ಕಾರ್ಯ ಪಾಲಕ

(ಮೊದಲ ಪುಟದಿಂದ) ಸಹಾಯಕ ಅಭಿಯಂತರ ಧರ್ಮರಾಜು ಖಚಿತಪಡಿಸಿದ್ದಾರೆ.

ಇಂದು ಕೂಡ ಜಲಾಶಯದಲ್ಲಿ ಗರಿಷ್ಠ 2859 ಅಡಿಗಳಿಗಿಂತ ಎರಡು ಅಡಿ ಕಡಿಮೆ ಪ್ರಮಾಣದಲ್ಲಿ 2857 ಅಡಿಗಳನ್ನು ಕಾಯ್ದುಕೊಂಡು ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಸಕ್ತ 1500 ಕ್ಯೂಸೆಕ್ಸ್ ನದಿಗೆ ಬಿಡಲಾಗಿದ್ದು, 13354 ಕ್ಯೂಸೆಕ್ಸ್ ಒಳ ಹರಿವು ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಲಕಾವೇರಿಗೆ 7 ಇಂಚು

ಕಳೆದ 24 ಗಂಟೆಗಳಲ್ಲಿ ತಲಕಾವೇರಿ ಹಾಗೂ ಗಾಳಿಬೀಡು ವ್ಯಾಪ್ತಿಯ ಹಳ್ಳಿಗಳಲ್ಲಿ ಸರಾಸರಿ 7 ಇಂಚು ಮಳೆ ಸುರಿದಿದ್ದು, ಇಂದು ಹಗಲಿಡೀ ಧಾರಾಕಾರ ಸುರಿಯ ಲಾರಂಭಿಸಿದೆ. ಭಾಗಮಂಡಲ ಶಾಂತಳ್ಳಿ, ಕರಿಕೆ, ಹುದಿಕೇರಿ ಮುಂತಾದೆಡೆಗಳಲ್ಲಿ ಸರಾಸರಿ 3.50 ರಿಂದ 6 ಇಂಚು ಮಳೆ ದಾಖಲಾಗಿದೆ.

ಮಕ್ಕಳು ನಿರಾಳ : ಜಿಲ್ಲೆಯಲ್ಲಿ ಮಳೆಯ ತೀವ್ರತೆ ನಡುವೆ ಶನಿವಾರ ಜಿಲ್ಲಾಡಳಿತದಿಂದ ಅಂಗನವಾಡಿ ಸಹಿತ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಇಂದು ಭಾನುವಾರ ಎಂದಿನ ರಜೆಯಾಗಿದ್ದರಿಂದ ವಿದ್ಯಾರ್ಥಿ ಸಮೂಹದೊಂದಿಗೆ ಮಕ್ಕಳ ಪೋಷಕರು ಕೂಡ ನಿರಾಳವಾಗಿ ದಿನ ಕಳೆದಿದ್ದಾರೆ. ಅನೇಕರು ಮಧ್ಯಾಹ್ನ ದಿಂದಲೇ ‘ಶಕ್ತಿ’ಗೆ ಕರೆ ಮಾಡಿ ರಜೆ ಬಗ್ಗೆ ಖಾತರಿ ಪಡಿಸಿಕೊಳ್ಳಲು ಪರಿತಪಿಸುತ್ತಿದ್ದರು.

ಅಲ್ಲಲ್ಲಿ ಮಳೆ

ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 3.37 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 4.71 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 2.52 ಇಂಚು ಹಾಗೂ ಸೋಮವಾರ ಪೇಟೆ ತಾಲೂಕಿನಲ್ಲಿ 2.90 ಇಂಚ ಸರಾಸರಿ ಮಳೆ ಸುರಿದಿದೆ.

ಉಳಿದಂತೆ ಭಾಗಮಂಡಲ 5.40, ಸಂಪಾಜೆ 5.62, ಮಡಿಕೇರಿ ನಗರ 4.45, ಹುದಿಕೇರಿ 3.68, ನಾಪೋಕ್ಲು 3.37 ಇಂಚು

ಮಳೆಯ ತೀವ್ರತೆ ನಡುವೆ ಶನಿವಾರ ಜಿಲ್ಲಾಡಳಿತದಿಂದ ಅಂಗನವಾಡಿ ಸಹಿತ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಇಂದು ಭಾನುವಾರ ಎಂದಿನ ರಜೆಯಾಗಿದ್ದರಿಂದ ವಿದ್ಯಾರ್ಥಿ ಸಮೂಹದೊಂದಿಗೆ ಮಕ್ಕಳ ಪೋಷಕರು ಕೂಡ ನಿರಾಳವಾಗಿ ದಿನ ಕಳೆದಿದ್ದಾರೆ. ಅನೇಕರು ಮಧ್ಯಾಹ್ನ ದಿಂದಲೇ ‘ಶಕ್ತಿ’ಗೆ ಕರೆ ಮಾಡಿ ರಜೆ ಬಗ್ಗೆ ಖಾತರಿ ಪಡಿಸಿಕೊಳ್ಳಲು ಪರಿತಪಿಸುತ್ತಿದ್ದರು.

ಅಲ್ಲಲ್ಲಿ ಮಳೆ

ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 3.37 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 4.71 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 2.52 ಇಂಚು ಹಾಗೂ ಸೋಮವಾರ ಪೇಟೆ ತಾಲೂಕಿನಲ್ಲಿ 2.90 ಇಂಚ ಸರಾಸರಿ ಮಳೆ ಸುರಿದಿದೆ.

ಉಳಿದಂತೆ ಭಾಗಮಂಡಲ 5.40, ಸಂಪಾಜೆ 5.62, ಮಡಿಕೇರಿ ನಗರ 4.45, ಹುದಿಕೇರಿ 3.68, ನಾಪೋಕ್ಲು 3.37 ಇಂಚು ಚುರುಕು ಕಂಡಿದ್ದ ಕೃಷಿ ಕೆಲಸಕ್ಕೆ ಮಳೆ ಅಡ್ಡಿಯಾಗಿದೆ. ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ದೊಡ್ಡಬಿಳಾಹ, ಕಿರುಬಿಳಾಹ, ಮಾದ್ರೆ, ಗಂಗನಹಳ್ಳಿ, ತೋಯಳ್ಳಿ ಗ್ರಾಮಗಳಲ್ಲಿ ಮಳೆ ಪ್ರಮಾಣ ಅಧಿಕವಾಗುತ್ತಿದೆ. ಈವರೆಗೆ 40 ಇಂಚು ಮಳೆಯಾಗಿದೆ. ಹೇಮಾವತಿ ಹೊಳೆ ತುಂಬಿ ಹರಿಯುತ್ತಿದೆ. ಗದ್ದೆಗಳ ಮೇಲೆ ಹರಿದು ಬಂದರೆ ಗದ್ದೆಗಳಲ್ಲಿ ಹಾಕಿರುವ ಭತ್ತದ ಅಗೆ ಕೊಚ್ಚಿ ಹೋಗುವ ಭೀತಿ ಮೂಡಿದೆ. ಚೆಂಡು ಹೂ ಬೆಳೆಗೆ ಹಾನಿಯಾಗಿ ನಷ್ಟ ಅನುಭವಿಸುವಂತಾಯಿತು. ಹಸಿರುಮೆಣಸಿನಕಾಯಿ ಬೆಳೆಗೂ ಈ ವರ್ಷ ಉತ್ತಮ ಬೆಲೆ ಸಿಗಲಿಲ್ಲ. ಇದೀಗ ಎಲ್ಲಿ ಅತಿವೃಷ್ಟಿ ಸಂಭವಿಸುವದೊ ಎಂಬ ಭಯ ಕಾಡುತ್ತಿದೆ ಎಂದು ದೊಡ್ಡಬಿಳಾಹ ಗ್ರಾಮದ ರೈತ ಬಿ.ಎಂ. ಪ್ರಕಾಶ್ ಅಳಲು ತೋಡಿಕೊಂಡರು.

ಕರಿಕೆಯಲ್ಲಿ ಕೊಚ್ಚಿಹೋದ ಪಾಲ: ಜಿಲ್ಲೆಯಯಾದ್ಯಂತ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಇಲ್ಲಿನ ಚೆತ್ತುಕಾಯ ಎಂಬಲ್ಲಿ ಕರಿಕೆ ಹೊಳೆಗೆ ಅಳವಡಿಸಿದ ತೂಗು ಪಾಲ ಕೊಚ್ಚಿ ಹೋಗಿದ್ದು ಕಳೆದ ರಾತ್ರಿ ಪಾಲ ಸಂಪೂರ್ಣ ಹಾನಿಗೊಂಡಿದೆ. ಸ್ಥಳೀಯ ಗ್ರಾಮ ಪಂಚಾಯತಿ ಗ್ರಾಮಸ್ಥರು ಪಾಲ ದಾಟದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಾಮ ಫಲಕ ಅಳವಡಿಸಿದ್ದು ದುರಸ್ತಿ ಮಾಡಲು ಬಿದಿರು ಸೇರಿದಂತೆ ಇತರೆ ಪರಿಕರಗಳನ್ನು ಪಂಚಾಯಿತಿ ಸ್ಥಳದಲ್ಲಿ ಸಂಗ್ರಹಿಸಿದೆ. ಮಳೆಯಿಂದಾಗಿ ಕೆಲವು ಸಾಮಗ್ರಿ ಕೊಚ್ಚಿಹೋಗಿದ್ದು ಕೆಲಸ ಸ್ಥಗಿತ ಗೊಳಿಸಲಾಗಿದೆ.

ಇಲ್ಲಿ ಶಾಶÀ್ವತ ತೂಗುಪಾಲ ನಿರ್ಮಾಣ ವಾಗಬೇಕಿದ್ದು ಜಿಲ್ಲೆಯ ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವೀರಾಜಪೇಟೆ ಗದ್ದೆಗಳ ಜಲಾವೃತ

ವೀರಾಜಪೇಟೆ ವಿಭಾಗದಲ್ಲಿ ಭಾರೀ ಮಳೆ ಮುಂದುವರೆದಿದ್ದು ಕದನೂರು ಗ್ರಾಮದ ಮುಖ್ಯರಸ್ತೆಗೆ ಒತ್ತಾಗಿರುವ ಗದ್ದೆ ಬಾಣೆ ಜಾಗ ಇಂದು ಪೂರ್ಣವಾಗಿ ಜಲಾವೃತ್ತಗೊಂಡಿದೆ. ಕದನೂರಿನ ಉಪ ಕಾವೇರಿ ಹೊಳೆ ತುಂಬಿ ಹರಿಯುತ್ತಿದೆ. ಆರ್ಜಿ, ಹೆಗ್ಗಳ, ಪೆರುಂಬಾಡಿಯಲ್ಲಿಯೂ ಭಾರೀ ಮಳೆ ಮುಂದುವರೆದು ಗದ್ದೆ, ಖಾಲಿ ಜಾಗ ಜಲಾವೃತಗೊಂಡಿದೆ. ರೈತರು ಬೆಳೆದ ಸಸಿಮಡಿಯಿಂದ ನಾಟಿಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಈ ಭಾರೀ ಮಳೆ ನಾಟಿ ಕೆಲಸಕ್ಕೆ ಅಡಚಣೆ ಉಂಟು ಮಾಡಿದೆ. ಭಾರೀ ಮಳೆಯಾಗಿ ಗದ್ದೆಯಲ್ಲಿ ಜಲಾವೃತಗೊಂಡ ನೀರಿನ ಪ್ರಮಾಣ ಕಡಿಮೆಯಾಗುವ ತನಕ ನಾಟಿ ನೆಡಲು ಸಾಧ್ಯವಿಲ್ಲ ಎಂದು ಈ ವಿಭಾಗದ ರೈತರು ತಿಳಿಸಿದ್ದಾರೆ.

ಈ ವಿಭಾಗದ ರೈತರ ಪ್ರಕಾರ ಆರ್ಜಿ ಗ್ರಾಮದ ಭತ್ತದ ಸಸಿ ಬೆಳೆದಿರುವ ಗದ್ದೆಗಳ ಮೇಲೂ ನೀರು ನಿಂತಿದೆ. ನೀರು ಇಳಿಮುಖ ವಾಗದಿದ್ದರೆ ಸಸಿ ಮಡಿಗಳು ಕೊಳೆಯುವ ಸಂಭವವೇ ಹೆಚ್ಚಾಗಿದೆ. ಬಿಟ್ಟಂಗಾಲ, ಬಾಳುಗೋಡು, ವಿ.ಬಾಡಗದ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಗದ್ದೆ ಜಲಾವೃತಗೊಂಡು ನಾಟಿ ಕೆಲಸಕ್ಕೆ ಅಡಚಣೆ ಉಂಟಾಗಿದೆ.

ನಿನ್ನೆ ದಿನ ರಾತ್ರಿ ಬಿದ್ದ ಮಳೆಗೆ ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿರುವ ಪಿ.ಕೆ.ಮಹಮ್ಮದ್ ಎಂಬುವರ ಮನೆಯ ಮುಂದಿನ ಕಾಂಪೌಂಡ್ ಉರುಳಿ ಬರೆ ಸಮೇತ ಕುಸಿದಿದೆ. ಇದರೊಂದಿಗೆ ಸಣ್ಣ ಮರವು ಉರುಳಿ ಬಿದ್ದಿದೆ. ಇವರ ಹಿಂದಿನ ಮನೆಯಲ್ಲಿಯು ನಿನ್ನೆ ದಿನದ ಮಳೆಗೆ ಮಣ್ಣಿನ ಬರೆಯು ಕುಸಿದಿದೆ ಎಂದು ಮಹಮ್ಮದ್ ಇಲ್ಲಿನ ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ ದೂರು ನೀಡಿದ್ದಾರೆ. ತುರ್ತು ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಬರೆ ಮತ್ತಷ್ಟು ಕುಸಿಯುವ ಸಂಭವವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎರಡು ದಿನಗಳಿಂದ ಸುರಿ ಯುತ್ತಿರುವ ಮಳೆಯಿಂದ ವೀರಾಜಪೇಟೆಯ ಮಲೆತಿರಿಕೆಬೆಟ್ಟ, ಅರಸುನಗರದ ಬೆಟ್ಟ, ನೆಹರೂನಗರದ ಬೆಟ್ಟದ ಮೇಲೆ ವಾಸಿಸುತ್ತಿರುವ ನಿವಾಸಿಗಳು ಭಯದ ವಾತಾವರಣ ದಲ್ಲಿ ಜೀವನ ಸಾಗಿಸುತ್ತಿದ್ದಾರೆ. ವಿರಾಜಪೇಟೆ ವಿಭಾಗಕ್ಕೆ ಇಂದು ಬೆಳಗಿನಿಂದಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ.

ಕೊಡಗು ಕೇರಳ ಗಡಿಪ್ರದೇಶ ವಾದ ಪೆರುಂಬಾಡಿ, ಮೆಮನಕೊಲ್ಲಿ, ಹನುಮಾನ್‍ಪಾಲ ವಾಟೆಕೊಲ್ಲಿ ಹಾಗೂ ಮಾಕುಟ್ಟ ಪ್ರದೇಶಗಳ ಲ್ಲಿಯೂ ಮಳೆಯ ಬಿರುಸು ಚುರುಕು ಗೊಂಡಿದೆ. ಲಘು ವಾಹನಗಳು ಗಡಿ ಪ್ರದೇಶದಲ್ಲಿ ನಿಧಾನ ಹಾಗೂ ಅತಿ ಜಾಗರೂ ಕತೆಯಿಂದ ಚಲಿಸುವಂತೆ ಸೂಚನೆ ನೀಡಿದೆ.

ತಿತಿಮತಿ ಹೆದ್ದಾರಿ ಸಂಚಾರ ತೊಡಕು

*ಗೋಣಿಕೊಪ್ಪಲು : ಹುಣಸೂರು ವಿರಾಜಪೇಟೆ, ಕಣ್ಣೂರು ಅಂತರಾಜ್ಯ ಹೆದ್ದಾರಿ ಸೇತುವೆ ತಿತಿಮತಿ ಬಳಿ ಕುಸಿದಿರುವ ಕಾರಣ ಒಂದು ತಿಂಗಳ ಅವಧಿಯಲ್ಲಿ ಮತ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.

ತಿತಿಮತಿ ಬಳಿ ನೂತನ ಸೇತುವೆ ನಿರ್ಮಾಣಕ್ಕಾಗಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಸೇತುವೆ ನಿರ್ಮಿಸ ಲಾಗಿತ್ತು. ಶನಿವಾರದಿಂದ ಎಡೆಬಿಡದೆ ಬೀಳುತ್ತಿರುವ ಮಳೆಗೆ ಈ ಸೇತುವೆಯ ಮಧ್ಯಭಾಗದಲ್ಲಿ ಕುಸಿತ ಉಂಟಾಗಿತ್ತು. ಇದರಿಂದ ಈ ಮಾರ್ಗದ ಬಸ್ ಹಾಗೂ ಇತರ ವಾಹನಗಳನ್ನು ಕಾಮಗಾರಿ ಪೂರ್ಣಗೊಳ್ಳದ ನೂತನ ಸೇತುವೆ ಮೇಲೆಯೇ ಶನಿವಾರ ಮಧ್ಯಾಹ್ನ ದಿಂದ ಸಂಚರಿಸಲು ಅನುವು ಮಾಡಿಕೊಡಲಾಗಿತ್ತು. ಆದರೆ ಶನಿವಾರ ರಾತ್ರಿ 11 ಗಂಟೆಯಿಂದ ನೂತನ ಸೇತುವೆಯ ಎಡ ಬಲದಲ್ಲಿ ಹಾಕಿರುವ ಮಣ್ಣು ಕುಸಿಯಲು ಆರಂಭಿಸಿದ್ದರಿಂದ ಮತ್ತೆ ವಾಹನ ಸಂಚಾರವನ್ನು ತಡೆ ಹಿಡಿಯಲಾಯಿತು.ಇದನ್ನು ಸರಿಪಡಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗುತ್ತಿಗೆದಾರರು ಭಾನುವಾರ ಬೆಳಗಿನಿಂದ ಬಿಡುವಿಲ್ಲದಂತೆ ಕಾಮಗಾರಿ ನಡೆಸಿದರೂ ಕೂಡ ಸಂಚಾರಕ್ಕೆ ಅನುವು ಮಾಡಿ ಕೊಡಲು ಸಾಧ್ಯವಾಗಲಿಲ್ಲ.

ಎಂಜಿನಿಯರ್ ರಮೇಶ್ ಕುಮಾರ್ ಕೆಲಸದ ನಿಮಿತ್ತ ಸಕಲೇಶಪುರಕ್ಕೆ ತೆರಳಿದ್ದು ಅವರು ಬಂದು ಪರಿಶೀಲಿಸಿದ ಬಳಿಕ ವಾಹನ ಸಂಚಾರದ ಬಗ್ಗೆ ಕ್ರಮಕೈಗೊಳ್ಳಲಾಗುವದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಭಾನುವಾರ ಸಂಜೆ ಮತ್ತೆ ಧಾರಾಕಾರ ಮಳೆ ಬಿದ್ದ ಕಾರಣ ಕಾಮಗಾರಿ ಅಪೂರ್ಣಗೊಂಡಿದೆ. ಇದೀಗ ಈ ಮಾರ್ಗದ ವಾಹನ ಗಳು ಪಿರಿಯಾಪಟ್ಟಣ, ಮಾಲ್ದಾರೆ, ಪಾಲಿಬೆಟ್ಟ ಮೂಲಕ ಚಲಿಸುತ್ತಿವೆ.