ಮಡಿಕೇರಿ, ಜು. 8: ದಲಿತರು ಹಾಗೂ ಶೋಷಿತರು ತಮ್ಮ ನಡುವಿನಲ್ಲಿರುವ ಭಿನ್ನಾಭಿಪ್ರಾಯ ಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಪಣತೊಡಬೇಕೆಂದು ಡಾ. ದೇವದಾಸ್ ಮನವಿ ಮಾಡಿದರು. ಮುಂದಿನ ವರ್ಷ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ದಸರಾದ ಮಾದರಿಯಲ್ಲಿ ಆಚರಿಸಲು ಮಡಿಕೇರಿ ನಗರದ ಪ್ರಮುಖ ನಾಲ್ಕು ವಿಭಾಗಗಳಲ್ಲಿ ವಾಸಿಸುತ್ತಿರುವ ಎಲ್ಲ ಭೀಮ ಬಾಂಧವರು ಒಟ್ಟಾಗಿ ಸೇರುವಂತಾಗಬೇಕು. ಮುಂಬರುವ ದಿನಗಳಲ್ಲಿ ಚರ್ಚಿಸಿ ಅದನ್ನು ಅನುಷ್ಠಾನಕ್ಕೆ ತರುವಂತಾಗಲಿ ಎಂದು ಕರೆಯಿತ್ತರು.ಮಲ್ಲಿಕಾರ್ಜುನ ನಗರದ ಭೀಮ ಸಹೋದರರು, ಶ್ರೀ ಕೋದಂಡ ರಾಮ ದೇವಸ್ಥಾನ ಸಮಿತಿಯ ಜೊತೆಗೂಡಿ, ಪ್ರಬುಧ್ಧ ನೌಕರರ ಒಕ್ಕೂಟದ ಸಹ ಭಾಗಿತ್ವದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಅವರು ಮಾತನಾಡುತ್ತಿ ದ್ದರು. ಇತ್ತೀಚೆಗಷ್ಟೇ (ಮೊದಲ ಪುಟದಿಂದ) ದಲಿತ ರತ್ನ ಪ್ರಶಸ್ತಿ ಪುರಸ್ಕೃತರಾದ ಹಾಗೂ ಒಕ್ಕೂಟದ ಸಲಹೆಗಾರರಾದ ಮತ್ತು ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಹೆಚ್.ವಿ ದೇವದಾಸ್ ಅವರಿಗೆ ಏರ್ಪಡಿಸಿದ ಈ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿಯ ಚೇಂಬರ್ ಆಫ್ ಕಾಮರ್ಸ್‍ನ ಸಭಾಂಗಣದಲ್ಲಿ ಈ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.

ಮಲ್ಲಿಕಾರ್ಜುನ ನಗರದ ಯುವ ಶಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ದೇವದಾಸ್ ಎಲ್ಲರೂ ವಿದ್ಯಾವಂತರಾಗುವತ್ತ ಮುಂದಡಿಯಿ ಡಬೇಕು ಎಂದು ತಿಳಿಸಿದರು. ದಲಿತ ಯುವಕರು ಶಿಕ್ಷಣಕ್ಕೆ ಒತ್ತು ನೀಡಿದರೆ ಉನ್ನತ ವ್ಯಾಸಂಗದ ಮೂಲಕ ಹೆಚ್ಚಿನ ಸಾಧನೆಗೈಯ್ಯಬಹುದು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ರಾಮ ಟ್ರಸ್ಟ್‍ನ ಅಧ್ಯಕ್ಷ ಹಾಗೂ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಡಾ. ದೇವದಾಸ್ ಅವರ ಸೇವೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿದು ಯುವ ಜನರಿಗೆ ಮಾರ್ಗದರ್ಶಕ ವಾಗಲಿ ಎಂದು ಹಾರೈಸಿದರು. ಮೇಲು-ಕೀಳೆಂಬ ಭಾವನೆಯಿಲ್ಲದೆ ಮಲ್ಲಿಕಾರ್ಜುನ ನಗರದಲ್ಲಿ ಸಹಬಾಳ್ವೆಯ ಸಹಕಾರ ಆದರ್ಶಪ್ರಾಯವಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ಕೋದಂಡ ರಾಮ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಕೆ.ಎಂ.ಗಣೇಶ್ ಅವರು ಡಾ. ದೇವದಾಸ್ ಅವರು ನಡೆದು ಬಂದ ದಾರಿಯ ಕುರಿತು ಸಂಕ್ಷಿಪ್ತ ಮಾಹಿತಿಯಿತ್ತರು. ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತ್ತಿರುವÀ ನಿಟ್ಟಿನಲ್ಲಿ ಅವರನ್ನು ಅಭಿನಂದಿಸಿ ಇನ್ನೂ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಸನ್ಮಾನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಕೊಡಗು ದಲಿತ ಸಂಘರ್ಷ ಸಮಿತಿ ಸಂಚಾಲಕ ಎಚ್.ಎಲ್. ದಿವಾಕರ್ ಅವರು ಮಾತನಾಡಿ ದಲಿತ ವರ್ಗ ಎಂದರೆ ಕೇವಲ ಮತದಾನ ಮಾಡುವ ಜನರು ಎಂದು ಇಂದಿನ ರಾಜಕಾರಣಿಗಳು ಭಾವಿಸಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ರಾಜಕೀಯ ನಾಯಕತ್ವ ಕೆಲವರಿಗೆ ಮಾತ್ರ ಸೀಮಿತವಾದುದಲ್ಲ. ದಲಿತ ವರ್ಗದ ಮಂದಿಯೂ ಈ ನಾಯಕತ್ವ ಪಡೆಯಲು ಹೆಜ್ಜೆಯಿರಿಸಬೇಕಾಗಿದೆ ಎಂದು ಕರೆಯಿತ್ತರು. ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಮುಂದಿನ ಡಿಸೆಂಬರ್‍ನಲ್ಲಿ ಸುಮಾರು 10 ಸಾವಿರ ಮಂದಿಯನ್ನು ಸೇರಿಸಿ ಸಮಾವೇಶ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು. ಡಾ. ದೇವದಾಸ್ ಅವರ ಸೇವೆಯನ್ನು ಪರಿಗಣಿಸಿ ಸಮಿತಿಯಿಂದ ಇತ್ತೀಚೆಗೆ ಡಾ. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಸಂದರ್ಭ ‘ಕೊಡಗು ದಲಿತ ರತ್ನ’ ಪ್ರಶಸ್ತಿ ನೀಡಿ ಗೌರವಿಸ ಲಾಯಿತು ಎಂದರು.

ಪ್ರಬುದ್ಧ ನೌಕರರ ಒಕ್ಕೂಟದ ಅಧ್ಯಕ್ಷ ಹಾಗೂ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ವಿ.ಎಸ್. ಸತೀಶ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಡಾ. ದೇವದಾಸ್ ಅವರಿಗೆ ಶುಭ ಹಾರೈಸುವದರೊಂದಿಗೆ ಮುಂದಿನ ದಿನಗಳಲ್ಲಿ ಸಂಘÀಟನೆಗಳನ್ನು ಬಲವರ್ಧನೆಗೊಳಿಸಿ ಉತ್ತಮ ಸಮಾಜ ಸೇವೆ ಮಾಡುವ ಆಶಯ ವ್ಯಕ್ತಪಡಿಸಿದರು. ಶ್ರೀ ಕೋದಂಡ ರಾಮ ದೇವಾಲಯ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹೆಚ್. ಮಂಜುನಾಥ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಗರಸಭಾ ಸದಸ್ಯೆ ಲೀಲಾ ಶೇಷಮ್ಮ ಹಾಗೂ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಹೆಚ್. ಎನ್. ತಿಮ್ಮಯ್ಯ ಉಪಸ್ಥಿತರಿದ್ದರು.