ಗೋಣಿಕೊಪ್ಪಲು, ಜು. 9 : ಕೆಲವು ದಿನಗಳ ಹಿಂದೆ ಕಾಡಾನೆ ಧಾಳಿಗೆ ಸಿಲುಕಿ ಕಷ್ಟದಲ್ಲಿದ್ದ ಕಾರ್ಮಿಕ ಮಹಿಳೆ ಪ್ರೇಮಾಳಿಗೆ ಸಹಾಯ ಹಸ್ತ ನೀಡುವ ಮೂಲಕ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾನವೀಯತೆ ಮೆರೆದಿದ್ದಾರೆ.

ವಾರದ ಹಿಂದೆ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕೆಬೀಡು ಕೋಲುಬಾಣೆಯ ನಿವಾಸಿ ಕಾರ್ಮಿಕ ಮಹಿಳೆ ಪ್ರೇಮ ಹಾಗೂ ಆತನ ಪತಿ ರಾಜು ಎಂಬವರು ಮುಂಜಾನೆ ಏಳು ಗಂಟೆಯ ಸಮಯದಲ್ಲಿ ಕೆಲಸಕ್ಕೆ ನಡೆದುಕೊಂಡು ಬರುತ್ತಿದ್ದಾಗ ಸಮೀಪ ಕಾಫಿ ತೋಟದಲ್ಲಿದ್ದ ಕಾಡಾನೆಯು ಎದುರಾಗಿ ಪ್ರೇಮಾಳು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದಳು.

ಈ ಸಂದರ್ಭ ಪ್ರೇಮಳ ಪತಿ ರಾಜು ತಪ್ಪಿಸಿಕೊಂಡನಾದರೂ ಪ್ರೇಮಳಿಗೆ ಓಡಲಾಗದೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಳು. ಇದರಿಂದ ಆಕೆಯ ಕಾಲು ಎದೆ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಕಾರ್ಮಿಕ ಮಹಿಳೆ ಕೂಲಿ ಕೆಲಸಕ್ಕೆ ತೆರಳಲಾಗದೆ ಸಂಕಷ್ಟದಲ್ಲಿರುವ ಮಾಹಿತಿ ತಿಳಿದ ಸಂಕೇತ್ ಪೂವಯ್ಯನವರು ಮಾಯಮುಡಿ ಕೋಲು ಬಾಣೆಯ ಪ್ರೇಮಾಳ ಮನೆಗೆ ಖುದ್ದು ಭೇಟಿ ನೀಡಿ ಆಕೆಯ ಆರೋಗ್ಯ ವಿಚಾರಿಸಿದಲ್ಲದೆ, ವೈಯಕ್ತಿಕ ರೂ. 10 ಸಾವಿರ ಧನ ಸಹಾಯವನ್ನು ಹಸ್ತಾಂತರಿಸಿ ಧೈರ್ಯ ತುಂಬಿದರು.

ಇತ್ತೀಚೆನ ದಿನದಲ್ಲಿ ಕಾರ್ಮಿಕರು ತೋಟದಲ್ಲಿ ಕೆಲಸ ನಿರ್ವಹಿಸುವದು ಕಷ್ಟವಾಗಿದೆ. ಕೂಲಿ ಮಾಡಲಾಗದೇ ತನ್ನ ಸಂಸಾರವನ್ನು ನಡೆಸಲು ಕಷ್ಟ ಪಡುತ್ತಿರುವ ಪ್ರೇಮಳಿಗೆ ಕೂಡಲೇ ಅರಣ್ಯ ಇಲಾಖೆ ಪರಿಹಾರ ನೀಡಲು ಸಂಕೇತ್ ಸ್ಥಳದಿಂದ ಪೊನ್ನಂಪೇಟೆ ಆರ್‍ಎಫ್‍ಓ ಗಂಗಾಧರ್‍ರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿದರು. ಸಕಾಲದಲ್ಲಿ ಪರಿಹಾರ ವಿತರಿಸುವಂತೆ ಮನವಿ ಮಾಡಿದರು.

ಈ ಸಂದರ್ಭ ಸ್ಥಳೀಯ ಗ್ರಾಮದ ಮುಖಂಡರಾದ ಶ್ರೀನಿವಾಸ್, ಪ್ರೇಮಳ ಪತಿ ರಾಜು, ಹಾಗೂ ಮಕ್ಕಳು ಹಾಜರಿದ್ದರು. ಮಾಯಮುಡಿ ಭಾಗದಲ್ಲಿ ಹಾಡಹಗಲೇ ಕಾಡಾನೆ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖಾಧಿಕಾರಿಗಳು ಸತತ ವಿಫಲರಾಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.