ಕುಶಾಲನಗರ, ಜು. 9: ಕುಶಾಲನಗರದಲ್ಲಿ ಹಳೆಯ ಶಿಥಿಲಗೊಂಡ ಕಟ್ಟಡವೊಂದು ಸಾರ್ವಜನಿಕರ ಬಲಿಗಾಗಿ ಕಾಯುವಂತೆ ಕಾಣುತ್ತಿದೆ. ಪಟ್ಟಣದ ಹೃದಯ ಭಾಗದ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಈ ಹಳೆಯ ಕಟ್ಟಡ ಸಂಪೂರ್ಣ ಕುಸಿದು ನಿಂತಿದ್ದು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತಾಳಿರುವಂತೆ ಕಂಡುಬರುತ್ತಿದೆ.

ಪಟ್ಟಣ ಪಂಚಾಯ್ತಿ ಹಳೆಯ ಕಟ್ಟಡದ ಮುಂಭಾಗದಲ್ಲಿರುವ ಈ ಹಳೆಯ ಕಟ್ಟಡದ ಮೇಲ್ಚಾವಣಿ ಭಾನುವಾರ ರಾತ್ರಿ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಈ ಕಟ್ಟಡ ಪ್ರಸಕ್ತ ಕುಶಾಲನಗರ ಪಟ್ಟಣ ಪಂಚಾಯ್ತಿ ಸುಪರ್ದಿಗೆ ಒಳಪಟ್ಟಿದ್ದು ಅಕ್ರಮವಾಗಿ ಕೆಲವರು ವ್ಯಾಪಾರ ಮಾಡುತ್ತಿದ್ದರೂ ಯಾವದೇ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.

2011 ರ ಮೇ 18 ರಲ್ಲಿ ಪುರಸಭಾ ಕಾಯ್ದೆ ಅಧಿನಿಯಮ 230 ರ ಪ್ರಕಾರ ಸಾಮಾನ್ಯ ಸಭೆಯಲ್ಲಿ ಈ ಕಟ್ಟಡದ ಬಗ್ಗೆ ಠರಾವು ಹೊರಡಿಸಿದ್ದರೂ ಕಟ್ಟಡದ ದುರುಪಯೋಗ ನಡೆಯುತ್ತಿದೆ ಎಂದು ನಾಗರಿಕರು ದೂರಿದ್ದಾರೆ. ಕಟ್ಟಡದಲ್ಲಿ ಯಾವದೇ ರೀತಿಯ ವ್ಯಾಪಾರ ವಹಿವಾಟು ನಡೆಸದಂತೆ ನಿರ್ಬಂಧ ವಿಧಿಸಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಈ ಕಟ್ಟಡದ ಆವರಣದಲ್ಲಿ ಎಚ್ಚರಿಕೆ ಫಲಕ ಹಾಕಿದ್ದರೂ ವ್ಯಾಪಾರ ವಹಿವಾಟು ನಡೆಸುತ್ತಿರುವದು ಕಾಣಬಹುದಾಗಿದೆ.

ದಿನನಿತ್ಯ ನೂರಾರು ನಾಗರಿಕರು ಇಲ್ಲಿ ವ್ಯಾಪಾರಕ್ಕೆ ಬರುತ್ತಿದ್ದು ಅಪಾಯ ಎದುರಾಗುವ ಸಾಧ್ಯತೆ ಕಂಡುಬಂದಿದೆ. ಈ ಕಟ್ಟಡದಿಂದ ಯಾವದೇ ರೀತಿಯ ಅಪಾಯ ನಡೆಯದಂತೆ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ನಿಯಮಾನುಸಾರ ಕ್ರಮಕೈಗೊಳ್ಳಬೇಕೆಂದು ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಎಂ.ಎಂ.ಚರಣ್ ಒತ್ತಾಯಿಸಿದ್ದಾರೆ.

-ವರದಿ:ಸಿಂಚು