ಮಡಿಕೇರಿ, ಜು. 9: ಕೊಡಗು ಜಿಲ್ಲೆಯಾದ್ಯಂತ ನಾಲ್ಕನೇ ದಿನವೂ ಪುನರ್ವಸು ಮಳೆ ತೀವ್ರಗೊಂಡು ವಿಪರೀತ ಗಾಳಿಯೊಂದಿಗೆ ಚಳಿಯ ವಾತಾವರಣ ಸೃಷ್ಟಿಯಾಗಿದೆ.ಮಡಿಕೇರಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮಳೆ ಜೋರಾಗಿದ್ದು, ಅಲ್ಲಲ್ಲಿ ಸಣ್ಣ ಪುಟ್ಟ ಭೂ ಕುಸಿತ, ಮರಗಳು ನೆಲಕಚ್ಚುವದರೊಂದಿಗೆ ಕೆಲವೆಡೆ ಮನೆಗಳಿಗೂ ಹಾನಿ ಯಾಗಿರುವ ಕುರಿತು ವರದಿಯಾಗಿದೆ. ಇಲ್ಲಿನ ಮಂಗಳೂರು ರಸ್ತೆಯಲ್ಲಿ ಬರೆ ಕುಸಿತದಿಂದ ಸಂಚಾರ ವ್ಯವಸ್ಥೆ ಕೆಲಹೊತ್ತು ಸ್ಥಗಿತಗೊಂಡಿತು.
ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಹಚ್ಚಿನಾಡು, ಹಮ್ಮಿಯಾಲ, ಮುಟ್ಲು, ಮುಕ್ಕೊಡ್ಲು ವ್ಯಾಪ್ತಿಯಲ್ಲಿ ತೀವ್ರ ಮಳೆಯಿಂದ ಗದ್ದೆ ಬಯಲು ಜಲಾವೃತಗೊಂಡಿರುವ ದೃಶ್ಯ ಮುಂದುವರಿದಿದೆ. ಈ ಭಾಗದಲ್ಲಿ ಗದ್ದೆಗಳು ಜಲಾವೃತಗೊಂಡಿರುವ ಪರಿಣಾಮ ನಾಟಿ ಕೆಲಸಕ್ಕೂ ತೊಂದರೆ ಯಾಗಿದೆ ಎಂದು ಅಲ್ಲಿನ ರೈತರು ‘ಶಕ್ತಿ’ಯೊಂದಿಗೆ ಅಸಹಾಯಕತೆ ತೊಡಿ ಕೊಂಡಿದ್ದಾರೆ. ಇಂದು ಶಾಲೆಗಳಿಗೆ ರಜೆಯ ಹಿನ್ನೆಲೆ ಒಂದಿಷ್ಟು ಬವಣೆ ತಪ್ಪಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಮನೆಗಳಿಗೆ ಹಾನಿ : ಮಡಿಕೇರಿಯ ಬನ್ನಿಮಂಟಪ ಬಳಿ ಲಕ್ಷ್ಮಿನಾರಾಯಣ ಎಂಬವರ ಮನೆ ಮಳೆಯಿಂದ ಬಿದ್ದು ಹಾನಿಯಾಗಿದೆ. ತ್ಯಾಗರಾಜ ಕಾಲೋನಿಯ ಖಾದರ್, ಗದ್ದುಗೆ ಬಳಿಯ ಆಶಿಯಾ ಹಾಗೂ ಚಾಮುಂಡೇಶ್ವರಿ ನಗರದಲ್ಲಿಯೂ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ನಗರಸಭಾ ಆಯುಕ್ತೆ ಬಿ. ಶುಭ ಹಾಗೂ ಸಿಬ್ಬಂದಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಬೊಯಿಕೇರಿ ಬಳಿ ಹೆದ್ದಾರಿ ಬಳಿ ಹಾನಿಯಾಗಿದ್ದರೆ, ಕಗ್ಗೋಡ್ಲು - ಕಡಗದಾಳು ರಸ್ತೆಗೆ ಅಡ್ಡಲಾಗಿ ಮರ ಬಿದ್ದು ವಾಹನಗಳಿಗೆ ಅಡಚಣೆ ಎದುರಾಗಿದೆ.
ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದ ಇಂದು ಬೆಳಗಿನ 8ಗಂಟೆಯವರೆಗೆ ಒಟ್ಟು 2.2 ಇಂಚುಗಳಷ್ಟು ಮಳೆ ಸುರಿದಿದೆ. ಇಂದು ಬೆಳಗಿನಿಂದಲೇ ಮಳೆ ಮುಂದುವರೆದಿದ್ದು ಶಾಲಾ - ಕಾಲೇಜು ಮಕ್ಕಳಿಗೆ ರಜೆ ನೀಡಲಾಗಿತ್ತು. ಯಾವದೇ ಹಾನಿ ಬಗ್ಗೆ ವರದಿಯಾಗಿಲ್ಲ.
ಸುಂಟಿಕೊಪ್ಪ : ಪುನರ್ವಸು ಮಳೆಯ ಆರ್ಭಟ ಅಧಿಕವಾಗಿದ್ದು ಮಳೆ ಗಾಳಿಗೆ ಮರಗಳು ವಿದ್ಯುತ್ ತಂತಿಗಳು ಧರೆಗೆ ಉರುಳಿ ಬಿದ್ದಿದೆ. ಮಳೆಯಿಂದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಬರೆ ಮನೆಯ ತಡೆಗೋಡೆ ಕುಸಿದು ಬಿದ್ದ ಬಗ್ಗೆ ವರದಿಯಾಗಿದೆ.
ಸುಂಟಿಕೊಪ್ಪ ಕೆಂಚೆಟ್ಟಿ ಬಳಿ ವಿದ್ಯುತ್ ಕಂಬಗಳು ಮರಬಿದ್ದು ಹಾನಿಯಾಗಿದೆ. ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪಿಯ 7ನೇ ಮೈಲು ನಿವಾಸಿ ಜಯಾನಂದ ಅವರ ಮನೆಯ ಸಮೀಪದ ಬರೆಯು ಕುಸಿದು ಬಿದ್ದ ಪರಿಣಾಮ ಮನೆಯ ಅಡುಗೆ ಕೋಣೆಯ ಗೋಡೆ ಹಾನಿಗೊಂಡಿದೆ. ಇದರಿಂದ ರೂ. 40,000 ಕ್ಕೂ ಮಿಕ್ಕಿ ನಷ್ಟವುಂಟಾಗಿದೆ.
(ಮೊದಲ ಪುಟದಿಂದ) ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಭೇಟಿ ನೀಡಿ ಮಹಜರು ನಡೆಸಿ ತಹಶೀಲ್ಧಾರರಿಗೆ ವರದಿ ನೀಡಿದ್ದಾರೆ. ಮಾಜಿ ಗ್ರಾ.ಪಂ.ಅಧ್ಯಕ್ಷ ಸೋಮಯ್ಯ ಮತ್ತಿತರರು ತೆರಳಿ ಪರಿಶೀಲಿಸಿದರು.
ಹರದೂರು ಹೊಳೆ ತುಂಬಿ ಹರಿಯುತ್ತಿದ್ದು ಹಾರಂಗಿ ಜಲಾಶಯದ ಹಿನ್ನೀರು ನಾಕೂರು, ಹೆರೂರು,ಹಾದ್ರೆ ಹೆರೂರು, ಕಲ್ಲೂರು, ಹಾರಂಗಿ ಯಡವಾರೆ ಹರದೂರು ವಿಭಾಗಕ್ಕೆ ವ್ಯಾಪ್ತಿಸಿದೆ. ಹರದೂರು ಹೊಳೆಯ ವಿಹಂಗಮ ನೋಟ ವೀಕ್ಷಿಸಲು ಸುತ್ತ ಮುತ್ತಲಿನ ಗ್ರಾಮಸ್ಥರು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.
ಉತ್ತಮ ಮಳೆಯಾಗುತ್ತಿರು ವದರಿಂದ ರೈತರಿಗೆ ಭತ್ತದ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತಿದ್ದು ಕಾಫಿ ಬೆಳೆಗಾರರು ಕಾರ್ಮಿಕರಿಗೆ ಕೆಲಸ ನೀಡದೆ ರಜೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ನಾಪೆÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯಲ್ಲಿ ತಾ. 8ರ ಸಂಜೆಯಿಂದ 9ರ ಮಧ್ಯಾಹ್ನದ ವರೆಗೂ ಮಳೆಯ ಪ್ರಮಾಣ ಕಡಿಮೆಯಿದ್ದ ಕಾರಣ ನದಿ, ಹೊಳೆ, ಹಳ್ಳಕೊಳ್ಳ, ತೋಡುಗಳಲ್ಲಿ ನೀರಿನ ಮಟ್ಟದಲ್ಲಿ ಇಳಿಕೆಯಾಗಿದೆ. ಆದರೆ ಸೋಮವಾರ ಮಧ್ಯಾಹ್ನದಿಂದ ಮಳೆಯು ರಭಸದಿಂದ ಸುರಿಯುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ.
ಮಳೆಯ ಕಾರಣದಿಂದ ಪ್ರವಾಹದ ಮಟ್ಟ ಏರಿಕೆಯಾಗುವ ಸಂಭವವಿದ್ದು, ಇದೇ ರೀತಿ ಮುಂದುವರಿದಲ್ಲಿ ಅಲ್ಲಲ್ಲಿ ರಸ್ತೆ ಸಂಚಾರಕ್ಕೂ ತಡೆ ಉಂಟಾಗುವ ಭೀತಿ ಮೂಡಿದೆ. ಉಳಿದಂತೆ ಯಾವದೇ ಅನಾಹುತ ಸಂಭವಹಿಸಿದ ಬಗ್ಗೆ ವರದಿಯಾಗಿಲ್ಲ.
ಸೋಮವಾರಪೇಟೆ: ಕಳೆದ ಮೂರು ದಿನಗಳಿಂದ ಸೋಮವಾರ ಪೇಟೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಣ್ಣಪುಟ್ಟ ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿವೆ.
ಸಂತೆ ದಿನವಾದ ಸೋಮವಾರ ಭಾರೀ ಮಳೆಯಾದ ಹಿನ್ನೆಲೆ ಸಂತೆ ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದ್ದು, ವರ್ತಕರು ಹಾಗೂ ಗ್ರಾಹಕರು ಪರದಾಡುವಂತಾಯಿತು. ಮಾರುಕಟ್ಟೆಗೆ ತೆರಳುವ ಕಡೆಗಳಲ್ಲಿ ಕೆಸರಿನ ಕೊಂಪೆ ನಿರ್ಮಾಣವಾಗಿ ಸಮಸ್ಯೆಯಾಯಿತು.
ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿಯಲ್ಲಿ ದಿನದ 24 ಗಂಟೆಗಳ ಕಾಲವೂ ಮಳೆ ಸುರಿಯುತ್ತಿದ್ದು, ಬೆಟ್ಟತಪ್ಪಲಿನಲ್ಲಿ ಹರಿಯುವ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಪರಿಣಾಮ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದಲ್ಲಿ ನೀರು ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದ್ದು, ತನ್ನ ಸೌಂದರ್ಯವನ್ನು ಇಮ್ಮಡಿ ಗೊಳಿಸಿಕೊಂಡಿದೆ. ಇದರೊಂದಿಗೆ ಹೆಗ್ಗಡಮನೆ, ಕೊತ್ನಳ್ಳಿ, ಕುಡಿಗಾಣ, ಬೆಟ್ಟದಳ್ಳಿ, ಶಾಂತಳ್ಳಿ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಮಳೆ ಯಾಗುತ್ತಿದ್ದು, ಕೃಷಿ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ವಿಭಾಗಕ್ಕೆ 2.35 ಇಂಚು, ಕೊಡ್ಲಿಪೇಟೆಗೆ 1.25 ಇಂಚು, ಶಾಂತಳ್ಳಿಗೆ 3.70, ಶನಿವಾರಸಂತೆಗೆ 2.95 ಇಂಚು, ಸುಂಟಿಕೊಪ್ಪಕ್ಕೆ 1.69 ಇಂಚು, ಕುಶಾಲನಗರ ಹೋಬಳಿಗೆ 0.72 ಇಂಚು ಮಳೆಯಾದ ಬಗ್ಗೆ ವರದಿಯಾಗಿದೆ.
ಅತಿವೃಷ್ಟಿ : ಪರಿಹಾರಕ್ಕೆ ಸಲಹೆ
ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಜನರು ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಅತಿವೃಷ್ಟಿ ನಿಭಾಯಿಸಲು ಸರ್ಕಾರ ಹಣ ಬಿಡುಗಡೆ ಮಾಡಿದ್ದು, ಪರಿಹಾರ ಕಾರ್ಯವನ್ನು ಚುರುಕುಗೊಳಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್ ತಿಳಿಸಿದ್ದಾರೆ.
ಈಗಾಗಲೇ ಭಾರೀ ಮಳೆಗೆ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.ಆದ್ದರಿಂದ ತುರ್ತು ಕ್ರಮಕೈಗೊಳ್ಳಬೇಕು. ಸಮರೋಪಾದಿ ಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರಿಗೆ ಬಿ.ಎ.ಹರೀಶ್ ತಿಳಿಸಿದ್ದಾರೆ.
ಕುಶಾಲನಗರ: ಕಾವೇರಿ ನದಿ ಪಾತ್ರದಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಬಿರುಸಿನ ಮಳೆ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಬಹುತೇಕ ತುಂಬಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ. ಕುಶಾಲನಗರ ಕೊಪ್ಪ ಗಡಿಭಾಗದಲ್ಲಿರುವ ಕಾವೇರಿ ನದಿ ಸೇತುವೆ ಕೆಳಭಾಗದಲ್ಲಿ ನದಿಯಲ್ಲಿ 20 ಅಡಿ ಎತ್ತರಕ್ಕೆ ನೀರು ಹರಿಯುತ್ತಿದೆ.
ಕರಿಕೆ: ಕರಿಕೆ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಎಳ್ಳುಕೊಚ್ಚಿ- ಪೊಂಗಾನ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನದಿ ಬದಿ ಕುಸಿದಿದ್ದು ಸಂಪರ್ಕ ಕಡಿತಗೊಂಡಿದೆ.ಈ ಭಾಗದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿದ್ದು ತುರ್ತು ಸಂದರ್ಭದಲ್ಲಿ ವಾಹನ ಸಂಚರಿಸುವದು ಕಷ್ಟ ಕರವಾಗಿದ್ದು ಕಾಲ್ನಡಿಗೆಯಲ್ಲಿ ಸಂಚರಿಸಬೇಕಿದೆ.
ಶ್ರೀಮಂಗಲ: ಶ್ರೀಮಂಗಲ, ಬಿರುನಾಣಿ, ಟಿ. ಶೆಟ್ಟಿಗೇರಿ, ಬಿ.ಶೆಟ್ಟಿಗೇರಿ, ಹುದಿಕೇರಿ ವ್ಯಾಪ್ತಿಯಲ್ಲೂ ಮಧ್ಯಾಹ್ನ ದವರೆಗೆ ತಗ್ಗಿದ್ದ ಮಳೆ ಅಬ್ಬರ. ಸಂಜೆ ವೇಳೆಗೆ ಜೋರಾದ ಪರಿಣಾಮ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಬಿರುನಾಣಿ, ಶ್ರೀಮಂಗಲ, ಹುದಿಕೇರಿ, ಬಿ.ಶೆಟ್ಟಿಗೇರಿ,ಟಿ. ಶೆಟ್ಟಿಗೇರಿ,ಕುಟ್ಟ ವ್ಯಾಪ್ತಿಯಲ್ಲಿ ತೀವ್ರ ಗೊಂಡ ಮಳೆ, ಎಡೆಬಿಡದೆ ಸುರಿಯುತ್ತಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸಿದ್ದಾಪುರ: ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮಧ್ಯಾಹ್ನದ ಬಳಿಕ ಮಳೆ ಬಿರುಸುಗೊಂಡಿದೆ. ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆಯಾಗಿದೆ. ನದಿ ದಡದಲ್ಲಿ ಬರೆ ಕುಸಿತ ಸಂಭವಿಸುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ.
ಹಾರಂಗಿ: ಹಾರಂಗಿ ಅಣೆಕಟ್ಟೆಗೆ ಒಳ ಹರಿವು ಹೆಚ್ಚ್ಚಾದ ಪರಿಣಾಮ ಅಣೆಕಟ್ಟಿಯಿಂದ 16ಸಾವಿರ ಕ್ಯೂಸಕ್ಸ್ ನೀರು ಬಿಡಲಾದ ಪರಿಣಾಮ ದಿಂದ ಅಣೆಕಟ್ಟೆಯ ಎದುರು ಇರುವ ಸೇತುವೆ ಮೇಲೆ ನೀರು ಹರಿಯುತ್ತಿರು ವದರಿಂದ ಕುಶಾಲನಗರ, ಸೋಮವಾರಪೇಟೆ ಸಂಪರ್ಕ ಕಡಿತಗೊಂಡಿತು. ಹಾರಂಗಿ ನದಿಯ ನೀರಿನ ಮಟ್ಟ ಹೆಚ್ಚಿದುದರಿಂದ, ಕೂಡಿಗೆ ಕಣಿವೆ ಮಧ್ಯ ರಾಜ್ಯ ಹೆದ್ದಾರಿಗೆ ಹೊಂದಿ ಕೊಂಡಿರುವ ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಗದ್ದೆಗಳಲ್ಲಿ ಬೆಳೆ ನೀರಿನಲ್ಲಿ ಮುಳುಗಿದೆ.
ಸೋಮವಾರಪೇಟೆ: ಭಾರೀ ಮಳೆಗೆ ಚೌಡ್ಲು ಗ್ರಾಪಂ ವ್ಯಾಪ್ತಿಯ ಆಲೇಕಟ್ಟೆ ರಸ್ತೆಯಿಂದ ಗಾಂಧಿನಗರಕ್ಕೆ ತೆರಳುವ ರಸ್ತೆಯಲ್ಲಿ ಬರೆ ಕುಸಿತ ಸಂಭವಿಸಿದೆ.
ಆಲೇಕಟ್ಟೆಯ ಅಬ್ದುಲ್ ಅಜೀಜ್ ಎಂಬವರ ಮನೆಯ ಸಮೀಪ ಬರೆ ಕುಸಿತಗೊಂಡಿದ್ದು, ಮುಂದೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ರಸ್ತೆಗೆ ತಡೆಗೋಡೆ ಕಟ್ಟುವಂತೆ ಸ್ಥಳೀಯರು ಆಗ್ರಹಿಸಿದ್ದರೂ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿದ ಪರಿಣಾಮ ಬರೆಕುಸಿತಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.