ಮಡಿಕೇರಿ, ಜು. 9: ರಾಜ್ಯ ಸಮ್ಮಿಶ್ರ ಸರ್ಕಾರವು ಮಂಡಿಸಿದ ಬಜೆಟ್‍ನಲ್ಲಿ ರೈತಬೆಳೆಗಾರರ ಪರವಾಗಿ ನಿಲುವು ತೆಗೆದು ಕೊಂಡಿರುವದನ್ನು ಮತ್ತು ಹಿಂದಿನ ಬಜೆಟ್‍ನಲ್ಲಿ ಮಂಡಿಸಿರುವ ಯೋಜನೆಗಳನ್ನು ಮುಂದುವರೆಸಿರುವದನ್ನು ಕರ್ನಾಟಕ ಬೆಳೆಗಾರರ ಒಕ್ಕೂಟವು ಹಾಸನ, ಚಿಕ್ಕಮಗಳೂರು ವiತ್ತು ಕೊಡಗು ಜಿಲ್ಲೆಯ ಬೆಳೆಗಾರರ ಪರವಾಗಿ ಸ್ವಾಗತಿಸುತ್ತದೆ. ಸಾಲಮನ್ನಾ ಯೋಜನೆಯಡಿ ಎಲ್ಲಾ ರೈತ ಬೆಳೆಗಾರರನ್ನು ಸೇರಿಸಿರುವದು ಶ್ಲಾಘನೀಯ ಹಾಗೂ ಕೃಷಿ ಸಾಲ ಮತ್ತು ಕಿಸಾನ್‍ಕ್ರೆಡಿಟ್ ಸಾಲಗಳನ್ನು ಸಕಾಲಕ್ಕೆ ಮರು ಪಾವತಿಸಿದ ರೈತ ಬೆಳೆಗಾರರಿಗೆ 25,000/- ರೂ.ಗಳನ್ನು ಪ್ರೋತ್ಸಾಹ ಧನವಾಗಿ ನೀಡುತ್ತಿರುವದು ಒಳ್ಳೆಯ ತೀರ್ಮಾನವಾಗಿದೆ. ಹಿಂದಿನ ಯಾವ ಬಜೆಟ್‍ನಲ್ಲೂ ಈ ರೀತಿ ಮಾಡಿರಲಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ ಪಡೆದ ಸಾಲವನ್ನು ಆಯಾ ವರ್ಷ ಕಟ್ಟದಿದ್ದಲ್ಲಿ ಅವರಿಗೆ, ಶೇ. 11.25 ಬಡ್ಡಿಯನ್ನು ವಿಧಿಸಲಾಗುವದರಿಂದ, ರೈತ ಬೆಳೆಗಾರರು ಒಡವೆಗಳನ್ನು ಅಡವಿಟ್ಟು, ಹಾಗೂ ಕೈಸಾಲವನ್ನು ಪಡೆದು ಕಟ್ಟಿರುವದರಿಂದ, ಇವರುಗಳು ಪಡೆದಿರುವ ಸಾಲವನ್ನು ಸಹಾ ಮನ್ನಾ ಮಾಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ. ಕಾಫಿ ಬೆಳೆ ಹಾಗೂ ಕಾಳುಮೆಣಸಿನ ಉತ್ಪಾದನಾ ವೆಚ್ಚವು ಅಧಿಕವಾಗಿದ್ದು, ಬೆಲೆ ಇಳಿಮುಖ ಗೊಂಡಿದ್ದು, 1994 ರಲ್ಲಿ ಇದ್ದ ಅತೀ ಕಡಿಮೆ ಬೆಲೆ ಈಗ ದೊರೆಯುತ್ತಿದೆ. ನಿರ್ವಹಣಾ ವೆಚ್ಚ ಅಧಿಕಗೊಂಡು ಕಾಫಿ ಉತ್ಪಾದನೆ ಕುಂಠಿತವಾಗಿದೆ. ಕಾಫಿ ಉದ್ಯಮ ಸುಮಾರು 15 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರಿಗೆ ಉದ್ಯೋಗಾ ವಕಾಶವನ್ನು ಕಲ್ಪಿಸಿಕೊಟ್ಟಿದ್ದು, ಉಧ್ಯಮ ನಷ್ಟದತ್ತ ಸಾಗಿದ್ದಲ್ಲಿ ಕೂಲಿ ಕಾರ್ಮಿಕರ ಬದುಕು ಅತಂತ್ರವಾಗಲಿದೆ. ಈಗಾಗಲೇ ಉತ್ಪಾದನಾ ವೆಚ್ಚ ಅಧಿಕವಾಗಿರುವದರಿಂದ ಕಾಫಿ ಬೆಳೆಗಾರರು ಪ್ರತಿ ಅರೇಬಿಕಾ ಚೆರ್ರಿ ಚೀಲದ ಮೇಲೆ 3500/- ರೂ. ಗಳ ಹಾಗೂ ರೋಬೊಸ್ಟಾ ಚೆರ್ರಿ ಪ್ರತಿ ಚೀಲಕ್ಕೆ 1500/- ನಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಕೇಂದ್ರ ವಾಣಿಜ್ಯ ಸಚಿವಾಲಯದ ಗಮನಕ್ಕೆ ತಂದು ಕಾಫಿ ಮತ್ತು ಕಾಳುಮೆಣಸಿಗೆ ಸೂಕ್ತ ಬೆಲೆ ದೊರಕಿಸಿಕೊಡುವಲ್ಲಿ ಸಹಕರಿಸ ಬೇಕಾಗಿ ಮನವಿ ಸಲ್ಲಿಸುವದಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯು.ಎಂ. ತೀರ್ಥ ಮಲ್ಲೇಶ್ ತಿಳಿಸಿದ್ದಾರೆ.