ಶ್ರೀಮಂಗಲ, ಜು. 9: ಪೊನ್ನಂಪೇಟೆ-ಹುದಿಕೇರಿ ಮುಖ್ಯ ಹೆದ್ದಾರಿಯ ಬೇಗೂರು ಕೊಲ್ಲಿ ಸಮೀಪ ಪ್ರವಾಸಿ ವಿದ್ಯಾರ್ಥಿಗಳ ಕಾರು ಮರಕ್ಕೆ ಅಪ್ಪಳಿಸಿ ಹಳ್ಳಕ್ಕೆ ಬಿದ್ದು ಕಾರಿನಲ್ಲಿದ್ದ 6 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಗಾಯಗೊಂಡ ವಿದ್ಯಾರ್ಥಿಗಳು ಬೆಂಗಳೂರು ಮೂಲದವರಾಗಿದ್ದು, ಬೆಂಗಳೂರಿನ ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಮತ್ತು ಬಿಎಸ್‍ಸಿ ವ್ಯಾಸಂಗ ಮಾಡುತ್ತಿರು ವವರು ಎಂದು ತಿಳಿದು ಬಂದಿದ್ದು, ಗಾಯಗೊಂಡಿರುವ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಡ್ರೈವಸಿ ಟ್ರ್ಯಾವಲ್ ಸಂಸ್ಥೆಗೆ ಸೇರಿದ ಟಾಟಾ ಟಿಯೋಗ ಕಾರಿನಲ್ಲಿ (ಕೆಎ 03 ಎಎಫ್ 2245) ಕೇರಳದ ವಯನಾಡುವಿಗೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಸಿಲ್ವರ್ ಓಕ್ ಮರಕ್ಕೆ ಅಪ್ಪಳಿಸಿ ಸಮೀಪದ ಹಳ್ಳಕ್ಕೆ ಕಾರು ಉರುಳಿ ಬಿದ್ದಿದೆ. ಅಪಘಾತದ ರಭಸಕ್ಕೆ ಮರ ಒಂದು ಬದಿಗೆ ಸಂಪೂರ್ಣ ವಾಲಿಕೊಂಡಿದ್ದು, ಕಾರು ಸಹ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆಯಲ್ಲಿ ಬಾರ್ಗವ್, ತಪನ್, ಜಯಂತ್, ರಕ್ಷಿತ್, ಗಣೇಶ್ ಹಾಗೂ ಚಾಲನೆ ಮಾಡುತ್ತಿದ್ದ ಮನು ಗಾಯಗೊಂಡ ವಿದ್ಯಾರ್ಥಿಗಳು. ಗಾಯಗೊಂಡವರನ್ನು ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ಹೆಚ್.ವೈ. ರಾಜು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.