ಸೋಮವಾರಪೇಟೆ, ಜು. 9: 1968ರಲ್ಲಿ ರಚನೆಯಾದ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘವು ಪ್ರಸಕ್ತ ಸಾಲಿಗೆ 50 ವರ್ಷಗಳನ್ನು ಪೂರೈಸಿದ್ದು, ಅದರ ಸವಿನೆನಪಿಗಾಗಿ ಸುವರ್ಣ ಮಹೋತ್ಸವ ಮತ್ತು ರೂ. 40ಲಕ್ಷ ವೆಚ್ಚದಲ್ಲಿ ಸುವರ್ಣ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 1968ರಲ್ಲಿ ಸಮಾಜದ ಹಿರಿಯರು ತೀರ್ಮಾನಿಸಿ ಒಕ್ಕಲಿಗರ ಸಂಘವನ್ನು ಹುಟ್ಟುಹಾಕಿದ್ದು, ಇಂದು ಬೃಹದಾಕಾರವಾಗಿ ಬೆಳೆದಿದೆ. ಸಂಘದಿಂದ ಸಮುದಾಯ ಭವನ, ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು, ಜನಾಂಗ ಬಾಂಧವರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

2018ಕ್ಕೆ ಸಂಘಕ್ಕೆ 50 ವರ್ಷಗಳು ತುಂಬಲಿದ್ದು, ಇದರ ಸವಿನೆನಪಿಗಾಗಿ ಈಗಿರುವ ಹಳೆ ಕಟ್ಟಡವನ್ನು ಒಡೆದು ಸುಮಾರು 40ಲಕ್ಷ ವೆಚ್ಚದಲ್ಲಿ ನೂತನ ಸುವರ್ಣ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯ ಕ್ರಮವನ್ನು ಆಯೋಜಿಸಲಾಗಿದ್ದು, ಇದಕ್ಕಾಗಿ ಸ್ಮರಣ ಸಂಚಿಕೆಯನ್ನು ಹೊರತರಲು ಚಿಂತಿಸಲಾಗಿದೆ ಎಂದರು.

ಸ್ಮರಣ ಸಂಚಿಕೆಗೆ ಕೊಡಗಿನ ಇತಿಹಾಸ, ಜನಾಂಗದ ಮೇಲೆ ಬೆಳಕುಚೆಲ್ಲುವ ಲೇಖನ ಸೇರಿದಂತೆ ಸಾಮಾಜಿಕವಾಗಿರುವ ಲೇಖನಗಳನ್ನು ಆಹ್ವಾನಿಸಲಾಗುವದು. ಸಂಘವು ಈ 50 ವರ್ಷದಲ್ಲಿ ಬೆಳೆದುಬಂದ ಬಗೆಯನ್ನು ದಾಖಲಿಸಲಾಗುವದು ಎಂದು ಎ.ಆರ್. ಮುತ್ತಣ್ಣ ಮಾಹಿತಿ ಒದಗಿಸಿದರು.

ಸುವರ್ಣ ಮಹೋತ್ಸವದಲ್ಲಿ ಸಮುದಾಯದ ಏಳಿಗೆಗೆ ಶ್ರಮಿಸಿದ ದಾನಿಗಳು, ರಾಜ್ಯ-ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿರುವ ಜನಾಂಗದ ಸಾಧಕರು, ರಾಜಕೀಯ ಮುಖಂಡರು, ಮಾಜೀ ಹಾಗೂ ಹಾಲಿ ನಿರ್ದೇಶಕರು ಗಳನ್ನು ಸನ್ಮಾನಿಸಲಾಗುವದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಜನಾಂಗ ಬಾಂಧವರಿಗೆ ವಿವಿಧ ಕ್ರೀಡಾಕೂಟ, ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಪ್ರತಿ ನಿರ್ದೇಶಕರೂ ಸುವರ್ಣ ಮಹೋತ್ಸವಕ್ಕಾಗಿ 10 ಸಾವಿರ, ಪ್ರತಿ ಸದಸ್ಯರೂ ಕನಿಷ್ಟ 1 ಸಾವಿರ ವಂತಿಕೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ಮುತ್ತಣ್ಣ ಹೇಳಿದರು.

ಗೋಷ್ಠಿಯಲ್ಲಿದ್ದ ಸಂಘದ ನಿರ್ದೇಶಕ ಹಾಗೂ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಇಂದು ಒಕ್ಕಲಿಗರ ಸಂಘ ಬೃಹತ್ತಾಗಿ ಬೆಳೆಯಲು ಹಿರಿಯರ ದೂರದೃಷ್ಟಿತ್ವ ಹಾಗೂ ಆಡಳಿತ ಮಂಡಳಿಯವರು, ದಾನಿಗಳ ಸಹಕಾರ ಕಾರಣವಾಗಿದೆ. ಇತರ ಸಮುದಾಯದವರೂ ಸಹ ಒಕ್ಕಲಿಗರ ಸಂಘದ ಕಟ್ಟಡಗಳಿಗೆ ನೆರವು ಒದಗಿಸಿದ್ದಾರೆ. ಜನಪ್ರತಿನಿಧಿಗಳೂ ಸಹ ಸಹಕಾರ ನೀಡಿದ್ದರಿಂದ ಸಂಘದ ಅಡಿಯಲ್ಲಿ ವಿದ್ಯಾಸಂಸ್ಥೆಯನ್ನೂ ಸ್ಥಾಪಿಸಲಾಗಿದೆ ಎಂದರು.

ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ 800ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಳೆದ 2 ವರ್ಷಗಳಲ್ಲಿ ಶೇ.100 ಫಲಿತಾಂಶ ಬಂದಿದೆ ಎಂದ ಮೇದಪ್ಪ ಅವರು, ಸುವರ್ಣ ಮಹೋತ್ಸವ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಿ.ಕೆ. ರಾಘವ, ಕಾರ್ಯದರ್ಶಿ ಗಣಪತಿ, ವಿದ್ಯಾಸಂಸ್ಥೆಯ ಪ್ರತಿನಿಧಿ ಜಗದೀಶ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಬಸಪ್ಪ, ನಿರ್ದೇಶಕ ರಾಜಪ್ಪ, ಲಿಂಗರಾಜು ಅವರುಗಳು ಉಪಸ್ಥಿತರಿದ್ದರು.