ವೀರಾಜಪೇಟೆ, ಜು. 9: ಪಂಚಾಯಿತಿ ಸೇವೆಯಲ್ಲಿ ಕರ್ತವ್ಯ ಲೋಪ, ಕಚೇರಿಗೆ ನಿರಂತರ ಗೈರು ಹಾಜರಿಯ ಆರೋಪದ ಮೇರೆ ಆರ್ಜಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸಿ.ಕೆ. ರಾಜೇಂದ್ರ ಅವರನ್ನು ಜಿಲ್ಲಾ ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಶಿಸ್ತು ಪ್ರಾಧಿಕಾರ ತಕ್ಷಣದಿಂದ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಆರ್ಜಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿರುವ ರಾಜೇಂದ್ರ ಅವರು ಮಾರ್ಚ್ 14, 16, ಹಾಗೂ 19 ರಂದು ರಜೆ ಅರ್ಜಿ ಸಲ್ಲಿಸದೆ ಚುನಾವಣಾ ಸಂದರ್ಭದಲ್ಲಿ ನಿಯಂತ್ರಣಾಧಿಕಾರಿಗಳಿಗೂ ಮಾಹಿತಿ ನೀಡದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿನ ವಸತಿ, ಎಂ.ಜಿ.ಎನ್.ಆರ್.ಜಿ.ಎ. ಯೋಜನೆಗಳು ಸೇರಿದಂತೆ ಇತರ ಅಭಿವೃದ್ಧಿ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಅನುಷ್ಠಾನಗೊಳಿಸಿ ಪ್ರಗತಿ ಸಾಧಿಸಲು ವಿಳಂಬಕ್ಕೆ ಕಾರಣರಾಗಿರುವದಕ್ಕೆ ಸಂಬಂಧಿಸಿದಂತೆ ನೋಟೀಸ್ ಜಾರಿ ಮಾಡಿ ಕಾರಣ ಕೇಳಲಾಗಿತ್ತು. ನೋಟೀಸ್ ನೀಡಿಯೂ ಒಬ್ಬ ಗ್ರಾಮ ಮಟ್ಟದ ಅಧಿಕಾರಿ ತಮ್ಮ ನಡಾವಳಿಕೆಯನ್ನು ಬದಲಾಯಿಸಿಕೊಳ್ಳದೆ ಜೂನ್ ತಿಂಗಳಲ್ಲಿ ಕೇವಲ 9 ದಿನ ಮಾತ್ರ ಕರ್ತವ್ಯಕ್ಕೆ ಹಾಜರಾಗಿರುವದು ಇ ಹಾಜರಾತಿಯಲ್ಲಿ ಕಂಡು ಬಂದಿದೆ. ಸರಕಾರದ ಕೆಲಸ ನಿರ್ವಹಣೆಯಲ್ಲಿ

ನಿರ್ಲಕ್ಷ್ಯತನ ಹಾಗೂ ಸರಕಾರಿ ನೌಕರರಿಗೆ ತರವಲ್ಲದ ರೀತಿ ವರ್ತಿಸಿ ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳನ್ನು ಉಲ್ಲಂಘಿಸಿರುವದು ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇವಾ ಸಿವಿಲ್ ನಿಯಮಗಳು 1957ರ ನಿಯಮ 10ರ ಅನ್ವಯ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಅಮಾನತಿನಲ್ಲಿಡಲು ಲಿಖಿತ ಆದೇಶ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾ. 7 ರಂದು ನಡೆದ ಆರ್ಜಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಸಿ.ಕೆ. ರಾಜೇಂದ್ರ ಅವರ ಸೇವೆಯಲ್ಲಿ ಕರ್ತವ್ಯ ಲೋಪ, ಕಚೇರಿಗೆ ನಿರಂತರ ಗೈರು ಹಾಜರಾತಿ, ಫಲಾನುಭವಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸೌಲಭ್ಯಗಳನ್ನು ಒದಗಿಸದಿರುವದರ ವಿರುದ್ಧ 7 ಮಂದಿ ಸದಸ್ಯರುಗಳು ಸಭಾತ್ಯಾಗ ಮಾಡಿ ಸಭೆಯನ್ನು ಬಹಿಷ್ಕರಿಸಿ ಜಿಲ್ಲಾಧಿಕಾರಿಯವರಿಗೂ ದೂರು ನೀಡಿದ್ದರು. ಕಳೆದ ನಾಲ್ಕು ತಿಂಗಳುಗಳಿಂದ ಗ್ರಾಮ ಪಂಚಾಯಿತಿ ಸಭೆ ನಡೆಸಿಲ್ಲವೆಂದು ಸದಸ್ಯರುಗಳು ದೂರು ನೀಡಿದನ್ನು ಇಲ್ಲಿ ಸ್ಮರಿಸಬಹುದು.