ನಿರ್ಭಯಾ ಪ್ರಕರಣ : ಗಲ್ಲು ಶಿಕ್ಷೆ ಖಾಯಂ
ನವದೆಹಲಿ, ಜು.9 : ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಗಲ್ಲು ಶಿಕ್ಷೆ ಖಾಯಂಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಆರ್.ಭಾನುಮತಿ ಹಾಗೂ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠ, ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಎಂದು ಕೋರಿ ಮೂವರು ಅಪರಾಧಿಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಇಂದು ವಜಾಗೊಳಿಸಿದೆ. ಒಟ್ಟು ನಾಲ್ಕು ಅಪರಾಧಿಗಳ ಪೈಕಿ ಮೂವರು ಅಪರಾಧಿಗಳಾದ ಮುಕೇಶ್ (31), ಪವನ್ ಗುಪ್ತ(31), ವಿನಯ್ ಶರ್ಮಾ (25) ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. 2012ರಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಅಮಾನುಷ ಕೊಲೆ ಪ್ರಕರಣ ಸಂಪೂರ್ಣ ದೇಶವನ್ನು ಬೆಚ್ಚಿಬೀಳಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಿತ್ತು.
ದೊಡ್ಡ ಮೊಬೈಲ್ ಫ್ಯಾಕ್ಟರಿ ಉದ್ಘಾಟಿಸಿದ ಮೋದಿ
ನೋಯ್ಡಾ, ಜು.9 : ನೋಯ್ಡಾದಲ್ಲಿನ ವಿಶ್ವದ ಅತಿ ದೊಡ್ಡ ಮೊಬೈಲ್ ಫ್ಯಾಕ್ಟರಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್-ಜೆ-ಇನ್ ಜಂಟಿಯಾಗಿ ಉದ್ಘಾಟಿಸಿದ್ದಾರೆ. ಸುಮಾರು 35 ಎಕರೆಯ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್, ಮೊಬೈಲ್ ಫ್ಯಾಕ್ಟರಿ ವಿಶ್ವದ ಅತಿ ದೊಡ್ಡ ಮೊಬೈಲ್ ಫ್ಯಾಕ್ಟರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 2020 ರ ವೇಳೆಗೆ ಪ್ರತಿ ತಿಂಗಳಿಗೆ 10 ಮಿಲಿಯನ್ ಯುನಿಟ್ ಗಳಷ್ಟು ಮೊಬೈಲ್ ಗಳು ಈ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗಲಿವೆ. ನೋಯ್ಡಾದಲ್ಲಿ ಉದ್ಘಾಟನೆಯಾಗಿರುವ ಮೊಬೈಲ್ ಉತ್ಪಾದನಾ ಘಟಕ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. ನೋಯ್ಡಾದ ಸೆಕ್ಟರ್ 81 ರಲ್ಲಿ 1990 ರಲ್ಲಿ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಉಪಕರಣಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗಿತ್ತು ಈ ಬಳಿಕ 1997 ರಲ್ಲಿ ಸ್ಯಾಮ್ ಸಂಗ್ ಟಿವಿ ಉತ್ಪಾದನೆಯನ್ನೂ ಪ್ರಾರಂಭಿಸಲಾಯಿತು. ಈಗಿರುವ ಮೊಬೈಲ್ ಉತ್ಪಾದನಾ ಘಟಕವನ್ನು 2005 ರಲ್ಲಿ ಪ್ರಾರಂಭಿಲಾಗಿದ್ದು, ಮತ್ತಷ್ಟು ಅಭಿವೃದ್ಧಿಗೊಳಿಸಲಾಗಿದೆ.
ಪಶ್ಚಿಮ ಜಪಾನ್ ಮಳೆಗೆ 100 ಬಲಿ
ಕುರಾಶಿಕಿ, ಜು.9 : ಪಶ್ಚಿಮ ಜಪಾನ್ ನಲ್ಲಿ ಭಾರೀ ಮಳೆಯಿಂದ 100 ಮಂದಿ ಸಾವನ್ನಪ್ಪಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಕಡೆಗಳಲ್ಲಿನ ಪ್ರವಾಹದಿಂದಾಗಿ 87 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಈ ಪೈಕಿ 13 ಜನರನ್ನು ಕಂಡುಹಿಡಿಯಲಾಗಿದ್ದು, ಡಜನ್ ಗಿಂತಲೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿ ಯೊಶಿಹಿದಿ ಸುಗಾ ತಿಳಿಸಿದ್ದಾರೆ. ಸುಮಾರು 2 ಮಿಲಿಯನ್ ನಷ್ಟು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಅನೇಕ ಆಡಳಿತಗಾರರು ಭೂ ಕುಸಿತದ ಎಚ್ಚರಿಕೆ ನೀಡಿದ್ದಾರೆ. ಆಸ್ಪತ್ರೆ ಸೇರಿದಂತೆ ಕಟ್ಟಡಗಳು ಸ್ವೊಲೆನ್ ನದಿ ನೀರಿನಿಂದ ಆವೃತ್ತಗೊಂಡಿದ್ದು, ರಕ್ಷಣಾ ಕಾರ್ಯಕ್ಕಾಗಿ ಹೆಲಿಕಾಪ್ಟರ್ ಹಾಗೂ ಬೋಟ್ ಗಳನ್ನು ಮಿಲಿಟರಿ ಸಿಬ್ಬಂದಿ ಬಳಸುತ್ತಿದ್ದಾರೆ. ಮಾಬಿ ಮೆಮೊರಿಯಲ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳನ್ನು ಜಪಾನ್ ಸೇನಾ ಸಿಬ್ಬಂದಿಗಳು ಬೋಟ್ ಗಳ ಸಹಾಯದಿಂದ ರಕ್ಷಿಸಿದ್ದಾರೆ.