ಮಡಿಕೇರಿ, ಜು. 9: ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯು ಇಂದು ಹಗಲು ಸ್ವಲ್ಪ ಬಿಡುವು ನೀಡುವದರೊಂದಿಗೆ, ಮಧ್ಯಾಹ್ನ ಬಳಿಕ ಧಾರಾಕಾರ ಸುರಿಯಿತು. ಮಳೆಯ ತೀವ್ರತೆಯಿಂದಾಗಿ ನಿನ್ನೆ ತಡರಾತ್ರಿ ಗಾಳಿಬೀಡು-ಕಾಲೂರು ಮಾರ್ಗದಲ್ಲಿ ಭಾರೀ ಭೂಕುಸಿತದೊಂದಿಗೆ ಆ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಕಡಿತಗೊಂಡಿದೆ. ಕಾಲೂರು ರಸ್ತೆಯ ಪಾಟಿಮಾಡ್ ಎಂಬಲ್ಲಿ ಮಾರ್ಗ ಬದಿಯ ಬೆಟ್ಟಶ್ರೇಣಿ ಕುಸಿದು ಸಂಪೂರ್ಣ ರಸ್ತೆ ಮುಚ್ಚಿ ಹೋಗಿದೆ.
ಹೀಗಾಗಿ ಕಾಲೂರು ಸುತ್ತ ಮುತ್ತಲಿನ ಗ್ರಾಮಸ್ಥರು ಗಾಳಿಬೀಡು ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಇತರ ಕೆಲಸ
(ಮೊದಲ ಪುಟದಿಂದ) ಕಾರ್ಯಗಳಿಗೆ ದೇವಸ್ತೂರು ಮಾರ್ಗ ವಾಗಿ ಮಡಿಕೇರಿ ಮುಖಾಂತರ ತೆರಳುವಂತಾಗಿದೆ. ಘಟನೆ ಸ್ಥಳದಲ್ಲಿ ಇನ್ನಷ್ಟು ಭೂಕುಸಿತದ ಸಾಧ್ಯತೆ ಎದುರಾಗಿದ್ದು, ಮಾಂದಲಪಟ್ಟಿ ಪ್ರವಾಸಿ ತಾಣಕ್ಕೂ ಗಾಳಿಬೀಡು ವಿನಿಂದ ನೇರವಾಗಿ ತೆರಳಲು ಈ ಭೂಕುಸಿತದಿಂದ ಅಡಚಣೆ ಉಂಟಾಗಿದೆ. ಪಾಟಿಮಾಡ್‍ನ ಸೀತಾರಾಮ ಪಾಟಿ ಎಂಬಲ್ಲಿನ ಈ ಭೂಕುಸಿತ ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ, ಗ್ರಾ.ಪಂ. ಅಧಿಕಾರಿ ಶಶಿಕಿರಣ ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.