ಪೊನ್ನಂಪೇಟೆ, ಜು. 9: ಜನಾಂಗಗಳ ಸಾಮಾಜಿಕ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಂಘಟನೆಗಳು ಆಯಾ ಜನಾಂಗಗಳ ಮಕ್ಕಳ ಶಿಕ್ಷಣಕ್ಕೆ ಮೊದಲ ಆದÀ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಜನಾಂಗದ ಸಾಮಾಜಿಕ ಏಳಿಗೆ ಮತ್ತು ಒಗ್ಗಟ್ಟು ನೆಲೆಗೊಳ್ಳಲು ಸಾಧ್ಯ ಎಂದು ಜನಾಂಗೀಯ ಸಂಘಟನೆಗಳು ಅರಿತುಕೊಳ್ಳಬೇಕು ಎಂದು ಜೆ.ಡಿ.(ಎಸ್.) ಪಕ್ಷದ ಹಿರಿಯ ಮುಖಂಡರೂ ಆದ ಕೋತೂರು ಒಕ್ಕಲಿಗರ ಕೇಮಾಭಿವೃದ್ಧಿ ಸಂಘದ ಸ್ಥಾಪಕಾಧ್ಯಕ್ಷ ಕೆ.ಆರ್. ಸುರೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿಗೆ ಸಮೀಪದ ಕೋತೂರಿನ ಶ್ರೀ ಮಹಾದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ 4ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಮನುಷ್ಯನ ಹೃದಯ ವೈಶಾಲ್ಯತೆ ಹೆಚ್ಚಾಗಿ ಮನಸ್ಸಿನ ಕುಬ್ಜತೆಯಿಂದ ಹೊರಬರಲು ಸಾಧ್ಯವಿದೆ ಎಂದರಲ್ಲದೆ, ಜನಾಂಗಗಳ ಹೆಸರಿನಲ್ಲಿ ಹುಟ್ಟಿಕೊಳ್ಳುವ ಸಂಘಟನೆಗಳು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿರಬಾರದು. ಇತರ ಜನಾಂಗಗಳ ಸಂಘ-ಸಂಸ್ಥೆಗಳನ್ನು ಸಮಾನವಾಗಿ ಗೌರವಿಸಿಕೊಂಡು ಈ ಮೂಲಕ ತಮ್ಮ ಸಂಘಟನೆಗಳ ಘನತೆ ಮತ್ತು ಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಇದನ್ನು ಮುಂದಿನ ಪೀಳಿಗೆಯವರು ಗಂಭೀರವಾಗಿ ಪರಿಗಣಿಸಬೇಕು ಎಂದು ಕಿವಿ ಮಾತು ಹೇಳಿದರು.
ಕೋತೂರಿನ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಆರಂಭಗೊಂಡು ಯಶಸ್ವಿಯಾಗಿ 4 ವರ್ಷಗಳನ್ನು ಪೊರೈಸಿರುವದು ಉತ್ತಮ ಬೆಳವಣಿಗೆಯಾಗಿದೆ. ಇದರ ಕಾರ್ಯಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಬೇಕು. ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಅಯೋಜಿಸುತ್ತಿರಬೇಕು ಎಂದು ಕಿವಿಮಾತು ಹೇಳಿದರು. ಶೀಘ್ರದಲ್ಲೇ ಸಂಘದ ಕಟ್ಟಡಕ್ಕಾಗಿ ನಿವೇಶನವೊಂದನ್ನು ಖರೀದಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಯೋಜನೆ ಪೂರ್ಣಗೊಂಡ ನಂತರ ಸಂಘದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಾಗಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ಜೆ.ಡಿ.(ಎಸ್.) ಮುಖಂಡ ಕಾರ್ಮಾಡು ಸುಬ್ರಮಣಿ ಮಾತನಾಡಿ, ಜನಾಂಗದ ಸಂಘಟನೆಗಳಿಂದ ಕುಲಬಾಂಧವರಲ್ಲಿ ಪರಸ್ಪರ ಒಗ್ಗಟ್ಟು ಮೂಡಲು ನೆರವಾಗುತ್ತದೆ. ಯಾವದೇ ಸಂಘಟನೆಗಳು ಸಕಾರಾತ್ಮಕ ಚಿಂತನೆಗಳೊಂದಿಗೆ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ಅದು ಶಾಶÀ್ವತವಾಗಿ ನೆಲೆಗೊಳ್ಳಲು ಸಾಧ್ಯ. ಇದನ್ನು ಅರ್ಥೈಸಿಕೊಂಡು ಮುನ್ನಡೆದರೆ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಲು ಅವಕಾಶಗಳೇ ಇರುವದಿಲ್ಲ ಎಂದು ಹೇಳಿದರು.
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿ.ಎಸ್. ಪ್ರಭು ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ವಿ.ಆರ್. ಚಂದ್ರೇಶ್, ವಿ.ವಿ.ಉಲ್ಲಾಸ್, ವಿ.ಆರ್. ಪರಮೇಶ್, ಕೆ.ಕೆ.ಮಂಜು, ವಿ.ಆರ್. ಗೌರಮ್ಮ, ವಿ.ಎನ್. ಸರಸ್ವತಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಂದಿನಂತೆ ಸದಸ್ಯರಿಂದ ಆದಿಚುಂಚನಗಿರಿ ಮಠಕ್ಕೆ ಪ್ರತಿವರ್ಷ ನೀಡಲಾಗುವ ದೇಣಿಗೆ ಮೊತ್ತವನ್ನು ಸಂಗ್ರಹಿಸಲಾಯಿತು. ಚಂದ್ರೇಶ್ ಸ್ವಾಗತಿಸಿದರೆ, ಪರಮೇಶ್ ವಂದಿಸಿದರು.