ಮಡಿಕೇರಿ, ಜು. 9: ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯರ ಒಕ್ಕೂಟವನ್ನು ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸಭೆ ಸೇರಿ ಜಿಲ್ಲಾ ಪಂಚಾಯಿತಿ ಸಬಲೀಕರಣಕ್ಕಾಗಿ ಪಕ್ಷಾತೀತವಾಗಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಒಳಗೊಂಡಂತೆ ಒಕ್ಕೂಟವನ್ನು ರಚಿಸಲಾಯಿತು.
ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಸ್ವಾಗತಿಸಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಶ್ಲಾಘನೆಯ ನುಡಿಯಾಡಿದರು.
ಎಲ್ಲಾ ಜಿ.ಪಂ. ಸದಸ್ಯರನ್ನು ಒಗ್ಗೂಡಿಸಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಇದರಿಂದ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದ್ದು, ನಮ್ಮ ಜಿಲ್ಲೆಗಳಲ್ಲಿನ ಅನೇಕ ವಿಚಾರಗಳ ಬಗ್ಗೆ ಪರಸ್ಪರ ಪರಾಮರ್ಶೆ ನಡೆಸಿ ಉತ್ತಮ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾವದೇ ಪಕ್ಷ ಬೇದವಿಲ್ಲದೆ ಜನಪ್ರತಿನಿಧಿಗಳು ಎಂದು ಶ್ರಮಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೆಲವು ಬಿನ್ನಾಭಿಪ್ರಾಯಗಳಿದ್ದರೂ ಬಗೆಹರಿಸಲು ಸಂಘಟನೆಯಿಂದ ಸಹಕಾರಿಯಾಗುತ್ತದೆ. ಇದಕ್ಕೆ ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನಾಣ್ನುಡಿಯಂತೆ ಶ್ರಮಿಸೋಣ ಎಂದರು. ಒಕ್ಕೂಟದ ರಾಜ್ಯ ಸಂಚಾಲಕ ಹಾಗೂ ಚಾಮರಾಜನಗರ ಜಿ.ಪಂ. ಸದಸ್ಯ ಕೆರೆಹಳ್ಳಿ ನವೀನ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳು ಕಳೆಯುತ್ತಾ ಬಂದಿದೆ. ಆ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ 10 ಜಿ.ಪಂ. ಒಕ್ಕೂಟ ರಚಿಸಲಾಗಿದೆ. ಇನ್ನುಳಿದ ಜಿಲ್ಲಾ ಪಂಚಾಯಿತಿಗಳನ್ನು ಸಂಘಟಿಸಲು ಕೊಡಗು ಜಿಲ್ಲಾ ಪಂಚಾಯಿತಿಯಿಂದ ರಾಜ್ಯ ಸಂಚಾಲಕರನ್ನಾಗಿ ಶಶಿ ಸುಬ್ರಮಣಿ, ಸಿ.ಕೆ. ಬೋಪಣ್ಣ, ಬಾನಂಡ ಪ್ರಥ್ಯು, ಮುರುಳಿದರ್, ದೀಪಕ್ ಬಿ.ಜೆ., ಕುಮಾರ್ ಕೆ.ಕೆ., ಕವಿತ ಪ್ರಭಾಕರ್, ಪೂರ್ಣಿಮ ಗೋಪಾಲ್, ಎಂ.ಬಿ. ಸುನಿತಾ, ಪದ್ಮಾವತಿ ಇವರನ್ನು ಆಯ್ಕೆ ಮಾಡಲಾಯಿತು. ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು ಮಾತನಾಡಿ, ಜಿಲ್ಲಾ ಪಂಚಾಯಿತಿ ಬಲಿಷ್ಟಗೊಳಿಸಬೇಕಾದರೆ ಈಗಿನ ಅನುದಾನವನ್ನು ಹೆಚ್ಚಳ ಮಾಡಬೇಕು. ಎಲ್ಲಾ ಸ್ಥಾಯಿ ಸಮಿತಿಗಳಿಗೆ ಪ್ರತ್ಯೇಕ ಅನುದಾನ ನೀಡಬೇಕು. ಅದರ ಜೊತೆ ಸದಸ್ಯರ ಗೌರವ ಧನ ಹೆಚ್ಚಳವಾಗಬೇಕು ಎಂದು ಒತ್ತಾಯಿಸಿದರು.
ಉಡುಪಿ ಜಿ.ಪಂ. ಸದಸ್ಯ ಉದಯ್ ಕೋಟ್ಯಾನ್, ಸುರೇಶ್ ಬಟವಾಡೆ, ರೇಷ್ಮ, ಜ್ಯೋತಿ, ಶಿಲ್ಪ ಸುವರ್ಣ, ಸುಮಿತ್ ಶೆಟ್ಟಿ. ಬಿ.ಕೆ. ಬೊಮ್ಮಯ್ಯ, ಪಿ. ಚೆನ್ನಪ್ಪ, ಕೊಡಗು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಟಿ. ಕಿರಣ್ ಕಾರ್ಯಪ್ಪ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಸದಸ್ಯರಾದ ಪೂರ್ಣಿಮ ಗೋಪಾಲ್, ಎಂ.ಬಿ. ಸುನಿತಾ, ಲೀಲಾವತಿ, ವೈ.ಡಿ. ಪದ್ಮಾವತಿ, ಬಿ.ಪಿ. ಕಲಾವತಿ, ಕುಮುದ ಧರ್ಮಪ್ಪ, ಮುರಳಿ ಕರುಂಬಮ್ಮಯ್ಯ ಇತರರು ಇದ್ದರು.