ಮಡಿಕೇರಿ, ಜು. 9: ಕೊಡಗಿನ ಜನರಿಗೆ ಭಾರೀ ಮಳೆಯ ಪರಿಣಾಮ ದಿಂದ ನಿತ್ಯ ವಹಿವಾಟು ನಡೆಸಲು ಸಂಕಷ್ಟ ತಲೆದೋರಿರುವ ಸಂದರ್ಭ ಮತ್ತೊಂದು ಆತಂಕಕ್ಕೆ ಕಾರಣವಾದ ಲಘು ಭೂಕಂಪನದ ಅನುಭವ ಅನಿರೀಕ್ಷಿತವಾಗಿ ಉದ್ಭವಿಸಿತು.ಇಂದು ಅಪರಾಹ್ನ ಸುಮಾರು 12.53ರ ವೇಳೆಗೆ ಮಡಿಕೇರಿ ನಗರದ ನಿವಾಸಿಗಳಿಗೆ ಭೂಮಿ ಕಂಪಿಸಿದ ಅನುಭವ ಸ್ಪಷ್ಟವಾಗಿ ಮೂಡಿತು. ಜಿಲ್ಲೆಯ ಸೋಮವಾರಪೇಟೆ, ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಮಕ್ಕಂದೂರು, ಕುಂಬೂರು, ಕರ್ಕಳ್ಳಿ, ಮದೆನಾಡು, ಹರದೂರು, ಗರಗಂದೂರು, ಕೊಡಗರಹಳ್ಳಿ, ಗದ್ದೆಹಳ್ಳ, ಮಾದಾಪುರ, ಐಗೂರು, ಹೊಸತೋಟ, ರಂಗಸಮುದ್ರ, ಕೆದಕಲ್, ಮಲ್ಲೇನಹಳ್ಳಿ, ಮುಕ್ಕೋಡ್ಲು ಹಾಗೂ ಸುಬ್ರಮಣ್ಯ - ಕೊಡಗು ಗಡಿ ಪ್ರದೇಶವಾದ ಕಡಮಕಾರ್, ಸುಟ್ಟತ್‍ಮಲೆ, ಬಾಳುಗೋಡು ಹಾಗೂ ಕಡಮಕಲ್ ಈ ಪ್ರದೇಶಗಳಲ್ಲಿ ಅಲ್ಲಲ್ಲಿನ ಸ್ಥಳೀಯರಿಗೆ ಸುಮಾರು 3 ಸೆಕೆಂಡ್ ಕಾಲದವರೆಗೆ ಭೂ ಕಂಪನದ ಅನುಭವವಾಯಿತು.ಅಧಿಕಾರಿಗಳಿಗೆ ಅನುಭವ ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ತಾನು ಕಚೇರಿಯಲ್ಲಿ ಕುಳಿತಿದ್ದ ಸಂದರ್ಭ ಕುರ್ಚಿ ಅದುರಿದ ಅನುಭವ ಉಂಟಾಯಿತು. ಇತರ ಕಡೆಗಳಿಂದಲೂ ಈ ಬಗ್ಗೆ ಮಾಹಿತಿ ಲಭ್ಯವಾಯಿತು. ಈ ಸಂಬಂಧ ಅಧಿಕೃತ ವರದಿಗಾಗಿ ಸಂಬಂಧಿಸಿದ ಇಲಾಖೆಗೆ ತಿಳಿಸಿರುವದಾಗಿ ಅವರು ನುಡಿದರು. ಇನ್ನೊಂದೆಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ಕೂಡ ತಮ್ಮ ಅನುಭವವನ್ನು ‘ಶಕ್ತಿ’ಯೊಂದಿಗೆ ಹಂಚಿಕೊಂಡರು. ತಾನು ಡಿವೈಎಸ್ಪಿ ಮತ್ತಿತರ ಅಧಿಕಾರಿ ಗಳೊಂದಿಗೆ ಕೆಲವೊಂದು ಅಗತ್ಯ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದ ಸಂದರ್ಭ ಕುರ್ಚಿಗಳು ಅಲುಗಾಡಿದ ಅನುಭವ ಉಂಟಾಯಿತು. ಅಲ್ಲದೆ ಕಚೇರಿಯ ಕಿಟಕಿ ಗಾಜುಗಳು ಶಬ್ಧ ಮಾಡಿದವು ಎಂದು ಅವರು ವಿವರಿಸಿದರು.

ಗುಡುಗಿನಂತಹ ಶಬ್ಧ

ಭೂ ಕಂಪಿಸಿದ ಸಂದರ್ಭ ಬಹುತೇಕ ಮಂದಿ ಗುಡುಗು ಶಬ್ಧ ಕೇಳಿದಂತಾಯಿತು ಎಂದು ತಿಳಿಸಿದರು. ತಮ್ಮ ಅಡುಗೆ ಕೋಣೆಗಳಲ್ಲಿ ಕಾರ್ಯ ಮಗ್ನರಾಗಿದ್ದ ಗೃಹಿಣಿಯರು ಪಾತ್ರೆ- ಪಗಡೆಗಳ ಶಬ್ಧ ಕೇಳಿದುದಲ್ಲದೆ ಕೆಲವೆಡೆ ಪಾತ್ರೆಗಳು ಬಿದ್ದ ಅನುಭವ ಉಂಟಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು. ಇನ್ನು ಕೆಲವು ಮನೆ ಮಂದಿ ಆತಂಕದಿಂದ ಮನೆಯಿಂದ ಹೊರಗೋಡಿದರು.

(ಮೊದಲ ಪುಟದಿಂದ) ಕುರ್ಚಿಗಳಲ್ಲಿ ಆಸೀನರಾಗಿದ್ದ ಕೆಲವು ವಯೋವೃದ್ಧರು ಮತ್ತು ಹಾಸಿಗೆ ಹಾಗೂ ಸೋಫಾಗಳಲ್ಲಿ ಕುಳಿತಿದ್ದ ಮನೆ ಮಂದಿ ವಿಶೇಷವಾಗಿ ಕಂಪನಾನುಭವ ಹೊಂದಿದರು. ಅಲ್ಲದೆ, ಊಟಕ್ಕೆ ಕುಳಿತವರು ಮೇಜು ಹಾಗೂ ಕುರ್ಚಿಗಳ ಅದುರುವಿಕೆ ಯಿಂದ ಗಾಬರಿಗೊಂಡ ಸಂದರ್ಭವೂ ಉಂಟಾಯಿತು.

ವಿಶೇಷವೆಂದರೆ ಭೂ ಕಂಪನ ಸನ್ನಿವೇಶದ ವೇಳೆಯಲ್ಲಿ ಮಳೆಯೇ ಇರಲಿಲ್ಲ. ಸುಮಾರು 1 ಗಂಟೆ ಕಾಲ ಮಳೆ ವಿರಾಮ ಕೊಡುತ್ತಿದ್ದ ಸಂದರ್ಭ ಕಂಪನ ಸಂಭವಿಸಿತು. ಆ ಬಳಿಕ ದಿಢೀರ್ ಆಗಿ ಮತ್ತೆ ಮಳೆ ಸುರಿಯಲಾರಂಭಿಸಿತು.

ಸೋಮವಾರಪೇಟೆ

ಸೋಮವಾರಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಲಘುವಾಗಿ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆ, ಕಚೇರಿಯೊಳಗೆ ಕುಳಿತಿದ್ದವರಿಗೆ ಭೂಮಿಯ ಅಡಿಭಾಗದಲ್ಲಿ ಸದ್ದು ಮೂಡಿದಂತಾಗಿ ಬಂಡೆಗಳು ಉರುಳಿದಂತಹ ಅನುಭವವಾಗಿದ್ದು, ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

ಸೋಮವಾರಪೇಟೆ ಪಟ್ಟಣದಲ್ಲಿ ಮಧ್ಯಾಹ್ನ 2 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದರೆ, ಬೇಳೂರಿನಲ್ಲೂ ಇದೇ ಅನುಭವ ವಾಯಿತು ಎಂದು ಕೆಲವರು ತಿಳಿಸಿದ್ದರೆ, ಮಾದಾಪುರದಲ್ಲಿ ಭೂಮಿಯೊಳಗೆ ಗುಡುಗಿದಂತಹ ಅನುಭವವಾಯಿತು ಎಂದು ಹಲವರು ನುಡಿದಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ, ಹಾನಗಲ್ಲು ಬಾಣೆಯಲ್ಲಿಯೂ ಕಂಪನವುಂಟಾಗಿದೆ. ವಾಹನಗಳಲ್ಲಿ ತೆರಳುತ್ತಿದ್ದವರು, ಪಾದಚಾರಿಗಳು, ಜನಸಂದಣಿ ಯಲ್ಲಿದ್ದವರಿಗೆ ಭೂಕಂಪನದ ಅನುಭವವಾಗಿಲ್ಲ. ಮಧ್ಯಾಹ್ನದ ವೇಳೆಗೆ ದೃಶ್ಯಮಾಧ್ಯಮದಲ್ಲಿ ಭೂಕಂಪನದ ಸುದ್ದಿ ಪ್ರಸಾರವಾಗುತ್ತಿದ್ದಂತೆ ಹೊರಭಾಗದಲ್ಲಿ ನೆಲೆಸಿರುವ ಅನೇಕರು ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದರು.

ಸುಂಟಿಕೊಪ್ಪ

ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದ ಭೂಕಂಪನ ಉಂಟಾಯಿತು. ಸುಂಟಿಕೊಪ್ಪ, ಹರದೂರು, ಗರಗಂದೂರು, ಕೊಡಗರ ಹಳ್ಳಿ, ಗದ್ದೆಹಳ್ಳ, ಗಿರಿಯಪ್ಪಮನೆ, ಮಾದಾಪುರ, ಐಗೂರು, ಕುಂಬೂರು, ಹೊಸತೋಟ ಮೊದಲಾದೆಡೆ ಭೂಕಂಪ ಸನ್ನಿವೇಶವನ್ನು ಎದುರಿಸಬೇಕಾಯಿತು. ಕ್ಷಣ ಕಾಲ ಭೂಕಂಪ ಸಂಭವಿಸಿದ್ದು, ಅನೇಕ ಮಂದಿ ಮನೆಯಲ್ಲಿ ತಮಗಾದ ಭೂಕಂಪ ಅನುಭವವನ್ನು ಹಂಚಿಕೊಳ್ಳಲಾರಂಭಿsಸಿದ್ದಾರೆ. ಶಬ್ಧದೊಂದಿಗೆ ಮನೆಗಳಲ್ಲಿ ಪಾತ್ರೆ, ಮಂಚ, ಕುರ್ಚಿ, ಮೇಜು ಹಾಗೂ ಇನ್ನಿತರ ವಸ್ತುಗಳು ಇದಕ್ಕಿದ್ದಂತೆ ಅಲುಗಾಡಿವೆ. ಒಂದೆಡೆ ಮನೆಯ ಎರಡು ಹೆಂಚುಗಳು ಅದುರಿ ಹೋಗಿವೆ. ಕೆಲವೆಡೆ ಗೋಡೆಗಳು ಕೊಂಚವಾಲಿದಂತಾದ ಅನುಭವ ವಾಗಿದೆ ಎಂದು ಕೆಲವರು ಹೇಳಿ ಕೊಂಡಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರನ್ನು ಹಾಗೂ ಮನೆಯಲ್ಲಿ ಕುಳಿತಿದ್ದವರನ್ನು ಯಾರೋ ಅಲ್ಲಾಡಿಸಿದಂತಾಗಿದೆ. ಗುಡುಗಿನಂತಹ ಶಬ್ಧದೊಂದಿಗೆ ಸುಮಾರು 3 ಸೆಕೆಂಡ್‍ವರೆಗೆ ಭೂಮಿ ಕಂಪಿಸಿದ್ದರಿಂದ ಜನ ಆತಂಕಕ್ಕೊಳ ಗಾದರು. ಕಲ್ಲೂರಿನ ಕೆಲ ಗ್ರಾಮಸ್ಥರು ಮನೆಯಿಂದ ಭಯಭೀತಿಯಿಂದ ಹೊರಗೆ ಓಡಿ ಬಂದರು.

ಪುಷ್ಪಗಿರಿ ತಾಣದಲ್ಲಿ

ಲಘು ಭೂಕಂಪನದ ಬಗ್ಗೆ ಕೆಲವರು ‘ಶಕ್ತಿ’ಗೆ ಕರೆಮಾಡಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಸೋಮವಾರಪೇಟೆ ಸೇರಿದಂತೆ ಪುಷ್ಪಗಿರಿ ತಪ್ಪಲಿನ ಗ್ರಾಮೀಣ ಮಂದಿ ಕೂಡ ಸುಮಾರು ಎರಡು ಸೆಕೆಂಡ್ ಭೂಮಿ ಅದುರಿದ ಅನುಭವದೊಂದಿಗೆ ಎಲ್ಲಿಯೋ ಒಮ್ಮೆಲೆ ಭಾರೀ ಶಬ್ಧದೊಂದಿಗೆ ಗುಡುಗು ಕೇಳಿದಂತಾಯಿತು ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸುಬ್ರಹ್ಮಣ್ಯ - ಕೊಡಗು ಗಡಿಭಾಗದಲ್ಲಿರುವ ಕಡಮಕಾರ್, ಸುಟ್ಟತ್‍ಮಲೆ, ಬಾಳುಗೋಡು, ಕಡಮಕಲ್ ಪರಿಸರದ ನಿವಾಸಿಗಳು ಕೂಡ ಮಧ್ಯಾಹ್ನ 12.55ರ ಸುಮಾರಿಗೆ ಭೂಕಂಪನದೊಂದಿಗೆ ಬೆಟ್ಟಶ್ರೇಣಿಯಲ್ಲಿ ಗುಡುಗಿದ ಅನುಭವವಾಯಿತು ಎಂದು ‘ಶಕ್ತಿ’ಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.

ಕೆಲವರು ನಿಂತಲ್ಲಿ ಒಂದು ಕ್ಷಣ ತ್ರಾಣ ಕಳೆದುಕೊಂಡಂತೆ ಗಾಬರಿ ಯಾಯಿತೆಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕೂಡಿಗೆಯ ಸುತ್ತಮುತ್ತ ಲಘು ಕಂಪನ ಆಗಿದೆ. ಕೂಡಿಗೆಯ ಕ್ರೀಡಾ ಶಾಲಾ ಆವರಣ, ಸಮೀಪದ ಮಲ್ಲೇನಹಳ್ಳಿ ಭಾಗದಲ್ಲಿ ಕಂಪನ ಆಗಿರುವ ಬಗ್ಗೆ ತಿಳಿದುಬಂದಿದೆ. ಕುಶಾಲನಗರದಲ್ಲಿಯೂ ಅನುಭವವಾಗಿದೆ.

ಪುಷ್ಪಗಿರಿ ತಪ್ಪಲು ಕೇಂದ್ರ ಬಿಂದು?

ದ.ಕ. ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ ತಾಲೂಕಿನ ವ್ಯಾಪ್ತಿಯ ಪುಷ್ಪಗಿರಿ ತಪ್ಪಲಲ್ಲಿ ಭೂಕಂಪನದ ಕೇಂದ್ರ ಸ್ಥಾನವಾಗಿರಬೇಕೆಂದು ಅಂದಾಜಿ ಸಲಾಗಿದೆ.

-(ವರದಿ: ಚಂದ್ರಮೋಹನ್, ವಿಜಯ್, ರಾಜು ರೈ, ನಾಗರಾಜಶೆಟ್ಟಿ)