ಕುಶಾಲನಗರ, ಜು. 9: ಪ್ರವಾಸಿ ತಾಣ ದುಬಾರೆಯಲ್ಲಿ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ನಡೆಸಲು ಜಿಲ್ಲಾಧಿಕಾರಿಗಳು ಟೆಂಡರ್ ಕರೆಯುವ ನಿಟ್ಟಿನಲ್ಲಿ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.ದುಬಾರೆಯಲ್ಲಿ ರ್ಯಾಫ್ಟಿಂಗ್ ವಿಚಾರದಲ್ಲಿ ಅನಾರೋಗ್ಯಕರ ಪೈಪೋಟಿ ಕಂಡು ಬಂದಿದ್ದಲ್ಲದೆ, ಅಹಿತಕರ ಘಟನೆಗಳು ಸಂಭವಿಸಿದ ಹಿನ್ನೆಲೆಯಲ್ಲಿ ಇಲ್ಲಿ ರ್ಯಾಫ್ಟಿಂಗ್ ನಡೆಸುವದು ಅಪಾಯಕಾರಿಯಾಗಿದ್ದು, ನಿಯಮಾನುಸಾರ ಜಿಲ್ಲಾಡಳಿತದ ಮೂಲಕ ಸಮಿತಿ ರಚಿಸಿ, ಟೆಂಡರ್ ಆಹ್ವಾನಿಸಿ ರ್ಯಾಫ್ಟಿಂಗ್‍ಗೆ ಅನುಮತಿ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದರ ವಿರುದ್ಧ ನಂಜರಾಯಪಟ್ಟಣದ ನಿವಾಸಿ ಬಿ.ಸಿ. ಮಾದಯ್ಯ ಎಂಬವರು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಮಾದಯ್ಯ ಅವರು ವಕೀಲ ನವೀನ್ ಬಿದ್ದಪ್ಪ ಅವರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯವು ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶದ ಮೇಲೆ ತಡೆಯಾಜ್ಞೆ ನೀಡಿ ಆದೇಶಿಸಿದೆ.