ಭಾಗಮಂಡಲ, ಜು. 9: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ವ್ಯಕ್ತಿಯೋರ್ವರು ಸುಟ್ಟು ಕರಕಲಾಗಿರುವ ಘಟನೆ ಸಂಭವಿಸಿದೆ.
ಕುಂದಚೇರಿ ಗ್ರಾಮದ ಕೆದಂಬಾಡಿ ರಮೇಶ್ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕಾರ್ಮಿಕರಾದ ಪೂವ (67) ಹಾಗೂ ಅವರ ಪತ್ನಿ ಕಮಲ ಮರ ಕಸಿ ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ಪೂವ ಒಂದು ಮರದಿಂದ ಮತ್ತೊಂದು ಮರಕ್ಕೆ ಅಲ್ಯುಮಿನಿಯಂ ಏಣಿ ಹೊತ್ತೊಯ್ಯುತ್ತಿದ್ದಾಗ ಮೇಲೆ ಹಾದು ಹೋಗಿದ್ದ 11 ಕೆ.ವಿ. ಸಾಮಥ್ರ್ಯದ ವಿದ್ಯುತ್ ತಂತಿಗೆ ಏಣಿ ತಗಲಿ ವಿದ್ಯುತ್ ಸ್ಪರ್ಶವಾಗಿದೆ. ಅನತಿ ದೂರದಲ್ಲಿ ಕಡಿದ ಮರದ ರೆಂಬೆಗಳನ್ನು ಸವರುತ್ತಿದ್ದ ಪತ್ನಿ ಕಮಲ ಚಟಪಟ ಸದ್ದು ಕೇಳಿ ಬಂದಿದ್ದರಿಂದ ಪತಿಯತ್ತ ಓಡಿದ್ದಾರೆ. ಅಷ್ಟರಲ್ಲಾಗಲೇ ಎದೆಯ ಕೆಳಭಾಗದಿಂದ ಸುಟ್ಟು ಕರಕಲಾಗಿ ಪೂವ ಶವವಾಗಿದ್ದರು. ಓಡಿಬಂದ ಪತ್ನಿ ಕಮಲಳಿಗೂ ವಿದ್ಯುತ್ ಸ್ಪರ್ಶವಾಗಿದ್ದು, ಆಕೆಗೂ ಪೆಟ್ಟಾಗಿದೆ. ಭಾಗಮಂಡಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.