ವೀರಾಜಪೇಟೆ, ಜು. 10: ವೀರಾಜಪೇಟೆ ತಾಲೂಕು ಕಚೇರಿ ಯಲ್ಲಿರುವ ಶಸ್ತ್ರಾಸ್ತ್ರಗಳ ಪರವಾನಗಿಯ ಅರ್ಜಿಗಳನ್ನು ವಿಲೇವಾರಿ ಮಾಡುವ ಶಾಖೆಯ ಸಿಬ್ಬಂದಿಯೊಬ್ಬರು ಉದ್ದಟತನದಿಂದ ವರ್ತಿಸುತ್ತಿದ್ದು ಜಮ್ಮಾ ಹಿಡುವಳಿಯ ರೈತರು ಕೋವಿ ಪರವಾನಗಿಗೆ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡದೆ ಸತಾವಣೆ ಮಾಡುತ್ತಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ದೂರಿದ್ದಾರೆ. ಕೋವಿ ಪರವಾನಗಿಗೆ ಸಂಬಂಧಿಸಿದ ಅನೇಕ ಅರ್ಜಿಗಳು ದಿಕ್ಕು ಕಾಣದೆ ಇದೇ ಶಾಖೆಯಲ್ಲಿ ಕೊಳೆಯುತ್ತಿದ್ದು ಕಚೇರಿಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ಅರ್ಜಿಗಳನ್ನು ಗೌಪ್ಯವಾಗಿ ಇಟ್ಟಿದ್ದಾರೆ. ಅರ್ಜಿದಾರರು ಸಿಬ್ಬಂದಿಯನ್ನು ವಿಚಾರಿಸಿದರೆ ಉಡಾಫೆ ಉತ್ತರ ನೀಡಿ ವಾಪಸು ಕಳಿಸುತ್ತಿದ್ದಾರೆ. ನಿರಂತರ ರಜೆ ಹಾಕುವದು ಈ ಸಿಬ್ಬಂದಿಯ ಕಾಯಕವಾಗಿದೆ. ಈ ಸಿಬ್ಬಂದಿ ಅಧಿಕಾರಿಗಳ ನಿಯಂತ್ರಣದಲ್ಲಿಲ್ಲದೆ ಸೇವೆಯಲ್ಲಿ ಮುಂದುವರೆ ದಿರುವದರಿಂದ ತಾಲೂಕಿನ ಹಿಡುವಳಿದಾರರಿಗೆ ತೊಂದರೆ ಯಾಗಿದೆ. ಸಿಬ್ಬಂದಿಯ ವರ್ತನೆ ಕುರಿತು ಅನಿಲ್ ಅಯ್ಯಪ್ಪ ಅವರು ಪತ್ರಕರ್ತರಿಗೆ ಕಚೇರಿಯಲ್ಲಿ ಪ್ರತ್ಯಕ್ಷವಾಗಿ ತೋರಿಸಿದರು. ಸಿಬ್ಬಂದಿಯ ವಿರುದ್ಧ ತುರ್ತು ಕ್ರಮಕ್ಕೂ ಅನಿಲ್ ಅಯ್ಯಪ್ಪ ಒತ್ತಾಯಿಸಿದರು.