ಗೋಣಿಕೊಪ್ಪ ವರದಿ, ಜು. 11: ಕೊಡಗಿನಲ್ಲಿ ವಾಸ್ತವ್ಯ ಹೂಡಿ ಕೊಡಗಿನ ಸಮಸ್ಯೆ ಆಲಿಸಲಾಗುವದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡಗಿನಿಂದ ತೆರಳಿದ್ದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮುಂದಾಳತ್ವದ ನಿಯೋಗವು ಮುಖ್ಯಮಂತ್ರಿ ಸೇರಿದಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲಾ, ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಇವರುಗಳನ್ನು ಬೇಟಿ ಮಾಡಿ ಮನವಿ ಸಲ್ಲಿಸಿತು.
ಈ ಸಂದರ್ಭ ಮಾತನಾಡಿದ ಅವರು, ಕಾವೇರಿ ಮಾತೆಯ ಆಶೀರ್ವಾದ ಕರ್ನಾಟಕ ಸರ್ಕಾರಕ್ಕೆ ಇದೆ. ಮಳೆಯಿಂದಾದ ಕಷ್ಟ, ನಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತದೆ. ಶೀಘ್ರದಲ್ಲಿಯೇ ಕೊಡಗಿಗೆ ಬೇಟಿ ನೀಡಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಲಾಗುವದು. ಒಂದು ದಿನ ವಾಸ್ತವ್ಯ ಹೂಡಿ, ಸಮಸ್ಯೆ ಆಲಿಸಿ ಅಭಿವೃದ್ದಿ ಬಗ್ಗೆ ಚರ್ಚಿಸಲಾಗುವದು. ಕೊಡಗಿನ ಜನರ ನೋವು ನನ್ನ ಗಮನಕ್ಕೆ ಬಂದಿದೆ. ಪರಿಹರಿಸಲಾಗುವದು ಎಂದು ನಿಯೋಗಕ್ಕೆ ಭರವಸೆ ನೀಡಿದರು.
ಕೊಡವ ಅಕಾಡೆಮಿಗೆ 25 ವರ್ಷ ಪೂರೈಸಿರುವದರಿಂದ ಬೆಳ್ಳಿ ಹಬ್ಬ ಆಚರಿಸಲು ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ಕೊಡಗಿನ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಡುವಂತೆ ಕೋರಿ ಮನವಿ ಸಲ್ಲಿಸಿದ ಸಂದರ್ಭ ಅವರು ಈ ಬಗ್ಗೆ ಭರವಸೆ ನೀಡಿದರು.
ಕೊಡಗು ಬೇಟಿ ಸಂದರ್ಭ ಬೆಳ್ಳಿ ಹಬ್ಬ ಆಚರಣೆಯ ರೂಪುರೇಷೆ ಬಗ್ಗೆ ಚರ್ಚಿಸಿ ಅನುದಾನ ನೀಡಲು ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು.
ಕಳೆದೆರಡು ತಿಂಗಳಿನಿಂದ ಕೊಡಗು ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವದರಿಂದ ಹೆಚ್ಚು ನಷ್ಟ ಉಂಟಾಗಿದೆ. ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನಿಡುವಂತೆ ಒತ್ತಾಯಿಸಲಾ ಯಿತು. ಜಮ್ಮ ಸಮಸ್ಯೆ, ಕಾಡಾನೆ ಉಪಟಳದಿಂದ ರೈತರು ತೊಂದರೆಗೆ ಸಿಲುಕಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಯಿತು.
ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲಾ ಅವರಿಗೆ ನಿಯೋಗದಿಂದ ಸಾಂಪ್ರದಾಯಿಕ ಒಡಿಕತ್ತಿ ನೀಡಿ ಗೌರವಿಸಲಾಯಿತು.
ನಿಯೋಗದಲ್ಲಿ ಕೊಡವ ಅಕಾಡೆಮಿ ಸದಸ್ಯರುಗಳಾದ ಆಪಟ್ಟೀರ ಟಾಟು ಮೊಣ್ಣಪ್ಪ, ಉಮೇಶ್ ಕೇಚಮಯ್ಯ, ಅಜ್ಜಮಾಡ ಪಿ. ಕುಶಾಲಪ್ಪ, ಹಂಚೇಟೀರ ಫ್ಯಾನ್ಸಿ ಮುತ್ತಣ್ಣ, ಕುಡಿಯರ ಶಾರದ, ಅಮ್ಮಣಿಚಂಡ ಪ್ರವೀಣ್, ಸುಳ್ಳಿಮಾಡ ಭವಾನಿ ಕಾವೇರಪ್ಪ, ಚಂಗುಲಂಡ ಸೂರಜ್, ಹಂಚೇಟೀರ ಮನು ಮುತ್ತಪ್ಪ ಉಪಸ್ಥಿತರಿದ್ದರು.
ವರದಿ - ಸುದ್ದಿಪುತ್ರ