ಎನ್ಕೌಂಟರ್ನಲ್ಲಿ ಓರ್ವ ಯೋಧ ಹುತಾತ್ಮ
ಶ್ರೀನಗರ, ಜು. 11: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ನಡೆಸುತ್ತಿರುವ ಎನ್ಕೌಂಟರ್ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಗಸ್ತಿನಲ್ಲಿದ್ದ ಸೇನಾ ಸಿಬ್ಬಂದಿ ಮೇಲೆ ಗುಂಡಿನ ಧಾಳಿ ನಡೆಸಿದ ನಂತರ ಕಂಡಿ ಪ್ರದೇಶದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರೊಂದಿಗೆ ನಡೆದ ಗುಂಡಿನ ಧಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಯೋಧನನ್ನು ಕೂಡಲೇ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯಿಂದ ಭೂ ಕುಸಿತ : 9 ಸಾವು
ಗುವಾಹಣಿ, ಜು. 11: ಕೆಲ ದಿನಗಳಿಂದ ಸುರಿಯುತ್ತಿರುವ ಸುದೀರ್ಘ ಮಳೆಯಿಂದಾಗಿ ಮಣಿಪುರದಲ್ಲಿ ಭೂಕುಸಿತ ಸಂಭವಿಸಿದ್ದು, ಪರಿಣಾಮ 7 ಮಕ್ಕಳು ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿರುವ ಘಟನೆ ತಮೆಂಗ್ಲೊಂಗ್ ಜಿಲ್ಲೆಯಲ್ಲಿ ನಡೆದಿದೆ. ಭೂ ಕುಸಿತದ ಪರಿಣಾಮ ನ್ಯೂಸಲೇಮ್ ಮತ್ತು ನಿಗೆಲುವಾಂಗ್ ಗ್ರಾಮದಲ್ಲಿರುವ ಕೆಲ ಮನೆಗಳು ಕುಸಿದು ಬಿದ್ದಿದ್ದು, ಈ ಹಿನ್ನೆಲೆ ಸ್ಥಳದಲ್ಲಿದ್ದ 7 ಮಕ್ಕಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. ಒಂದು ಘಟನೆಯಲ್ಲಿ ಒಂದೇ ಕುಟುಂಬದ ಐವರು ಮಕ್ಕಳು ಸಾವನ್ನಪ್ಪಿದ್ದರೆ, ಮತ್ತೊಂದು ಘಟನೆಯಲ್ಲಿ ಮಣ್ಣು ಮಿಶ್ರಿತ ನೀರಿನಲ್ಲಿ ಹೋಗುತ್ತಿದ್ದ ವೇಳೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮತ್ತೊಂದು ಘಟನೆಯಲ್ಲಿ ತಾಯಿ ಮತ್ತು ಮಗ ಮಲಗಿದ್ದ ಸಂದರ್ಭ ಮನೆ ಕುಸಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ.
ದಿನೇಶ್ ಗುಂಡೂರಾವ್ ಅಧಿಕಾರ ಸ್ವೀಕಾರ
ಬೆಂಗಳೂರು, ಜು. 11: ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆಯವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದ ಸಮಾರಂಭದಲ್ಲಿ ಇಂದು ಬೆಳಿಗ್ಗೆ 11.30 ರ ಸುಮಾರಿಗೆ ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅವರು ಪದಗ್ರಹಣ ಮಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, 5 ಮಂದಿ ಎಐಸಿಸಿ ಕಾರ್ಯದರ್ಶಿಗಳು, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.
ವಿವಾಹೇತರ ಸಂಬಂಧ ಶಿಕ್ಷಾರ್ಹ ಅಪರಾಧ
ನವದೆಹಲಿ, ಜು. 11: ವಿವಾಹದ ಪಾವಿತ್ರ್ಯತೆ ಉಳಿಯಬೇಕಾದರೆ ವಿವಾಹೇತರ ಸಂಬಂಧ ಶಿಕ್ಷಾರ್ಹವಾಗಿರಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋಟ್ಗೆ ಪ್ರಮಾಣಪತ್ರ ಸಲ್ಲಿಸಿದೆ. ವಿವಾಹೇತರ ಸಂಬಂಧ ಪ್ರಕರಣದಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರನ್ನೂ ಸಮಾನ ಹೊಣೆಗಾರರು ಎಂದು ಪರಿಗಣಿಸಬೇಕೆಂಬ ಜೋಸೆಫ್ ಶೈನ್ ಅರ್ಜಿಗೆ ವಿರುದ್ಧವಾಗಿ ಪ್ರಮಾಣ ಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರ ವಿವಾಹೇತರ ಸಂಬಂಧ ಶಿಕ್ಷಾರ್ಹವಾಗಿರಬೇಕು ಎಂದು ವಾದಿಸಿದೆ. ವಿವಾಹದ ಪಾವಿತ್ರ್ಯತೆಯನ್ನು ಉಳಿಸುವದಕ್ಕಾಗಿ ಐಪಿಸಿ ಸೆಕ್ಷನ್ 497 ರ ಪ್ರಕಾರ ವಿವಾಹೇತರ ಸಂಬಂಧವನ್ನು ಶಿಕ್ಷಾರ್ಹಗೊಳಿಸಲಾಗಿತ್ತು. ಅದನ್ನು ದುರ್ಬಲಗೊಳಿಸುವದರಿಂದ ಈಗ ವಿವಾಹದ ಪಾವಿತ್ರ್ಯತೆಯನ್ನೇ ಕಳೆದಂತಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿವಾಹೇತರ ಸಂಬಂಧಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ 157 ವರ್ಷಗಳ ಹಿಂದಿನ ಬ್ರಿಟನ್ ಕಾಲದ ಕಾನೂನಿನ ಪ್ರಕಾರ ವಿವಾವಾಗಿರುವ ಪುರುಷ, ಮತ್ತೋರ್ವ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ ಪುರುಷನಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಆದರೆ ಪುರುಷರಿಗೆ ಮಾತ್ರ ಶಿಕ್ಷೆ ನೀಡುವ ಈ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 2018ರ ಜನವರಿಯಲ್ಲಿ 5 ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಈ ವಿಚಾರಣೆಯನ್ನು ವರ್ಗಾಯಿಸಿತ್ತು.
ರಾಜ್ಯಸಭಾ ಸದಸ್ಯ 22 ಭಾಷೆ ಮಾತನಾಡಬಹುದು
ನವದೆಹಲಿ, ಜು. 11: ಮುಂಬರುವ ಮುಂಗಾರು ಸಂಸತ್ ಅಧಿವೇಶನದಲ್ಲಿ ರಾಜ್ಯಸಭಾ ಸದಸ್ಯರು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾಗಿರುವ 22 ಅಧಿಕೃತ ಭಾಷೆಗಳಲ್ಲಿ ಮಾತನಾಡಬಹುದು. ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇದೇ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರು ಮುಂಗಾರು ಅಧಿವೇಶನದಲ್ಲಿ 22 ಭಾಷೆಗಳಲ್ಲಿ ಯಾವ ಭಾಷೆ ಬೇಕಾದರೂ ಮಾತನಾಡಬಹುದಾಗಿದೆ. ಮಾತೃ ಭಾಷೆಯಲ್ಲಿ ಮಾತನಾಡುವದರಿಂದ, ನಮ್ಮ ವಿಚಾರಗಳನ್ನು ಉತ್ತಮವಾಗಿ ಮಂಡಿಸಲು ಸಾಧ್ಯ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ನಿಂದ ರೈತರಿಗೆ ಮೋಸವೆಂದ ಮೋದಿ
ಪಂಜಾಬ್, ಜು. 11: ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ರೈತರನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಂಡು ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ. ಪಂಜಾಬ್ನಲ್ಲಿ ಸಾರ್ವಜನಿಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ 70 ವರ್ಷಗಳಲ್ಲಿ ದೇಶದ ರೈತರು ಕಾಂಗ್ರೆಸ್ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಆದರೆ ರೈತರ ಶ್ರಮವನ್ನು ಗುರುತಿಸದ ಕಾಂಗ್ರೆಸ್ ಅವರನ್ನು ಓಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುವದಷ್ಟೇ ಅಲ್ಲದೇ ಮೋಸ ಮಾಡಿದೆ, ರೈತರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಬದಲು ಒಂದು ಕುಟುಂಬದ ಹಿತಾಸಕ್ತಿಗಾಗಿ ಕಾಂಗ್ರೆಸ್ ಕೆಲಸ ಮಾಡಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ನಿಂದ ರೈತರಿಗೆ ಉಂಟಾಗಿರುವ ಮೋಸವನ್ನು ಸರಿಪಡಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಠಿಣ ಪರಿಶ್ರಮ ಹಾಕಿದೆ ಎಂದು ಮೋದಿ ಹೇಳಿದ್ದಾರೆ.
ರೂ. 14 ಕೋಟಿ ವಂಚನೆ : ಎಸ್ಪಿ ಬಂಧನ
ಬೆಂಗಳೂರು, ಜು. 11: ಸರ್ಕಾರಿ ಹುದ್ದೆ ಕೊಡಿಸುವದಾಗಿ ಆಸೆ ತೋರಿಸಿ ರೂ. 14 ಕೋಟಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೆÇಲೀಸರು ಎಸ್ಪಿ ಸೇರಿದಂತೆ ಮೂವರು ಪೆÇಲೀಸ್ ಪೇದೆಗಳನ್ನು ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧತರನ್ನು ನೇಮಕಾತಿ ವಿಭಾಗದ ಎಸ್ಪಿ ರಾಜೇಶ್ (48), ಹಲವು ಡಿಜಿಪಿಗಳಿಗೆ ಪಿಎ ಆಗಿದ್ದ ನಾಗರಾಜ್ (62), ನಗರ ಸಶಸ್ತ್ರ ಮೀಸಲು ಪಡೆದ ಪೇದೆ ಲಕ್ಶೀಕಾಂತ್, ಉಪ್ಪಾರ ಪೇಟೆ ಸಂಚಾರಿ ಪೆÇಲೀಸ್ ಠಾಣೆ ಮಹಿಳಾ ಮುಖ್ಯ ಪೇದೆ ಶಬೀನಾ ಬೇಗಂ ಎಂದು ಗುರ್ತಿಸಲಾಗಿದೆ. ಎಡಿಜಿಪಿ (ನೇಮಕಾತಿ ಮತ್ತು ತರಬೇತಿ) ರಾಘವೇಂದ್ರ ಹೆಚ್. ಔರಾದ್ಕರ್ ಅವರು ಕೆಲ ದಿನಗಳ ಹಿಂದಷ್ಟೇ ರಾಜ್ಯ ಪೆÇಲೀಸ್ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿದ್ದರು. ಪಿಎಸ್ಐ ಪರೀಕ್ಷಾ ಆಕಾಂಕ್ಷಿಗಳಿಗೆ ಉದ್ಯೋಗ ಕೊಡಿಸುವದಾಗಿ ಕೆಲವರು ವಂಚನೆ ಮಾಡುತ್ತಿದ್ದಾರೆ, ಈ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಹೇಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಇಲಾಖೆ ಸಿಸಿಬಿ ತನಿಖೆಗೆ ವಹಿಸಿತ್ತು.
ತೆರಿಗೆ ಹೆಚ್ಚಳ : ಸಿದ್ದು ಯು-ಟರ್ನ್
ಬೆಂಗಳೂರು, ಜು. 11: ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಕಥೆಯಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಯು-ಟರ್ನ್ ಹೊಡೆದಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮೊದಲ ಬಜೆಟ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಿಸಿದ್ದರು. ಬಜೆಟ್ ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ, ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ವಲ್ಪ ಏರಿಕೆ ಮಾಡಲಾಗಿದೆ. ಇದು ಸಾಮಾನ್ಯ ಜನರಿಗೆ ಹೊರೆಯಾವದಿಲ್ಲ ಎಂದಿದ್ದರು. ಇದೀಗ ಯು-ಟರ್ನ್ ಹೊಡೆದಿರುವ ಸಿದ್ದರಾಮಯ್ಯ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅನ್ನಭಾಗ್ಯದ ಅಕ್ಕಿ ಕಡಿತಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ನೂತನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ, ಕುಮಾರಸ್ವಾಮಿ ಅವರು ಅನ್ನಭಾಗ್ಯ ಯೋಜನೆಯ ಅಕ್ಕಿ ಕಡಿತ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.