ಮಡಿಕೇರಿ, ಜು. 11: ಅಬ್ಬಾ! ತಲಕಾವೇರಿಯಲ್ಲಿ ಮಳೆಗಾಲ ಸಂದರ್ಭ ಅಲ್ಲಿ ಹೇಗೆ ವಾಸಿಸುತ್ತಾರೆ ಎಂಬದೇ ಒಂದು ವಿಸ್ಮಯಕಾರಿ ಸನ್ನಿವೇಶ. ಇಂದು ‘ಶಕ್ತಿ’ ಸ್ಥಳಕ್ಕೆ ತೆರಳಿದಾಗ ಅಲ್ಲಿನ ಅನುಭವ ಊಹಿಸಲು ಅಸಾಧ್ಯ. ಕಾವೇರಿ ಬ್ರಹ್ಮಕುಂಡಿಕೆ ಸನ್ನಿಧಿಯಲ್ಲಿ ಪೂಜೆ ಮಾಡುವದಂತು ಕನಸಿನ ಮಾತು. ಈ ವರ್ಷದ ಭಾರೀ ಗಾಳಿ ಸಹಿತ ತೀವ್ರ ಬಿರುಸಿನ ಮಳೆಯಿಂದಾಗಿ ಕುಂಡಿಕೆ ಬಳಿ ನಿಲ್ಲಲು ಕೂಡ ಕಷ್ಟಸಾಧ್ಯ ವಾಗುತ್ತಿದೆ. ಭಕ್ತಾದಿಗಳು ಕೂಡ ಬೆರಳೆಣಿಕೆಯಷ್ಟು ಮಾತ್ರ ಕಂಡುಬಂದರು.
ಗಣಪತಿ ಹಾಗೂ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ತೀರ್ಥ ಸೇವಿಸುವ ಭಕ್ತರು ಬ್ರಹ್ಮಕುಂಡಿಕೆ ಬಳಿ ತೆರಳದೆ ಹೋಗುವ ಸನ್ನಿವೇಶ ಕಂಡುಬಂದಿತು. ಗುಡಿಗಳಲ್ಲಿ ಕೂಡ ಆರತಿ ಅಥವಾ ನಿತ್ಯ ದೀಪವೂ ಗಾಳಿಗೆ ಆರಿ ಹೋಗುತ್ತಿದೆ. ಕುಂಡಿಕೆಯಲ್ಲಂತೂ ಯಾವದೇ ಆಸರೆ ಇಲ್ಲದಿರುವದರಿಂದ ಗಾಳಿಗೆ ಕೊಡೆ ಹಿಡಿಯಲು ಸಾಧ್ಯವಾಗದಿರುವದರಿಂದ ಕೇವಲ ಚುಟುಕು ಪೂಜೆ ಮಾತ್ರ ಮಾಡಲಾಗುತ್ತಿದೆ.ಅರ್ಚಕರುಗಳಾದ ವಿಠಲಾಚಾರ್, ನಾರಾಯಣಾಚಾರ್ ಹಾಗೂ ಪ್ರಶಾಂತ್ ಆಚಾರ್
(ಮೊದಲ ಪುಟದಿಂದ) ಇವರುಗಳ ಪ್ರಕಾರ, ಕಳೆದ 2 ತಿಂಗಳಿನಿಂದ ತಲಕಾವೇರಿಯಲ್ಲಿ ಇದೇ ಸ್ಥಿತಿ ಮುಂದುವರೆದಿದೆ. ಆರತಿಯನ್ನು ಕೂಡ ಕೇವಲ ಮಂತ್ರ ಪೂರ್ವಕವಾಗಿ ಮಾತ್ರ ಸ್ವರಪೂಜೆ ಮೂಲಕ ಮಾಡುವಂತಾಗಿದೆ ಎಂದು ಅರ್ಚಕ ಪ್ರಶಾಂತ್ ಆಚಾರ್ ತಿಳಿಸಿದರು. ಸ್ಥಳದಲ್ಲಿ ಮತ್ತೊಂದು ವಿಸ್ಮಯ ಮೂಡಿಸಿದ ದೃಶ್ಯ ಗೋಚರವಾಯಿತು. ಇಬ್ಬರು ಯುವಕರು ಶ್ವೇತವರ್ಣದ ‘ರೈನ್ಕೋಟ್’ ಧರಿಸಿ ಬ್ರಹ್ಮಕುಂಡಿಕೆಯತ್ತ ಮಳೆಯ ನಡುವೆ ಧಾವಿಸಿದರು. ಅಷ್ಟರಲ್ಲಿ ಕೆಲವು ಯಾತ್ರಾರ್ಥಿಗಳು ಅಲ್ಲಿಗೆ ಬಂದರು. ನೋಡ ನೋಡುತ್ತಿದ್ದಂತೆ ರೈನ್ ಕೋಟ್ಧಾರಿಗಳು ಯಾತ್ರಾರ್ಥಿಗಳಿಗೆ ಪುಷ್ಪ-ತೀರ್ಥ ಪ್ರಸಾದ ನೀಡುತ್ತಿದ್ದರು. ‘ಶಕ್ತಿ’ ಕುತೂಹಲದಿಂದ ಮಾಹಿತಿ ಬಯಸಿದಾಗ, ಇವರಿಬ್ಬರು ಅಲ್ಲಿನ ಅರ್ಚಕರೆಂಬದು ಗೊತ್ತಾಯಿತು.
ಮಳೆ-ಗಾಳಿಯಿಂದ ರಕ್ಷಣೆಗೆ ಕಾವೇರಮ್ಮಳ ನಿತ್ಯ ಪೂಜೆಗೆ ಈ ರೈನ್ಕೋಟ್ಗಳೇ ಸದ್ಯಕ್ಕೆ ಅರ್ಚಕರಿಗೆ ಕವಚಗಳಾಗಿ ಪರಿಣಮಿಸಿವೆ. ಕನಿಷ್ಟ ಪಕ್ಷ ಬ್ರಹ್ಮಕುಂಡಿಕೆಯ ಮೇಲ್ಭಾಗದ ಸ್ಥಳ ಬಿಟ್ಟು ಉಳಿದ ಕಡೆಯಾದರೂ ತೆಳು ಶೀಟ್ಗಳ ಹೊದಿಕೆಯನ್ನು ಅಳವಡಿಸುವ ಅನಿವಾರ್ಯತೆ ಇದೆಯೆಂದು ವಿಠಲಾಚಾರ್ ಅಭಿಪ್ರಾಯಪಟ್ಟರು. ಮಳೆಗಾಲದಲ್ಲಿ ಯಾತ್ರಾರ್ಥಿಗಳು ಕೂಡ ಕುಂಡಿಕೆ ಬಳಿ ನಿಲ್ಲಲು ಸಾಧ್ಯವಾಗದಿರುವದರಿಂದ ಈ ಬಾರಿ ದೇವಾಲಯಕ್ಕೆ ಆದಾಯದ ಪ್ರಮಾಣವೂ ಕೂಡ ತೀರಾ ಕುಂಠಿತವಾಗಿದೆ ಎಂದು ನಾರಾಯಣಾಚಾರ್ ನುಡಿದರು.
ಬ್ರಹ್ಮಕಲಶ ಸಿದ್ಧತೆ: ಇತ್ತೀಚೆಗಷ್ಟೇ ಅಷ್ಟಮಂಗಲ ಪ್ರಶ್ನೆ ಮುಕ್ತಾಯಗೊಂಡಿದೆ. ಕ್ಷೇತ್ರ ತಂತ್ರಿಗಳಾದ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಹಾಗೂ ವಾಸ್ತು ಶಿಲ್ಪಜ್ಞ ಮುನಿಯಂಗಳ ಪ್ರಸಾದ್ ಇವರುಗಳ ಮಾರ್ಗದರ್ಶನದಲ್ಲಿ ಬ್ರಹ್ಮಕಲಶ ಹಾಗೂ ಅದಕ್ಕೂ ಮುನ್ನ ತಲಕಾವೇರಿ, ಭಾಗಮಂಡಲ ಕ್ಷೇತ್ರಗಳಲ್ಲಿ ಅಗತ್ಯ ದೈವಿಕ ಕಾರ್ಯಗಳು ಮತ್ತು ದೋಷ ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ತಿಳಿಸಿದರು.
ಇಂದು ಕ್ಷೇತ್ರಕ್ಕೆ ಆಗಮಿಸಿದ ವಾಸ್ತು ಶಿಲ್ಪಜ್ಞ ಮುನಿಯಂಗಳ ಪ್ರಸಾದ್ ಅವರೊಂದಿಗೆ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಅಧ್ಯಕ್ಷರು ಪರಿಶೀಲನೆ ನಡೆಸಿದರು. ತಲಕಾವೇರಿಯಲ್ಲಿ ಬ್ರಹ್ಮಕುಂಡಿಕೆ ಬಳಿ ತೀವ್ರ ಮಳೆಗಾಳಿಯಿಂದ ಪೂಜೆಗೆ ಅಡ್ಡಿಯಾಗುತ್ತಿರುವ ಕುರಿತು ‘ಶಕ್ತಿ’ ಪ್ರಶ್ನಿಸಿದಾಗ, ಈ ಬಗ್ಗೆ ಸರಳ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವ ಮೂಲಕ ಪೂಜಾದಿಗಳ ನಿರ್ವಹಣೆಗೆ ಸದವಕಾಶ ಮಾಡಿಕೊಡುವದಾಗಿ ಅಧ್ಯಕ್ಷರು ಖಚಿತಪಡಿಸಿದರು.
ತಲಕಾವೇರಿಯಲ್ಲಿ ಅಗಸ್ತ್ಯೇಶ್ವರ ಶಿವ ಲಿಂಗವನ್ನು ಬಾಲಾಲಯದಲ್ಲಿ ಸ್ಥಾಪಿಸಿ ಗರ್ಭ ಗುಡಿಯ ಅಡಿಯಲ್ಲಿ ಈ ಹಿಂದೆ ಇರಿಸಲಾಗಿರುವ ಜೀರ್ಣಗೊಂಡಿದ್ದ ಶಿವ ಲಿಂಗದ ಬಿಂಬವನ್ನು ತೆಗೆದು ವಿಸರ್ಜಿಸುವ ಮೂಲಕ ನಡೆಸಬೇಕಾದ ಪುನರ್ ಪ್ರತಿಷ್ಠಾಪನೆ ಹಾಗೂ ಸದ್ಯದಲ್ಲಿಯೇ ಕೈಗೊಳ್ಳಬೇಕಾದ ಬ್ರಹ್ಮಕಲಶೋತ್ಸವ ಕುರಿತು ಸ್ಥಳದಲ್ಲಿ ಚರ್ಚಿಸಲಾಯಿತು.
ಭಾಗಮಂಡಲ ಮಹಾಗಣಪತಿ ಗರ್ಭಗುಡಿಯಲ್ಲಿರುವ ಶಾಸ್ತಾ ಮತ್ತು ವೀರಭದ್ರ ಶಿಲಾ ಕೃತಿಗಳನ್ನು ಬೇರೆಡೆ ಪುನರ್ ಪ್ರತಿಷ್ಠಾಪಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಯಿತು. ಈ ಎಲ್ಲ ಕಾರ್ಯಗಳನ್ನು ಮುಂದೆ ಕ್ಷೇತ್ರ ತಂತ್ರಿಗಳೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವದಾಗಿ ಬಿ.ಎಸ್. ತಮ್ಮಯ್ಯ ಮಾಹಿತಿಯಿತ್ತರು.
ಸಮಾಲೋಚನೆ ಸಂದರ್ಭ ದೇವಾಲಯ ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಮಿತಿ ಸದಸ್ಯ ಹಾಗೂ ತಕ್ಕರಾದ ಕೋಡಿ ಮೋಟಯ್ಯ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್, ಕಾರ್ಯನಿರ್ವಹಣಾಧಿಕಾರಿ ಸಂಪತ್ ಕುಮಾರ್, ಹಿಂದಿನ ಪುನರ್ ಪ್ರತಿಷ್ಠಾಪನಾ ಸಮಿತಿ ಕಾರ್ಯದರ್ಶಿ ಜಿ. ರಾಜೇಂದ್ರ, ಪಾರುಪತ್ತೆಗಾರ ಪೊನ್ನಣ್ಣ ಹಾಗೂ ಅರ್ಚಕ ಕುಟುಂಬದವರು ಹಾಜರಿದ್ದರು.