ಗೋಣಿಕೊಪ್ಪಲು, ಜು.11: ದಕ್ಷಿಣ ಕೊಡಗಿನ ವಿವಿಧ ಭಾಗದ ಪ್ರದೇಶಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ ಹರೀಶ್ ಉಪಾಧ್ಯಕೆÀ್ಷ ಲೋಕೇಶ್ವರಿ ಗೋಪಾಲ್ ಹಾಗೂ ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪೃಥ್ವಿ ಮಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿದರು.
ಮಧ್ಯಾಹ್ನದಿಂದ ಸಂಜೆ 7 ಗಂಟೆಯ ವರೆಗೆ ಸಮೀಕ್ಷೆ ನಡೆಸಿದ ಈ ತಂಡ ತಿತಿಮತಿ, ಬಾಳೆಲೆ, ನಿಟ್ಟೂರು ಕಾರ್ಮಾಡು, ಕಾನೂರು ಹಾಗೂ ಪೊನ್ನಂಪೇಟೆಯ ವಿವಿಧ ಭಾಗದಲ್ಲಿ ಮಳೆಯಿಂದ ತೊಂದರೆಗೀಡಾಗಿರುವ ಸೇತುವೆ,ರಸ್ತೆ, ಮನೆಗಳನ್ನು ವೀಕ್ಷಿಸಿದರು. ತಿತಿಮತಿ ರಾಜ್ಯ ಹೆದ್ದಾರಿಯ ಸೇತುವೆಯನ್ನು ಪರಿಶೀಲಿಸಿದ ಅಧ್ಯಕ್ಷರು; ಸೇತುವೆಯ ಗುಣಮಟ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸ್ಥಳದಲ್ಲಿದ್ದ ಕಂದಾಯ ಇಲಾಖಾ ಅಧಿಕಾರಿಗಳಾದ ಪೊನ್ನಂಪೇಟೆಯ ಕಂದಾಯ ಪರಿವೀಕ್ಷಕ ರಾಧಾಕೃಷ್ಣ, ಮಂಜುನಾಥ್, ತಿತಿಮತಿ ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯ ಅನೂಪ್ ಕುಮಾರ್ ಮಾಹಿತಿ ಒದಗಿಸಿದರು.
ತಿತಿಮತಿ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಅಧ್ಯಕ್ಷರು ಹಾಗೂ ತಂಡ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ವಸತಿ ನಿಲಯದ ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಧ್ಯಕ್ಷರು; ವಾರ್ಡನ್ ನಿಲಯದಲ್ಲಿ ಇಲ್ಲದಿರುವ ಬಗ್ಗೆ ಅಸಮಾಧಾನಗೊಂಡರು. ನಂತರ ಬಾಳೆಲೆ ಮಾರ್ಗವಾಗಿ ನಿಟ್ಟೂರು ಸೇತುವೆಯ ಕಾಮಾಗಾರಿ ಪರಿಶೀಲನೆ ನಡೆಸಿದ ಈ ತಂಡ ಕಾನೂರು ಮಾರ್ಗವಾಗಿ ತೆರಳಿತು. ಕಾನೂರು, ಕೋತೂರುವಿನ ಬಿ.ಜೆ.ಪಿ ಮುಖಂಡ ಕಾಡ್ಯಮಾಡ ಭರತ್, ವಿ.ಕೆ. ಪ್ರವೀಣ್, ಸುರೇಶ್, ಗಾಂಧಿ, ಸತೀಶ್ ಮಾಸ್ಟರ್ ಮುಂತಾದವರ ಸಮ್ಮುಖದಲ್ಲಿ ಸ್ಥಳೀಯ ಕೊಡಚಿ, ಲಕ್ಷ್ಮಣ ತೀರ್ಥ ನದಿಯಿಂದ ನೀರು ತುಂಬಿ ರಸ್ತೆ ಸಂಚಾರ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಸ್ಥಳೀಯ ಮುಖಂಡ ಕಾಡ್ಯಮಾಡ ಭರತ್ ಮುಖ್ಯ ರಸ್ತೆಯಲ್ಲಿ ನೀರು ಹರಿದು ಬರುತ್ತಿರುವದರಿಂದ ನೂತನ ಸೇತುವೆ ನಿರ್ಮಾಣ ಮಾಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವದಾಗಿ ಅಧ್ಯಕ್ಷ ಹರೀಶ್ ಭರವಸೆ ನೀಡಿದರು
ಈ ಸಂದರ್ಭ ಬಿ.ಜೆ.ಪಿ. ಕ್ಷೇತ್ರ ಅಧ್ಯಕ್ಷ ಅರುಣ್ ಭೀಮಯ್ಯ, ಬಿ.ಜೆ.ಪಿ. ಮುಖಂಡ ಜಪ್ಪು ಸುಬ್ಬಯ್ಯ, ಜಿ.ಪಂ. ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಎನ್.ಜಿ. ಕಿರಣ್ ಮುಂತಾದವರು ಹಾಜರಿದ್ದರು. ನಂತರ ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಕಚೇರಿಗೆ ಆಗಮಿಸಿ ಸಿಬ್ಬಂದಿ ಹಾಗೂ ಸದಸ್ಯರೊಂದಿಗೆ ಕುಂದು ಕೊರತೆಯ ಬಗ್ಗೆ ಚರ್ಚೆ ನಡೆಸಿದರು. ದಕ್ಷಿಣ ಕೊಡಗಿನ ಮಳೆ ಹಾನಿ ಸಮೀಕ್ಷೆ ನಡೆಸಲು ಗೋಣಿಕೊಪ್ಪಲುವಿನ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಹ್ವಾನಿಸಿದ್ದರು.
- ಹೆಚ್.ಕೆ. ಜಗದೀಶ್