ಮಡಿಕೇರಿ, ಜು. 11: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಸ್ಪಿಕ್ ಮೆಕೆ ಕೊಡಗು ಸಂಯುಕ್ತಾಶ್ರಯದಲ್ಲಿ ತಾ. 14 ರಂದು ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಪದ್ಮಶ್ರೀ ಉಸ್ತಾದ್ ವಾಸೀಫುದ್ದೀನ್ ದಾಗರ್ ಅವರಿಂದ ದ್ರುಪದ್ ಕಾರ್ಯಕ್ರಮ ಜರುಗಲಿದೆ.
ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಸಂಜೆ 6.30 ಗಂಟೆಗೆ ನಡೆಯಲಿರುವ ದ್ರುಪದ್ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಆಯೋಜಿತವಾಗಿದೆ.
ಭಾರತದ ಹೆಸರಾಂತ ದ್ರುಪದ್ ವಾದಕ ಉಸ್ತಾದ್ ನಾಸೀರ್ ಫಯಾಸುದ್ದೀನ್ ದಾಗರ್ ಅವರ ಪುತ್ರರಾಗಿರುವ ವಾಸೀಪುದ್ದೀನ್ ದಾಗರ್ ತನ್ನ 5ನೇ ವರ್ಷದಿಂದಲೇ ಈ ಕಲೆಯ ಅಭ್ಯಾಸದಲ್ಲಿ ತೊಡಗಿದ್ದರು. 1989 ರಿಂದ ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡುತ್ತಿರುವ ಫಯಾಸುದ್ದೀನ್ ಸ್ವಿಜರ್ ಲ್ಯಾಂಡ್, ಅಮೇರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. 2000ದಲ್ಲಿ ವಾಸೀಫುದ್ದೀನ್ ದಾಗರ್ ಉತ್ತರ ಅಮೇರಿಕಾದಲ್ಲಿ ಕೈಗೊಂಡ ದ್ರುಪದ್ ಗಾಯನ ಪ್ರವಾಸ ಕಾರ್ಯಕ್ರಮ ಇವರಿಗೆ ಸಾಕಷ್ಟು ಪ್ರಖ್ಯಾತಿ ತಂದು ಕೊಟ್ಟಿದೆ. ದ್ರುಪದ್ ಸಂಗೀತಕ್ಕಾಗಿ 2010ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ವಾಸೀಫುದ್ದೀನ್ ದಾಗರ್ಗೆ ಕೇಂದ್ರ ಸರ್ಕಾರ ನೀಡಿ ಗೌರವಿಸಿದೆ.