ಗೋಣಿಕೊಪ್ಪಲು, ಜು.10: ಕೊಡಗಿನ ಕ್ರೀಡೆಯ ತವರು ಪೊನ್ನಂಪೇಟೆಯಲ್ಲಿರುವ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದಾರೆ. ಏನಿಲ್ಲವೆಂದರೂ ಕ್ರೀಡೆಯಲ್ಲಿ ಒಂದಿಲ್ಲೊಂದು ಸಾಧನೆ ತೋರುತ್ತಾ ಬರುತ್ತಿರುವ ಈ ಪ್ರತಿಭೆಗಳಿಗೆ ಮತ್ತಷ್ಟು ಸಾಧನೆ ತೋರಲು ವಸತಿ ನಿಲಯಗಳ ಸಮಸ್ಯೆಗಳೇ ಅಡ್ಡಿಯಾಗುತ್ತಿವೆ. ವಿದ್ಯಾರ್ಥಿಗಳಿಗೆ ನಿತ್ಯ ಬಳಸುವ ನೀರಿಗೆ ಇಲ್ಲಿ ಸಂಚಕಾರ ಬಂದೊ ದಗಿದೆ. ಕ್ರೀಡಾ ವಿದ್ಯಾರ್ಥಿಗಳು ಪ್ರತಿ ನಿತ್ಯ ಸ್ನಾನ ಮಾಡಲು ನೀರು ದೊರೆಯುತ್ತಿಲ್ಲ. ಈ ಬಗ್ಗೆ ಹಲವು ಬಾರಿ ವಿದ್ಯಾರ್ಥಿಗಳು ಮನವಿ ಮಾಡಿದ್ದರೂ ಇಲ್ಲಿಯ ತನಕ ಇವರ ಸಮಸ್ಯೆಗೆ ಯಾರೂ ಸ್ಪಂದಿಸಿಲ್ಲ.
ವಿದ್ಯಾರ್ಥಿನಿಯರು ತಮ್ಮ ಬಟ್ಟೆ, ಶೌಚಾಲಯಕ್ಕೆ ವಿದ್ಯಾರ್ಥಿ ನಿಲಯದ ಸಮೀಪವಿರುವ ಟರ್ಫ್ ಮೈದಾನಕ್ಕೆ ನೀರನ್ನು ಹಾಯಿಸಲು ನಿರ್ಮಿಸಿರುವ ಟ್ಯಾಂಕ್ನಿಂದ ಪ್ರತಿ ನಿತ್ಯ ಬಕೆಟ್ ಹಾಗೂ ಬಿಂದಿಗೆಯ ಮೂಲಕ ನೀರನ್ನು ಹೊತ್ತುಕೊಂಡು ಹೋಗಬೇಕಿದೆ. ನೀರಿಲ್ಲದಿದ್ದಾಗ ಬಾಲಕರ ವಸತಿ ನಿಲಯಕ್ಕೆ ತೆರಳಿ ತಮ್ಮ ನಿತ್ಯಕರ್ಮ ಪೂರೈಸಿಕೊಳ್ಳ ಬೇಕಾದಂತಹ ದುಸ್ಥಿತಿ ಇಲ್ಲಿದೆ. ಇಲಾಖೆಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೋಲಾರ್ ಅಳವಡಿಸಿದ್ದರೂ ಮಳೆಗಾಲದಲ್ಲಿ ಸೋಲಾರ್ ಪ್ರಯೋಜನಕ್ಕೆ ಬರುತ್ತಿಲ್ಲ. ಇದರಿಂದ ತಣ್ಣೀರಿನಲ್ಲಿಯೇ ದಿನ ನಿತ್ಯ ಸ್ನಾನ ಮಾಡುವ ಪರಿಸ್ಥಿತಿ ಈ ವಿದ್ಯಾರ್ಥಿಗಳದ್ದು.
ಪುಂಡರ ಹಾವಳಿ
ರಾತ್ರಿಯ ವೇಳೆಯಲ್ಲಿ ಆಗಮಿಸುವ ಮದ್ಯಪ್ರಿಯರು ಟರ್ಫ್ ಮೈದಾನದಲ್ಲಿ ನಿರ್ಮಿಸಿರುವ ಗ್ಯಾಲರಿಯಲ್ಲಿ ಕುಳಿತುಕೊಂಡು ಮದ್ಯ ಸೇವಿಸಿ ಬಾಟಲಿಗಳನ್ನು ಸ್ಥಳದಲ್ಲೇ ಬಿಸಾಕಿ ತೆರಳುತ್ತಿದ್ದಾರೆ. ಗ್ಯಾಲರಿಯ ಗೋದಾಮಿನಲ್ಲಿ ವಿದ್ಯಾರ್ಥಿಗಳ ಕ್ರೀಡಾ ಸಾಮಗ್ರಿಗಳನ್ನು ದಾಸ್ತಾನು ಇಟ್ಟುಕೊಳ್ಳಲು ಈ ಹಿಂದೆ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈ ಕೊಠಡಿಯ ಬಾಗಿಲು ಮುರಿದು ವರ್ಷಗಳೇ ಕಳೆದಿವೆ.ಇದರಿಂದಾಗಿ ಪ್ರತಿನಿತ್ಯ ವಿದ್ಯಾರ್ಥಿಗಳು ಹಾಕಿ ಕ್ರೀಡೆಯನ್ನು ಮುಗಿಸಿದ ತರುವಾಯ ತಾವು ತಂಗುವ ಕೊಠಡಿಗಳಲ್ಲಿ ಸಾಕ್ಸ್ , ಶೂಗಳನ್ನು ಬಿಚ್ಚಿಡುವ ಅನಿವಾರ್ಯತೆ ಎದುರಾಗಿದೆ.
ಗ್ಯಾಲರಿಯಲ್ಲಿ ನಿರ್ಮಿಸಿರುವ ಶೌಚಾಲಯ ದುರಸ್ತಿಗೊಂಡು ತಿಂಗಳು ಕಳೆದರು ಇದರ ದುರಸ್ತಿ ಕಾರ್ಯ ಇಲ್ಲಿ ತನಕ ನಡೆದಿಲ್ಲ. 64 ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿರುವ ಈ ಕ್ರೀಡಾ ವಸತಿ ನಿಲಯದಲ್ಲಿ 16 ಹೆಣ್ಣು ಮಕ್ಕಳು ಹಾಗೂ 44 ಗಂಡು ಮಕ್ಕಳು ಪ್ರತಿ ನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೆಳಿಗ್ಗೆ 6.30ರಿಂದ 8.30ರವರೆಗೆ ಸಂಜೆ 4.30ರಿಂದ 6.30ರವರೆಗೆ ಕ್ರೀಡಾ ಅಭ್ಯಾಸಗಳು ಅನುಭವಿ ಶಿಕ್ಷಕರಿಂದ ನಡೆಯುತ್ತಿದೆ. ಕ್ರೀಡಾ ಕಿಟ್ಗಳು ಕೂಡ ಸಮರ್ಪಕ ವಾಗಿ ದೊರುಕುತ್ತಿಲ್ಲ ಈ ಬಾರಿ ಮಾತ್ರ ಇಲಾಖೆಯು ವಿದ್ಯಾರ್ಥಿಗಳಿಗೆ ಒಂದು ಜೊತೆ ಕ್ರೀಡಾ ಕಿಟ್ಗಳನ್ನು ವಿತರಿಸಿದೆ. ನಿಯಮಾನುಸಾರ ಎರಡು ಜೊತೆ ಕಿಟ್ಗಳನ್ನು ವಿತರಿಸಬೇಕಿದೆ.
ಕೆಟ್ಟೋದ ಕ್ಯಾಮರಾ
ವಿದ್ಯಾರ್ಥಿನಿಯರ ವಸತಿ ನಿಲಯದ ಬಳಿ ಅಪರಿಚಿತ ಚಲನ ವಲನದ ಬಗ್ಗೆ ನಿಗಾ ವಹಿಸಲು ವಸತಿ ಗೃಹದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾವು ಕೆಟ್ಟು ವರ್ಷಗಳು ಕಳೆದಿವೆ. ಕಾಟಾಚಾರಕ್ಕೆ ಬೆಂಗಳೂರಿನ ಏಜೆನ್ಸಿಯೊಂದು ಸಿಸಿ ಕ್ಯಾಮರಾ ಅಳವಡಿಸಿ ತೆರಳಿದ ನಂತರ ಇದರ ದುರಸ್ತಿ ಕಾರ್ಯವನ್ನು ನಿರ್ವಹಿಸಲು ಇಲ್ಲಿಯ ತನಕ ಆಗಮಿಸಿಲ್ಲ. ವಿದ್ಯಾರ್ಥಿ ಗಳಿಗೆ ಹಾಸಿಗೆ ಹಾಗೂ ಮಂಚ ಗಳು ಅವಶ್ಯಕ ತೆಯೂ ಇದೆ.
ಹೆಚ್.ಕೆ. ಜಗದೀಶ್