ಭಾಗಮಂಡಲ, ಜು. 11: ದಕ್ಷಿಣ ಗಂಗೆ ತಲಕಾವೇರಿ ಹಾಗೂ ದಕ್ಷಿಣ ಕಾಶಿ ಎಂಬ ಖ್ಯಾತಿಯ ಭಾಗಮಂಡಲದತ್ತ ಬರುತ್ತಿರುವ ಯಾತ್ರಾರ್ಥಿಗಳು ಮತ್ತು ಸ್ಥಳೀಯರು ಇಲ್ಲಿನ ಗಾಳಿ-ಮಳೆ ನಡುವೆ ಜಲಪ್ರಳಯದಿಂದ ಹೈರಾಣಾಗಿದ್ದಾರೆ. ಒಂದು ವಾರದಿಂದ ಎಡೆಬಿಡದೆ ಸುರಿದ ಮಳೆಯಿಂದ ಸಂಗಮ ಕ್ಷೇತ್ರ ಜಲಾವೃತಗೊಂಡು; ನಾಪೋಕ್ಲು ಮಾರ್ಗದಲ್ಲಿ ಐದು ಅಡಿಗಳಷ್ಟು ನೀರು ಹರಿಯುತ್ತಿದೆ. ಮಡಿಕೇರಿ ಮಾರ್ಗದಲ್ಲಿ ಸಂಪೂರ್ಣ ಮುಳುಗಡೆಗೊಂಡು ಎರಡೂವರೆ ಅಡಿಗಳಷ್ಟು ರಸ್ತೆಯನ್ನು ಆಕ್ರಮಿಸಿಕೊಂಡಿದೆ.ಪರಿಣಾಮ ಹೆಸರಿಗೊಂದು ದೋಣಿ ಹಾಗೂ ಅಯ್ಯಂಗೇರಿ ಮಾರ್ಗಕ್ಕೆ ರ್ಯಾಫ್ಟ್ವೊಂದನ್ನು ಇರಿಸಿದ್ದು, ಅವುಗಳನ್ನು ನಿರ್ವಹಿಸುವ ಅನುಭವಿಗಳಿಲ್ಲದೆ ಜನರು ಅನಿವಾರ್ಯವಾಗಿ ಜೀವಭಯದ ನಡುವೆ ಕಾಲ್ನಡಿಗೆಯಲ್ಲೇ ತಿರುಗಾಡುತ್ತಿದ್ದಾರೆ ದೂರದ ಊರುಗಳಿಂದ ಇತ್ತ ಬರುವ ಯಾತ್ರಾರ್ಥಿಗಳು ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರ ದರ್ಶನಕ್ಕೆ ತಮ್ಮ ವಾಹನಗಳಲ್ಲಿ ತೆರಳಲಾರದೆ; ಬಾಡಿಗೆಗೆ ನದಿದಾಟಿ ಬೇರೆ ವಾಹನಗಳಲ್ಲಿ ಹೋಗಿ ಬರುತ್ತಿದ್ದಾರೆ.
ದ್ವೀಪದಂತಾಗಿರುವ ಭಾಗಮಂಡಲ ಕ್ಷೇತ್ರದ ಪರಿಸ್ಥಿತಿ ಹೀಗಾದರೆ, ತಲಕಾವೇರಿಗೆ ಬಾಡಿಗೆ ವಾಹನದಲ್ಲಿ ತೆರಳಿದರೂ ಗಾಳಿ-ಮಳೆಯ ತೀವ್ರತೆ ನಡುವೆ ದಟ್ಟ ಮೋಡಗಳ ನಡುವೆ ನಾಮಕಾವಸ್ಥೆಗೆ ಕ್ಷೇತ್ರ ದರ್ಶನ ಮಾಡಿ ಹಿಂತಿರುಗುತ್ತಿದ್ದಾರೆ.
ದೈನಂದಿನ ಕೆಲಸ ಕಾರ್ಯಗಳಿಗೆ ತಲಕಾವೇರಿ ಹಾಗೂ ಭಾಗಮಂಡಲ ಸುತ್ತಮುತ್ತಲಿನ ಗ್ರಾಮಸ್ಥರು ಪ್ರಸಕ್ತ ಜಲಪ್ರವಾಹದಿಂದ ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಪರದಾಡುತ್ತಿದ್ದು, ಸಮರ್ಪಕ ಪರ್ಯಾಯ ವ್ಯವಸ್ಥೆಗಾಗಿ ಹಂಬಲಿಸತೊಡಗಿದ್ದಾರೆ.
(ಮೊದಲ ಪುಟದಿಂದ) ಈ ದಿಸೆಯಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ನಮ್ಮ ಜನಪ್ರತಿನಿಧಿಗಳು ಸರಕಾರದ ಗಮನ ಸೆಳೆಯಬೇಕೆಂದು ಭಾಗಮಂಡಲ ನಿವಾಸಿಗಳು ‘ಶಕ್ತಿ’ಯೊಂದಿಗೆ ಆಗ್ರಹಿಸಿದ್ದಾರೆ. ಜಿಲ್ಲೆಗೊಬ್ಬರು ಉಸ್ತುವಾರಿ ಸಚಿವರನ್ನು ನೇಮಿಸದಿರುವಾಗ; ಈಗಿನ ಸನ್ನಿವೇಶದಲ್ಲಿ ಕೊಡಗಿನ ಜನತೆಯ ಸಂಕಷ್ಟ ಆಲಿಸಲು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತವೇ ಸರಕಾರದ ಮೇಲೆ ಒತ್ತದ ಹಾಕುವಂತೆಯೂ ಒತ್ತಾಯಿಸಿದ್ದಾರೆ. - ಕೆ.ಡಿ. ಸುನಿಲ್