ಸುಂಟಿಕೊಪ್ಪ, ಜು. 11: ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡ ಒತ್ತಿನಲ್ಲಿ ಭೂ ಕುಸಿದಿದ್ದು, ಅಪಾಯದ ಸ್ಥಿತಿಯಲ್ಲಿ ಕಟ್ಟಡ ಇರುವದನ್ನು ಕಾಲೇಜಿನ ಪ್ರಾಂಶುಪಾಲ, ಆಡಳಿತ ಮಂಡಳಿಯವರು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಮನವಿ ಸಲ್ಲಿಸಿ ಕ್ಷೀಪ್ರ ರಕ್ಷಣಾ ಕಾರ್ಯಕ್ಕೆ ಆಗ್ರಹಿಸಿದ್ದ ಮೇರೆ ಜಿಲ್ಲಾಧಿಕಾರಿಗಳು ಪಕೃತಿ ವಿಕೋಪ ಪರಿಹಾರದಡಿ ಕಾಮಗಾರಿ ನಿರ್ವಹಿಸಲು ಲೋಕೋಪಯೋಗಿ ಇಲಾಖೆ ಹಾಗೂ ಜಿ.ಪಂ. ಇಂಜಿನಿಯರಿಗೆ ಸೂಚಿಸಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಯಂಕನ ಕರುಂಬಯ್ಯ, ಪ್ರಾಚಾರ್ಯ ಪಿ.ಎಸ್.ಜಾನ್, ಉಪನ್ಯಾಸಕ ಪಿಲಿಫ್ವಾಸ್ ಇವರುಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕಾಲೇಜು ಕಟ್ಟಡ ಕುಸಿಯುವ ಅಂಚಿನಲ್ಲಿದ್ದು, ತಡೆಗೋಡೆ ನಿರ್ಮಿಸಿ ಸಂಭವಿಸಬಹುದಾದ ಅನಾಹುತ ತಡೆಗಟ್ಟ ಬೇಕೆಂದು ಮನವಿ ಅರ್ಪಿಸಿದರು.
ಜಿಲ್ಲಾಧಿಕಾರಿಗಳು ಜಿ.ಪಂ. ವಿಭಾಗಕ್ಕೆ ಸೂಚಿಸಿದ ಮೇರೆ ಸ್ಥಳಕ್ಕೆ ಸೋಮವಾರಪೇಟೆ ಕಾರ್ಯಪಾಲಕ ಅಭಿಯಂತರ ರೇವಣ್ಣ, ತಾಲೂಕು ಸಹಾಯಕ ಕಾರ್ಯಪಾಲಕ ಅಭಿಯಂತರ, ಕಿರಿಯ ಅಭಿಯಂತರ ಫಯಾಜ್ ಅಹ್ಮದ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕಟ್ಟಡಕ್ಕೆ ಯಾವದೇ ಅನಾಹುತ ಸಂಭವಿಸದಂತೆ ತುರ್ತು ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದ್ದಾರೆ.