ಪೊನ್ನಂಪೇಟೆ, ಜು. 11: ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಕೊಡಗಿಗೆ ಮಂತ್ರಿ ಸ್ಥಾನದ ಭಾಗ್ಯ ದೊರೆತಿಲ್ಲ. ಕೊಡಗಿನ ನಿರೀಕ್ಷಿತ ಅಭಿವೃದ್ದಿಗೆ ತೀರಾ ಹಿನ್ನಡೆಯಾಗಿದೆ. ಅದ್ದರಿಂದ ರಾಜ್ಯದ ಇಂದಿನ ಕಾಂಗ್ರೆಸ್ ಮತ್ತು ಜೆ.ಡಿ.(ಎಸ್.) ಸಮ್ಮಿಶ್ರ ಸರಕಾರದಲ್ಲಿ ರಾಜ್ಯ ವಿಧಾನ ಪರಿಷತ್ತಿನ ಸದಸ್ಯೆ ಶಾಂತೇಯಂಡ ವೀಣಾ ಅಚ್ಚಯ್ಯ ಅವರಿಗೆ ಸರಕಾರದ ಮಂತ್ರಿ ಸ್ಥಾನ ನೀಡಬೇಕು ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಕೊಡಗು ಜಿಲ್ಲೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದುವರೆಗು ರಾಜ್ಯವಾಳಿದ ಸರಕಾರಗಳು ಕೊಡಗನ್ನು ಲೆಕ್ಕಕ್ಕಿಲ್ಲದಂತೆ ಮಾಡಿದೆ ಎಂದು ಅರೋಪಿಸಿದರಲ್ಲದೆ, ಇದೀಗ ಕೊಡಗಿಗೆ ಮಂತ್ರಿ ಸ್ಥಾನದ ಜೊತೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ಬೇಕು. ಈ ಬೇಡಿಕೆ ಕುರಿತು ಕೊಡಗಿನ ಸಮಸ್ತ ಜನತೆ ಏಕ ವೇದಿಕೆಯಡಿ ಹೋರಾಟದ ಅಗತ್ಯವಿದೆ. ಬೇಡಿಕೆ ಈಡೇರದಿದ್ದರೆ ಕೊಡಗನ್ನು ಕರ್ನಾಟಕದಿಂದ ಬೇರ್ಪಡಿಸುವ ಪ್ರತ್ಯೇಕ ರಾಜ್ಯ ಹೋರಾಟ ಅನಿವಾರ್ಯವಾದೀತು ಎಂದು ಎಚ್ಚರಿಸಿದ್ದಾರೆ. ಆ ಮೂಲಕ ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿರುವ ತೀತಿರ ಧರ್ಮಜ ಉತ್ತಪ್ಪ ರಾಜ್ಯ ಸಮ್ಮಿಶ್ರ ಸರಕಾರದ ಮುಂಬರುವ ಸಂಪುಟ ವಿಸ್ತರಣೆ ಸಂದರ್ಭ ವೀಣಾ ಅಚ್ಚಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು. ಮಹಿಳೆಯರಿಗೆ ಶೇ.33% ರಷ್ಟು ಮೀಸಲಾತಿ ನೀಡಬೇಕೆಂಬ ನ್ಯಾಯದ ಆಧಾರದಲ್ಲಾದರೂ ವೀಣಾ ಅಚ್ಚಯ್ಯ ಅವರನ್ನು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ ಪಕ್ಷದ ಎಲ್ಲಾ ಪ್ರಮುಖರನ್ನೊಳಗೊಂಡ ನಿಯೋಗ ಶೀಘ್ರದಲ್ಲೆ ಬೆಂಗಳೂರಿಗೆ ತೆರಳಿ ಕೆ.ಪಿ.ಸಿ.ಸಿ. ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವದು ಎಂದು ಅವರು ತಿಳಿಸಿದ್ದಾರೆ.