ವೀರಾಜಪೇಟೆ, ಜು. 11: ಇತ್ತೀಚೆಗೆ ಮೃತಪಟ್ಟ ಅನ್ನಡಿಯಂಡ ಲಾಸ್ಯ ತೇಜಸ್ವಿ ಅವರನ್ನು ಪರೀಕ್ಷಿಸಿದ ಡಾ:ಶಶಿಕಲಾ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮರಂದೋಡು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗಡಿಯಾರ ಕಂಬದ ಬಳಿ ಜಮಾವಣೆಗೊಂಡ ಪ್ರತಿಭಟನೆಕಾರರು ವೀರಾಜಪೇಟೆಯ ವೈದ್ಯೆ ಶಶಿಕಲಾ ವಿರುದ್ಧ ಫೋಷಣೆ ಕೂಗಿದರು. ನಂತರ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಬಂದು ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ನೀಡಿದರು.

ಜುಲೈ 1 ರಂದು ಹೆರಿಗೆ ನೋವೆಂದು ನರ್ಸಿಂಗ್ ಹೋಂಗೆ ದಾಖಲಾದ ಲಾಸ್ಯಳು ಮಾರನೇ ದಿನ ಪೂರ್ವಾಹ್ನ 9.18 ಗಂಟೆಗೆ ಯಾವದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಸಹಜವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಪರಾಹ್ನ 1 ಗಂಟೆಯವರೆಗೂ ಪತಿಗಾಗಲಿ ಇಲ್ಲವೇ ಸಂಬಂಧಿಕರಿಗೆ ಮಗುವನ್ನು ನೋಡಲು ಅವಕಾಶ ನೀಡಲಿಲ್ಲ. 1.30 ಗಂಟೆಗೆ ಬಿಡುಗಡೆ ಪತ್ರ ನೀಡಿ ಮಡಿಕೇರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದ್ದಾರೆ. ಮರುದಿನ ಮುಂಜಾನೆ 4.30 ಗಂಟೆಗೆ ಲಾಸ್ಯ ಮೃತ ಪಟ್ಟಿದ್ದಾರೆ. ವೈದ್ಯರ ಬೇಜವಾಬ್ದಾರಿತನದಿಂದ ನನ್ನ ಪತ್ನಿ ಸಾವಿಗೀಡಾಗಿದ್ದಾರೆ. ಆದ್ದರಿಂದ ಡಾ. ಶಶಿಕಲಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪತಿ ಕೀರ್ತನ್ ಕಾರ್ಯಪ್ಪ ತಹಶೀಲ್ದಾರರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶ್ಯೆಲಾ ಕುಟ್ಟಪ್ಪ ಮಾತನಾಡಿ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯೆ ಶಶಿಕಲಾ ಅವರು ಸ್ತ್ರೀರೋಗ ತಜ್ಞರಲ್ಲ ಎಂದು ಇತರ ವೈದ್ಯರು ಹೇಳುತ್ತಾರೆ. ಇವರ ಆಸ್ಪತ್ರೆಯಲ್ಲಿ ಹೆರಿಗೆಗೆ ಬೇಕಾದ ಆಧುನಿಕ ಉಪಕರಣಗಳಿಲ್ಲ. ಇವರ ವಿದ್ಯಾಭ್ಯಾಸದ ಬಗ್ಗೆ ಅನುಮಾನ ಇರುವದರಿಂದ ಸಂಬಂಧಿಸಿದ ಇಲಾಖೆ ಸೂಕ್ತ ತನಿಖೆ ನಡೆಸಬೇಕು. ನರ್ಸಿಂಗ್ ಹೋಂ ಬಗ್ಗೆ ತನಿಖೆ ನಡೆಸಿ ಪರವಾನಗಿ ರದ್ದುಗೊಳಿಸಬೇಕು. ಅಲ್ಲದೆ ವೈದ್ಯರ ವಿರುದ್ಧ 302 ಸೆಕ್ಷನ್ ವಿಧಿಸಿ ಬಂಧಿಸಬೇಕು ಇಂತಹ ಪ್ರಕರಣ ಮರುಕಳಿಸದಂತೆ ಸಮಾಜ ಎಚ್ಚರ ವಹಿಸಬೇಕೆಂದು ಆಗ್ರಹಿಸಿದರು.

ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೆದಾರ್ ಪ್ರವೀಣ್‍ಕುಮಾರ್ ಮನವಿ ಸ್ವೀಕರಿಸಿ ಜಿಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲಪಿಸುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮರಂದೋಡ ಕೊಡವ ಸಂಘದ ಅಧ್ಯಕ್ಷ ಅನ್ನಡಿಯಂಡ ದಿಲೀಪ್, ಕೊಡವ ಕಲ್ಚರಲ್ ಕ್ಲಬ್‍ನ ಅಧ್ಯಕ್ಷ ಪ್ರವೀಣ್, ನಿವೃತ್ತ ಎಸ್.ಪಿ ಮುಕ್ಕಾಟ್ಟಿರ ಚೋಟು ಅಪ್ಪಯ್ಯ, ಕೀರ್ತನ್ ಸಹೋದರಿ ಪೇರಿಯಂಡ ಸೋನಿ, ಪೇರಿಯಂಡ ಕಮಲ, ಪೋಳಂಡ ಮಾಚಯ್ಯ, ಯೋಗೀಶ್ ನಾಯ್ಡು. ಚೋಯಮಾಡಂಡ ಗಿರೀಶ್, ಹರೀಶ್ ಸೇರಿದಂತೆ ಅನೇಕ ಗ್ರಾಮಸ್ತರು ಭಾಗವಹಿಸಿದ್ದರು. ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.