ಮಡಿಕೇರಿ, ಜು. 10: ಉದ್ದೇಶಿತ ತಲಚೇರಿ - ಮೈಸೂರು ರೈಲು ಮಾರ್ಗದ ಯೋಜನೆ ಜಾರಿಗೆ ರಾಜ್ಯ ಸರಕಾರ ಅನುಮತಿ ನೀಡದಂತೆ ಕೊಡಗು - ಮೈಸೂರು ಕ್ಷೇತ್ರದ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂಸದರು ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದರು.ಕೊಡಗು ಜಿಲ್ಲೆಯು ಭೌಗೋಳಿಕ ಮತ್ತು ಸಾಂಸ್ಕøತಿಕವಾಗಿ ವಿಭಿನ್ನವಾಗಿರುವ ಪುಟ್ಟ ಜಿಲ್ಲೆ. ಅಪರಿಮಿತ ಪ್ರಕೃತಿ ಸಂಪತ್ತಿನ ನೆಲೆವೀಡೂ ಆಗಿರುವ ಜಿಲ್ಲೆಯಲ್ಲಿ ಇಂದಿಗೂ ರೈಲ್ವೆ ಸಂಪರ್ಕ ಹೊಂದಿರುವದಿಲ್ಲ.
ಕೇರಳ ಸರ್ಕಾರದ ರೈಲು ಅಭಿವೃದ್ಧಿ ನಿಗಮವು ಸಿದ್ದಪಡಿಸಿರುವ ತಲಚೇರಿ - ಮೈಸೂರು (ದಕ್ಷಿಣ ಕೊಡಗು ಮಾರ್ಗವಾಗಿ) ಉದ್ದೇಶಿತ ರೈಲು ಮಾರ್ಗದ ಯೋಜನೆಯು ಕೊಡಗಿನಲ್ಲಿ ಅಂದಾಜು 65 ಕಿ.ಮೀ. ದೂರ ಹಾದು ಹೋಗಲಿದೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದದ್ದೇ ಆದರೆ, ಕೊಡಗಿನಲ್ಲಿ ಅಂದಾಜು 2 ಲಕ್ಷ ಮರಗಳ ಮಾರಣ ಹೋಮವೇ ನಡೆಯಲಿದೆ. ಈಗಾಗಲೇ ವ್ಯಾಪಕ ಅರಣ್ಯ ನಾಶದಿಂದಾಗಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣವೇ ಕಡಿಮೆಯಾಗಿದ್ದು, ಈ ಮಾರ್ಗವು ನಾಗರಹೊಳೆ ಮೂಲಕ ಹಾದು ಹೋಗುವದರಿಂದ ಅಮೂಲ್ಯ ವನ್ಯ ಜೀವಿಗಳಿಗೂ ತೊಂದರೆ ಆಗಲಿದೆ. ಅಲ್ಲದೇ ಕಾವೇರಿ ನದಿಯಲ್ಲಿ ನೀರಿನ ಹರಿಯುವಿಕೆಯೂ ಕಡಿಮೆಯಾಗಲಿದೆ.
ತಲಚೇರಿ - ಮೈಸೂರು ಮಾರ್ಗಕ್ಕೆ ಕೊಡಗು ಜಿಲ್ಲೆಯಾದ್ಯಂತ ತೀವ್ರ ವಿರೋಧವಿದ್ದು, ಸ್ಥಳೀಯ ಸಂಘ - ಸಂಸ್ಥೆಗಳು, ಪರಿಸರವಾದಿಗಳು, ಜಿಲ್ಲೆಯ ಶಾಸಕರು ಹಾಗೂ ಕ್ಷೇತ್ರದ ಸಂಸದನಾಗಿ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದೇನೆ. ಆದ್ದರಿಂದ ಉದ್ದೇಶಿತ ತಲಚೇರಿ - ಮೈಸೂರು ಮಾರ್ಗಕ್ಕೆ ಯಾವದೇ ಕಾರಣಕ್ಕೂ ರಾಜ್ಯ ಸರಕಾರದಿಂದ ಅನುಮತಿ ನೀಡದಂತೆ ಕ್ಷೇತ್ರದ ಜನತೆಯ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುವದಾಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ.