ಮಡಿಕೇರಿ, ಜು. 11: ಕೇಂದ್ರ ಜಲ ಆಯೋಗ ಮತ್ತು ಕಾರ್ಯದರ್ಶಿ, ರಾಜ್ಯ ವಿಪತ್ತು ನಿರ್ವಹಣಾ ಕೋಶ, ಕಂದಾಯ ಇಲಾಖೆ ಇವರ ಸಲಹೆಯಂತೆ ಕೊಡಗು ಜಿಲ್ಲಾಡಳಿತ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕೆಳಕಂಡ ತುರ್ತು ಪ್ರಕಟಣೆಯನ್ನು ಹೊರಡಿಸಿದೆ.

*ಕೊಡಗು ಜಿಲ್ಲೆಯಾದ್ಯಂತ ಭಾರೀ ಗಾಳಿ, ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನದಿ, ತೊರೆ ಹಾಗೂ ಇನ್ನಿತರ ಜಲಮೂಲಗಳಲ್ಲಿ ಏಕಾಎಕಿ ನೀರಿನ ಹರಿವು ಹೆಚ್ಚಳವಾಗುವ ಸಂಭವವಿದ್ದು, ಅಪಾಯ ಇರುವದರಿಂದ ಸಾರ್ವಜನಿಕರು, ಪ್ರವಾಸಿಗರು ಈಜು ಮುಂತಾದ ಜಲಕ್ರೀಡೆಗಳಿಂದ ದೂರವಿರುವದು

*ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರು, ಸಾರ್ವಜನಿಕರು ಮತ್ತು ಸ್ಥಳೀಯರು ನದಿ, ತೊರೆ ಇತ್ಯಾದಿಗಳಿಗೆ ಇಳಿಯುವದು ಅಪಾಯಕಾರಿಯಾಗಿದೆ ಮತ್ತು ಮರ, ಬಿದಿರು ಇತ್ಯಾದಿ ಸ್ಥಳೀಯ ನಿರ್ಮಿತ ಸಾಧನಗಳಿಂದ ನದಿಯನ್ನು ದಾಟಬಾರದು. ಸುರಕ್ಷಿತ ವಿಧಾನವಾದ ದೋಣಿ/ಬೋಟ್‍ಗಳನ್ನು ನದಿ ದಾಟಲು ಬಳಸುವದು.

*ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಜಲಾಶಯಗಳು ತುಂಬಿದ್ದು, ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ನದಿ ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನದಿ ತಟದಲ್ಲಿ ವಾಸವಿರುವವರು ಸದಾ ಜಾಗೃತರಾಗಿರುವದು.

*ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಸುರಕ್ಷತೆಯ ದೃಷ್ಟಿಯಿಂದ ನದಿ ತೊರೆ, ಜಲಪಾತ ಮುಂತಾದವುಗಳ ಸಮೀಪ ತೆರಳದೆ ಸುರಕ್ಷಿತ ಸ್ಥಳದಿಂದಲೇ ವೀಕ್ಷಿಸುವದು.

*ಸಾರ್ವಜನಿಕರು/ಪ್ರವಾಸಿಗರು ಮರಗಳ ಕೆಳಗೆ ಮತ್ತು ಎತ್ತರವಾದ ಬರೆ ಇರುವ ಪ್ರದೇಶಗಳಲ್ಲಿ ವಾಹನಗಳನ್ನು ನಿಲುಗಡೆಗೊಳಿಸಬಾರದು ಮತ್ತು ನಿಲ್ಲಬಾರದು.

*ನದಿ ತೊರೆಗಳು ತುಂಬಿ ಸೇತುವೆ ಅಥವಾ ರಸ್ತೆಯ ಮೇಲೆ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದಾಗ ಕಾಲ್ನಡಿಗೆ ಅಥವಾ ವಾಹನಗಳ ಮೂಲಕ ದಾಟಲು ಪ್ರಯತ್ನಿಸಬಾರದು.

*ಸುರಕ್ಷತೆಯ ದೃಷ್ಠಿಯಿಂದ ವಾಹನ ಚಾಲಕರು ಸಾರಿಗೆ ನಿಯಮ, ರಸ್ತೆಯ ಅಂಚಿನಲ್ಲಿರುವ ಸಂಜ್ಞಾ ಫಲಕಗಳಲ್ಲಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವದು ಹಾಗೂ ಕಡಿದಾದ ತಿರುವು ರಸ್ತೆಗಳಲ್ಲಿ ನಿಧಾನವಾಗಿ ಚಾಲಿಸುವದು.

*ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತದ 24ಘಿ7 ಕಾರ್ಯನಿರತ ಟೋಲ್ ಫ್ರೀ ಸಹಾಯವಾಣಿ (ಕಂಟ್ರೋಲ್ ರೂಂ) ಸಂಖ್ಯೆ: 08272-221077ನ್ನು ಸಂಪರ್ಕಿಸಬಹುದಾಗಿದೆ.

ಈ ಮೇಲಿನ ಸೂಚನೆಗಳೊಂದಿಗೆ ಸಾರ್ವಜನಿಕರು/ಪ್ರವಾಸಿಗರು ಭಾರೀ ಗಾಳಿ ಮಳೆಯಿಂದಾಗುವ ಅನಾಹುತಗಳ ಬಗ್ಗೆ ಅರಿತು ಸ್ವಪ್ರಜ್ಞೆಯಿಂದ ಜಾಗೃತರಾಗಿರಲು ಜಿಲ್ಲಾಡಳಿತ ಕೋರಿದೆ.