ಕುಶಾಲನಗರ, ಜು. 10: ಅರಣ್ಯ ಇಲಾಖೆ ಕುಶಾಲನಗರ ವಲಯದ ಆಶ್ರಯದಲ್ಲಿ ವಿವಿಧ ತಳಿಯ ಮರಗಳ ಸೀಡ್ ಬಾಲ್ ಬಿತ್ತನೆ ಕಾರ್ಯಕ್ರಮ ಸಮೀಪದ ಆನೆಕಾಡು ಮೀಸಲು ಅರಣ್ಯದಲ್ಲಿ ಹಮ್ಮಿಕೊಳ್ಳಲಾಯಿತು.
ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ನೇತೃತ್ವದಲ್ಲಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಅರಣ್ಯದಲ್ಲಿ ಬೀಜದುಂಡೆಗಳ ಬಿತ್ತನೆ ಮಾಡಿದರು. ಕಾರ್ಯಕ್ರಮದಲ್ಲಿ ಬೀಜದ ಉಂಡೆಗಳ ತಯಾರಿ, ಬಿತ್ತನೆ, ಸಸಿಗಳನ್ನು ನೆಡುವ ವಿಧಾನ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಅರುಣ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪ್ರತಿ ವರ್ಷ ಕಾಡ್ಗಿಚ್ಚಿನಿಂದಾಗಿ ನಶಿಸುತ್ತಿರುವ ಅರಣ್ಯ ಪ್ರದೇಶ ಮತ್ತೆ ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದ ಅವರು, ಗಿಡ ನೆಡುವದರೊಂದಿಗೆ ಅದರ ಸಂರಕ್ಷಣೆ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ ಎಂದರು. ಉಪ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್, ವಲಯದ ಸಿಬ್ಬಂದಿಗಳು, ನೌಕರರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ನೂರಕ್ಕೂ ಅಧಿಕ ವಿದ್ಯಾರ್ಥಿಗಳು 40 ಸಾವಿರಕ್ಕೂ ಅಧಿಕ ಸೀಡ್‍ಬಾಲ್‍ಗಳನ್ನು ಬಿತ್ತನೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಇದೇ ಸಂದರ್ಭ ವಿವಿಧ ಗಿಡಗಳ ಬೀಜಗಳನ್ನು ಕಾಡಿನಲ್ಲಿ ಬಿತ್ತಲಾಯಿತು.
ಅರಣ್ಯದಲ್ಲಿ ಗಿಡ ನೆಡುವ ಮೂಲಕ ವಲಯ ಅರಣ್ಯಾಧಿಕಾರಿ ಅರುಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಜಾನಪದ ಪರಿಷತ್ ಹಾಗೂ ಕಾವೇರಿ ಜಿಸಿಐ ಕುಶಾಲನಗರದ ಪ್ರಮುಖರು, ಶಾಲೆಯ 100ಕ್ಕೂ ಅಧಿಕ ವಿದ್ಯಾರ್ಥಿಗಳು ಅರಣ್ಯ ಪ್ರದೇಶದೊಳಗೆ ಬೀಜುದುಂಡೆ ಬಿತ್ತನೆ ಮಾಡಿ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಕುಶಾಲನಗರ ಅರಣ್ಯ ವಲಯದ ಸಿಬ್ಬಂದಿಗಳು ಸೇರಿದಂತೆ ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಸದಸ್ಯರಾದ ಕೆ.ಆರ್. ಶಿವಾನಂದನ್, ಡಿ.ಆರ್. ಸೋಮಶೇಖರ್, ವಿನೋದ್, ಅಕ್ಷಯ್, ಜೆಸಿಐ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ಸುಕನ್ಯ, ಕವಿತಾ ಪ್ರವೀಣ್, ಪ್ರತಿಮ, ಸಂಧ್ಯಾ, ಗಾನವಿ, ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರಾದ ಜಗದೀಶ್, ಮಹೇಶ್ ಇದ್ದರು.