ವೀರಾಜಪೇಟೆ, ಜು. 11: ಮಹಿಳೆಯ ಉದರದಲ್ಲಿದ್ದ ಮೂರು ಕೆ.ಜಿ. ತೂಕದ ಮಾಂಸದ ಗೆಡ್ಡೆಯನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.

ಕಾನೂರಿನ 45 ವರ್ಷ ಪ್ರಾಯದ ಸುಶೀಲಾ ಎಂಬವರು ಕಳೆದ ಅನೇಕ ತಿಂಗಳುಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ಕಳೆದ ವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾಗ ಮಹಿಳೆಯ ಹೊಟ್ಟೆಯನ್ನು ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ದುರ್ಮಾಂಸದ ಗೆಡ್ಡೆ ಇರುವದು ಪತ್ತೆಯಾಗಿದೆ. ಗೆಡ್ಡೆ ಹೊಟ್ಟೆಯಿಂದ ಎದೆಯ ಭಾಗದವರೆಗೆ ಆವರಿಸಿಕೊಂಡು ಗೆಡ್ಡೆಯ ಸುತ್ತ ರಕ್ತನಾಳಗಳು ಸುತ್ತಿಕೊಂಡ ಕಾರಣ ಶಸ್ತ್ರ ಚಿಕಿತ್ಸೆಗೆ ಮೂರು ತಾಸು ಹಿಡಿಯಿತೆಂದು ವಿಶ್ವನಾಥ್ ಸಿಂಪಿ ಮಾದ್ಯಮದವರಿಗೆ ತಿಳಿಸಿದರು.

ಗೆಡ್ಡೆಯನ್ನು ಮುಂದಿನ ವೈಜ್ಞಾನಿಕ ಪರೀಕ್ಷೆಗಾಗಿ ಬೆಂಗಳೂರಿನ ವಿದಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವದು ಎಂದು ತಿಳಿಸಿದರಲ್ಲದೆ, ಮಹಿಳೆಯ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ಶಸ್ತ್ರ ಚಿಕಿತ್ಸೆಗೆ ಸಹಾಯಕರಾಗಿ ಅನಸ್ತೇಶಿಯಾ ಡಾ. ಪ್ರಧಾನ್, ದಾದಿಯರಾದ ಲಲಿತಾ, ಭಾಗ್ಯ ಸಹಕರಿಸಿದರು ಎಂದರು.