ಸಿದ್ದಾಪುರ, ಜು. 10: ಹಾಡಹಗಲೇ ಕಾಡಾನೆಗಳ ಹಿಂಡು ಗುಹ್ಯ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಕಾಡಾನೆಗಳಿಂದ ಭಯ ಉಂಟಾಗದ ರೀತಿಯಲ್ಲಿ 2 ಮಂದಿ ಗನ್‍ಮ್ಯಾನ್‍ಗಳನ್ನು ಶಾಲಾ ಆವರಣದ ಬಳಿ ನೇಮಕ ಮಾಡಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ.
ಅಲ್ಲದೇ ಶಾಲೆಯ ಬಳಿ ಸೋಲಾರ್ ಬೇಲಿಯನ್ನು ಅಳವಡಿಸುವ ಬಗ್ಗೆ ಕ್ರಮಕೈಗೊಂಡಿದೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಗುಹ್ಯ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡು ಗುಹ್ಯ ಗ್ರಾಮದ ಕಾಫಿ ಬೆಳೆಗಾರರ ತೋಟದೊಳಗೆ ದಾಂಧಲೆ ನಡೆಸಿ ಕೃಷಿ ಫಸಲು ಕಾಫಿ ಗಿಡಗಳನ್ನು ಧ್ವಂಸಗೊಳಿಸಿ ನಾಶಪಡಿಸಿದೆ. ಅಲ್ಲದೇ ಗುಹ್ಯ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಹಾಡಹಗಲೇ ರಾಜಾರೋಷವಾಗಿ ರಸ್ತೆಯಲ್ಲಿ ಓಡಾಡಿದ ಕಾಡಾನೆಗಳು ಶಾಲೆಯ ಹಿಂಭಾಗದಲ್ಲಿ ಬೀಡುಬಿಟ್ಟಿದ್ದ ಹಿನ್ನೆಲೆಯಲ್ಲಿ ಮಂಗಳವಾರದಂದು ಶಾಲೆಗೆ ರಜೆ ನೀಡಲಾಗಿತ್ತು.
ನಂತರ ಉಪವಲಯ ಅರಣ್ಯ ಅಧಿಕಾರಿ ದೇವಯ್ಯ ನೇತೃತ್ವದಲ್ಲಿ ಆರ್‍ಆರ್‍ಟಿ ತಂಡ ಹಾಗೂ ಅರಣ್ಯ ಸಿಬ್ಬಂದಿ ಗುಹ್ಯ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದರು. ವೀರಾಜಪೇಟೆಯ ಡಿಸಿಎಫ್ ಮರಿಯ ಕಿಸ್ತರಾಜ್, ಎಸಿಎಫ್ ರೋಶಿಣಿ, ಆರ್‍ಎಫ್‍ಓ ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಗುಹ್ಯ ಸರ್ಕಾರಿ ಶಾಲೆಯ ಸುತ್ತಲು ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ. ಅಲ್ಲದೇ ಈಗಾಗಲೇ ಅರಣ್ಯ ಇಲಾಖೆಯ ವತಿಯಿಂದ ಶಾಲಾ ಮಕ್ಕಳನ್ನು ಕರೆತರಲು ರೂ. 1 ಲಕ್ಷ ಅನುದಾನವನ್ನು ಶಾಲೆಗೆ ನೀಡಲಾ ಗುತ್ತಿದ್ದು, ಅದನ್ನು ಹೆಚ್ಚಿಸಿಕೊಡುವಂತೆ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಅರಣ್ಯ ಇಲಾಖಾಧಿಕಾರಿ ಗಳ ಬಳಿ ಚರ್ಚಿಸಿದ್ದಾರೆ.
- ವಾಸು