ನಾಪೋಕ್ಲು, ಜು. 10: ಸಮೀಪದ ಕುಯ್ಯಂಗೇರಿ ಗ್ರಾಮದಲ್ಲಿ ಭತ್ತದ ನಾಟಿ ಕೆಲಸ ಬಿರುಸಿನಿಂದ ಸಾಗುತ್ತಿದ್ದು, ಇಲ್ಲಿನ ಗ್ರಾಮಸ್ಥರು (ಕೂಡು ನಾಟಿ) ಸಹಕಾರ ಪದ್ಧತಿಯಲ್ಲಿ ನಾಟಿ ಕಾರ್ಯ ನಡೆಸುತ್ತಿರುವದು ವಿಶೇಷ. ಬಹಳ ಹಿಂದಿನಿಂದಲೇ ಸಾಂಪ್ರದಾಯಿಕ ವಾಗಿ ಈ ಕೂಡು ನಾಟಿ ಪದ್ಧತಿ ಇದ್ದು, ಗ್ರಾಮಸ್ಥರು ಈಗಲೂ ಅದೇ ಕಾರ್ಯವನ್ನು ಮುಂದುವರಿಸು ತ್ತಿದ್ದಾರೆ. ಕುಯ್ಯಂಗೇರಿ ಗ್ರಾಮದ ತಡಿಯಪ್ಪನ ಬಸಪ್ಪ ಎಂಬವರ ಗದ್ದೆಯಲ್ಲಿ ಗ್ರಾಮಸ್ಥರು ನಾಟಿ ಮಾಡುತ್ತಿರುವ ದೃಶ್ಯ ಕಂಡುಬಂತು. ಹಳೆಯ ತಳಿಯನ್ನೇ ಬಿತ್ತನೆ ಮಾಡುತ್ತಿದ್ದು ಗದ್ದೆಯಲ್ಲಿ ಅದೇ ಬೀಟಿ ತಳಿಯ ನಾಟಿ ಕಾರ್ಯ ನಡೆಸುತ್ತಿರುವದಾಗಿ ಬಸಪ್ಪ ತಿಳಿಸಿದರು. ಸಾಂಪ್ರದಾಯಿಕವಾಗಿ ಗದ್ದೆಯನ್ನು ಎರಡು ಸಾರಿ ಎತ್ತುಗಳಲ್ಲಿ ಉಳುಮೆ ಮಾಡಿ ಬಳಿಕ ಟಿಲ್ಲರ್. ಟ್ರ್ಯಾಕ್ಟರ್ ಬಳಕೆ ಮಾಡುವದಿದ್ದರೆ ಒಂದು ಗಂಟೆಗೆ 700 ರೂ. ದರ ನೀಡಬೇಕಾಗುತ್ತದೆ. ಹೀಗಾಗಿ ಸಾಂಪ್ರದಾಯಿಕ ಪದ್ಧತಿಯೇ ಇಲ್ಲಿ ಮುಂದುವರಿದಿದೆ. ಗ್ರಾಮದ ಕುಟುಂಬಗಳಾದ ಚಿಲ್ಲನ, ಪೋರೆಯನ, ಕುಡಕಡ, ತಡಿಯಪ್ಪನ, ತಂಬಂಡ, ಕುಂಜಿಲಂಡ, ಸಣ್ಣಜನ ಮುಂತಾದ ಕುಟುಂಬಗಳು ಕೂಡು ಪದ್ಧತಿಯಲ್ಲಿ ತಲತಲಾಂತರದಿಂದ ಸಾಂಪ್ರದಾಯಿಕ ನಾಟಿ ಮಾಡುತ್ತಿದ್ದಾರೆ. ಅವರವರ ಸ್ಥಳಕ್ಕೆ ಹೊಂದಿಕೊಂಡು ಒಟ್ಟಾಗಿ ಹತ್ತು ಹದಿನೈದು ಜನ ಸೇರಿಕೊಂಡು ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುವದು ವಿಶೇಷ.
ಇತ್ತೀಚಿನ ಯುವಕರಿಗೆ ಸಾಂಪ್ರದಾಯಿಕ ನಾಟಿ ಪದ್ಧತಿಯಲ್ಲಿ ಒಲವಿಲ್ಲ. ನಾಟಿಯ ಬಗ್ಗೆ ಅರಿವೂ ಇಲ್ಲ. ಹಿರಿಯರಷ್ಟೇ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮೊದಲೆಲ್ಲಾ ಭತ್ತವನ್ನು ಮಾರಾಟಕ್ಕಾಗಿ ಬಳಸುತ್ತಿದ್ದೆವು. ಈಗ ಸ್ವಂತಕ್ಕೆ ಅಗತ್ಯವಿರುವಷ್ಟು ಮಾತ್ರ ನಾಟಿ ಮಾಡುತ್ತೇವೆ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚಿಲ್ಲನ ಚಂದ್ರಶೇಖರ್ ಪ್ರತಿಕ್ರಿಯಿಸಿದರು. ಗ್ರಾಮದ ಜನರು ಮುಂಗಾರು ಪ್ರಾರಂಭವಾದೊಡನೆ ಬಿತ್ತನೆ ಮಾಡುವದರಿಂದ ನಾಟಿ ಕಾರ್ಯ ಬೇಗನೆ ಆರಂಭವಾಗುತ್ತದೆ. ಕಾಫಿ ತೋಟದ ಕೆಲಸಗಳು ಕಡಿಮೆ ಇರುವದರಿಂದ ಕೂಡು ನಾಟಿ ಪದ್ಧತಿಯಲ್ಲಿ ನಾಟಿ ಕಾರ್ಯ ಈ ವ್ಯಾಪ್ತಿಯಲ್ಲಿ ಬಿರುಸಿನಿಂದ ಸಾಗುತ್ತಿದೆ.
-ದುಗ್ಗಳ ಸದಾನಂದ