ಸೋಮವಾರಪೇಟೆ, ಜು. 11: ತಾಲೂಕಿನ ಅರೇಬಿಕಾ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದ ಈಗಾಗಲೇ ಕಾಯಿಕಟ್ಟಿರುವ ಕಾಫಿ ಫಸಲು ಕೊಳೆರೋಗಕ್ಕೆ ಒಳಗಾಗುತ್ತಿ ರುವ ನಡುವೆಯೇ ಕಂಬಳಿಹುಳುಗಳ ಹಾವಳಿ ಬೆಳೆಗಾರರ ನಿದ್ದೆಗೆಡಿಸಿದೆ. ಕಾಫಿ ಸೇರಿದಂತೆ ಇತರ ಉಪ ಬೆಳೆಗಳ ಎಲೆಗಳೇ ಕಂಬಳಿ ಹುಳ ಗಳಿಗೆ ಆಹಾರವಾಗಿದ್ದು, ತೋಟ ದೊಳಗೆ ಕೆಲಸ ನಿರ್ವಹಿಸುವ ಸಂದರ್ಭ ಕಾರ್ಮಿಕರಿಗೂ ಕಂಟಕವಾಗಿ ಪರಿಣಮಿಸಿದೆ.

ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿ ರುವ ಹಿನ್ನೆಲೆ ಕಾಫಿ ಗಿಡಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದೆ. ತೋಟ ದಲ್ಲಿರುವ ಇತರ ಮರಗಳ ಎಲೆಗಳು ಕಾಫಿ ಗಿಡದ ಮೇಲೆ ಬಿದ್ದು, ಕಾಫಿ ಗಿಡದ ರೆಂಬೆಕೊಂಬೆಗಳು, ಎಲೆಗಳು, ಕಾಯಿ ಕಟ್ಟಿರುವ ಫಸಲು ಕೊಳೆಯು ತ್ತಿವೆ. ಇದರೊಂದಿಗೆ ತಾಲೂಕಿನ ಕೊಡ್ಲಿಪೇಟೆ, ಶನಿವಾರಸಂತೆ, ಬೆಸೂರು, ಬೆಂಬಳೂರು ವ್ಯಾಪ್ತಿಯಲ್ಲಿ ಆಫ್ರಿಕನ್ ದೈತ್ಯ ಶಂಕುಹುಳುಗಳು ಕಾಣಿಸಿಕೊಂಡು ತೋಟವನ್ನು ಸರ್ವನಾಶ ಮಾಡುತ್ತಿರುವದು ಆ ಭಾಗದ ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ಈ ಮಧ್ಯೆ ತೋಟದಲ್ಲಿ ಅಸಂಖ್ಯಾತ ಸಂಖ್ಯೆಯ ಕಂಬಳಿ ಹುಳುಗಳು ಉತ್ಪತ್ತಿಯಾಗಿದ್ದು, ಬೆಳೆಗಾರ ವರ್ಗವನ್ನು ಇನ್ನಿಲ್ಲದ ಸಂಕಷ್ಟಕ್ಕೆ ತಳ್ಳಿದೆ.

ಸೋಮವಾರಪೇಟೆ, ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಂಬಳಿ ಹುಳುಗಳ ಕಾಟ ಅಧಿಕವಾಗಿದೆ. ಕಾಫಿ ತೋಟ ಸೇರಿದಂತೆ ಅರಣ್ಯ ಪ್ರದೇಶ ದಲ್ಲೂ ಯಥೇಚ್ಛವಾಗಿ ಕಂಬಳಿ ಹುಳುಗಳು ಉತ್ಪತ್ತಿಯಾಗುತ್ತಿದ್ದು, ಕಾಫಿ ಗಿಡದ ಎಲೆಗಳನ್ನು ತಿನ್ನಲು ಪ್ರಾರಂಭಿಸಿವೆ.

ಸುಮಾರು 5 ರಿಂದ 6 ತಿಂಗಳ ವರೆಗೂ ಜೀವಿಸಬಲ್ಲ ಕಂಬಳಿಹುಳು ಗಳು ಸಾವಿರಾರು ಸಂಖ್ಯೆಯಲ್ಲಿ ತೋಟದಲ್ಲಿ ಕಂಡುಬರುತ್ತಿದ್ದು, ಕಾಫಿ ಎಲೆಗಳನ್ನು ತಿನ್ನುತ್ತಿವೆ. ಎಲೆಗಳನ್ನು ಕಳೆದುಕೊಂಡ ಗಿಡಗಳು ಮುಂಚಿನ ಸ್ಥಿತಿಗೆ ಬರಲು ಕನಿಷ್ಟ 2 ವರ್ಷ ಬೇಕಾಗುತ್ತದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಜೂನ್, ಜುಲೈ ತಿಂಗಳಲ್ಲಿ ಕಂಬಳಿಹುಳುಗಳ ಸಂತಾನೋತ್ಪತ್ತಿ ಅಧಿಕವಾಗಿರುತ್ತವೆ. ಮೊಟ್ಟೆಯೊಡೆದು ಹೊರ ಬರುವ ಹುಳುಗಳು ಎರಡು ಮೂರು ದಿನಗಳಲ್ಲಿ ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಕಾಫಿ, ಏಲಕ್ಕಿ, ಕಾಳುಮೆಣಸು, ನೇರಳೆ, ಸಿಲ್ವರ್, ಪಾನವಾಳ ಸೇರಿದಂತೆ ಕಾಫಿ ತೋಟದಲ್ಲಿ ಬೆಳೆಯುವ ಇತರ ಗಿಡ ಮರಗಳ ಎಲೆಗಳೇ ಇವುಗಳಿಗೆ ಆಹಾರವಾಗಿವೆ.

ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ ಕೋಶಾವಸ್ಥೆಯಲ್ಲಿರುವ ಕೀಟಗಳನ್ನು ಸಂಗ್ರಹಿಸಿ ಸುಟ್ಟು ಹಾಕಬೇಕು. ಪತಂಗಗಳು ಹೆಚ್ಚಿರುವ ಪ್ರದೇಶಗಳಲ್ಲಿ ವಿದ್ಯುದ್ದೀಪಗಳನ್ನು ಹಾಕಿ ಬೆಳಕಿಗೆ ಆಕರ್ಷಣೆಗೊಂಡ ಪತಂಗಗಳನ್ನು ಕಲೆಹಾಕಿ ಸುಟ್ಟರೆ ಮಾತ್ರ ಕಂಬಳಿ ಹುಳುಗಳ ನಿಯಂತ್ರಣ ಸಾಧ್ಯ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿ ಕಾರಿ ಮುರುಳೀಧರ್ ತಿಳಿಸಿದ್ದಾರೆ.

ಕಂಬಳಿ ಹುಳುಗಳ ಆಮೂಲಾಗ್ರ ನಿಯಂತ್ರಣದ ಬಗ್ಗೆ ಯಾವದೇ ಸ್ಪಷ್ಟ ಮಾಹಿತಿ ಬೆಳೆಗಾರ ರಿಗೆ ಇಲ್ಲವಾಗಿದೆ. ಕ್ರಿಮಿಕೀಟಗಳಿಗೆ ಆಗಾಗ್ಗೆ ಔಷಧಿ ಗಳನ್ನು ಸಿಂಪಡಿಸ ಲಾಗುತ್ತಿದ್ದರೂ ಸಹ ಕಂಬಳಿ ಹುಳುಗಳ ನಿಯಂತ್ರಣ ಅಸಾಧ್ಯದ ಕೆಲಸವಾಗಿದೆ. ಎತ್ತರದ ಮರಗಳ ಎಲೆ ಅಡಿಯಲ್ಲಿ ಪತಂಗಗಳು ಮೊಟ್ಟೆಯಿಡುವದರಿಂದ ಕೋಶಾವಸ್ಥೆಯಲ್ಲಿಯೇ ನಿಯಂತ್ರಣ ಕಷ್ಟಸಾಧ್ಯವಾಗಿದೆ. ಈ ಬಗ್ಗೆ ಕಾಫಿ ಮಂಡಳಿಯ ತಜ್ಞರು ಪರಿಹಾರೋಪಾಯಗಳನ್ನು ಕಂಡು ಹಿಡಿಯಬೇಕೆಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ.