ಕುಶಾಲನಗರ, ಜು. 10: ಕುಶಾಲನಗರ ಕಾರು ಮಾಲೀಕರು ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಭಾರೀ ಅವ್ಯವಹಾರ ಹಿನ್ನೆಲೆಯಲ್ಲಿ ಇದೀಗ ಗ್ರಾಹಕರು ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಬಡ ಕೂಲಿ ಕಾರ್ಮಿಕರು ತಮ್ಮ ಉಳಿತಾಯ ಹಣವನ್ನು ಹಿಂತಿರುಗಿ ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿಯೊಂದಿಗೆ ಸಂಕಷ್ಟಕ್ಕೆ ಒಳಗಾಗಿರುವದು ಬೆಳಕಿಗೆ ಬರುತ್ತಿದೆ.
ಸಂಘದಲ್ಲಿ ಕೆಲವು ತಿಂಗಳ ಹಿಂದೆ ರೂ. 1 ಕೋಟಿ 16 ಲಕ್ಷದ ಮೊತ್ತದ ನಗದು ಅವ್ಯವಹಾರ ವಾಗಿದ್ದು ‘ಶಕ್ತಿ’ಯಲ್ಲಿ ವರದಿಯಾದ ಬೆನ್ನಲ್ಲೇ ಸಹಕಾರ ಸಂಘದ ಹಿರಿಯ ಅಧಿಕಾರಿಗಳು ಬ್ಯಾಂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಕೋಟಿ ರೂ.ಗಳಿಗೆ ಮಿಕ್ಕಿದ ನಗದು ಸಂಘದ ವ್ಯವಸ್ಥಾಪಕ, ಸಿಬ್ಬಂದಿ ಗಳು ಹಾಗೂ ಬ್ಯಾಂಕ್ ಅಧ್ಯಕ್ಷರ ಮೂಲಕ ಏರುಪೇರಾಗಿರುವದು ದಾಖಲೆಗಳ ಮೂಲಕ ಬೆಳಕಿಗೆ ಬಂದಿದೆ. ಈ ಬಗ್ಗೆ ಆಡಳಿತ ಮಂಡಳಿ ಯಿಂದ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಲಾಗಿದೆ.
ಸಹಕಾರ ಸಂಘದ ಖಾತೆದಾರರ ಬೇನಾಮಿ ಹೆಸರಿನಲ್ಲಿ ಹಣ ನಗದೀಕರಿಸಿರುವದು ಸಹಕಾರ ಸಂಘಗಳ ಹಿರಿಯ ಅಧಿಕಾರಿಗಳ ಆಡಿಟಿಂಗ್ ಸಂದರ್ಭ ದೃಢಪಟ್ಟಿದ್ದು ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಈ ಸಂಘದಲ್ಲ್ಲಿ ಕುಶಾಲನಗರದ ಕೆಲವು ಸ್ಥಳೀಯ ಸಹಕಾರ ಸಂಘಗಳ ಭಾರೀ ಮೊತ್ತದ ನಗದು ನಿರಖು ಠೇವಣಿ ಇರಿಸಲಾಗಿದ್ದು ಅದು ಕೂಡ ಅವ್ಯವಹಾರ ಗೊಂಡಿರುವದು ಕುಶಾಲನಗರದ ನಾಗರಿಕ ವಲಯದಲ್ಲಿ ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ.
ಇದೀಗ ಅವ್ಯವಹಾರ ಕ್ಕೋಳಗಾದ ಸಹಕಾರ ಸಂಘದ ಗ್ರಾಹಕರ ವ್ಯವಹಾರ ಬಹುತೇಕ ಸ್ಥಗಿತಗೊಂಡಿದ್ದು, ಹಲವು ಬಡ ಗ್ರಾಹಕರು ಪರದಾಡುವಂತಾಗಿದೆ.
ಸಂಘದಲ್ಲಿ ಕಷ್ಟಕ್ಕೆಂದು ಗಿರವಿ ಇಟ್ಟ ಒಡವೆಗಳನ್ನು ಕೂಡ ಹಿಂಪಡೆಯಲು ಅಡ್ಡಿಯಾಗಿದ್ದು, ಸ್ಥಳೀಯ ಗ್ರಾಹಕರೊಬ್ಬರು ಸಾಲದ ಹಣ ಪಾವತಿಸಿದರೂ ಇನ್ನೂ ಒಡವೆ ಕೈಸೇರಿಲ್ಲ ಎನ್ನುವ ದೂರು ಕೇಳಿಬಂದಿದೆ. ಈ ಸಂಘದಲ್ಲಿ ಅಡವಿಟ್ಟ ಚಿನ್ನವನ್ನು ಸ್ಥಳೀಯ ಇತರ ಸಹಕಾರ ಬ್ಯಾಂಕುಗಳಲ್ಲಿ ಅಡವು ಇಡುವ ಮೂಲಕ ಅಲ್ಲಿಂದ ಲಕ್ಷಗಟ್ಟಲೆ ನಿರಖು ಠೇವಣಿ ಪಡೆದಿದ್ದು ಇದು ಅವಾಂತರಕ್ಕೆ ಕಾರಣವಾಗಿದೆ. ಸಂಘದ ಸಿಬ್ಬಂದಿಗಳು, ಆಡಳಿತ ಮಂಡಳಿ ನಿರ್ದೇಶಕರುಗಳು ಕೂಡ ಸರಿಯಾಗಿ ಸ್ಪಂದನ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ಕೂಡಲೇ ಗ್ರಾಹಕರಿಗೆ ನ್ಯಾಯ ಒದಗಿಸ ಬೇಕೆಂದು ಕುಶಾಲನಗರ ಹಿತರಕ್ಷಣಾ ವೇದಿಕೆಯ ಸಂಚಾಲಕ ಕೆ.ಜಿ. ಮನು ಎಚ್ಚರಿಸಿದ್ದಾರೆ. - ಸಿಂಚು