ಮಡಿಕೇರಿ, ಜು. 11: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ವಿಧಾನ ಪರಿಷತ್ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ಗಮನ ಸೆಳೆದಿದ್ದಾರೆ.
ರಾಜ್ಯದಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ನಿಗದಿಪಡಿಸಿರುವ ಮಾನದಂಡ ಹಾಗೂ ನಿಯಮಗಳೇನು? ಎಂಬ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಅವರು ಮಾಹಿತಿ ನೀಡಿ ರಾಷ್ಟ್ರೀಯ ಪ್ರಧಾನಮಂತ್ರಿ ಡಯಾಲಿಸಿಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ 10 ಡಯಾಲಿಸಿಸ್ ಯಂತ್ರಗಳನ್ನು ಹಾಗೂ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 2 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವ ನಿರ್ದೇಶನವಿದೆ ಎಂದು ತಿಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಅವರು ಒಟ್ಟು 3 ಪ್ರಧಾನ ಆಸ್ಪತ್ರೆಗಳು, 20 ಜಿಲ್ಲಾ ಆಸ್ಪತ್ರೆಗಳು ಹಾಗೂ 148 ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಒದಗಿಸಲು ಕ್ರಮವಹಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಯಾಲಿಸಿಸ್ ಕೇಂದ್ರಗಳಲ್ಲಿ ಎಲ್ಲಾ ವರ್ಗದವರಿಗೆ ಉಚಿತವಾಗಿ ಡಯಾಲಿಸಿಸ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಇಲಾಖಾ ವತಿಯಿಂದ ಕೇಂದ್ರ ಸ್ಥಾಪನೆಗೆ ಸ್ಥಳಾವಕಾಶ, ನೀರು ಮತ್ತು ವಿದ್ಯುತ್ ಸೌಲಭ್ಯವನ್ನು ಒದಗಿಸಬೇಕಿದೆ. ಡಯಾಲಿಸಿಸ್ ಸೇವೆ ಒದಗಿಸಲು ಗುರುತಿಸಲಾದ ಸೇವಾದಾರರು ಮಾನವ ಸಂಪನ್ಮೂಲ, ಡಯಾಲಿಸಿಸ್ ಯಂತ್ರಗಳು, ಆರ್.ಓ. ಪ್ಲಾಂಟ್ ಹಾಗೂ ಡಯಾಲಿಸಿಸ್ ಪರಿಕರಗಳನ್ನು ಒದಗಿಸಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡಯಾಲಿಸಿಸ್ ಕೇಂದ್ರಗಳ ಸಂಖ್ಯೆ ಎಷ್ಟು ಹಾಗೂ ಯಾವುವು ಈ ಕೇಂದ್ರಗಳಿಗೆ ನಿಯೋಜಿಸಿರುವ ಸಿಬ್ಬಂದಿಗಳೆಷ್ಟು? ಎಂಬ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ. ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡಯಾಲಿಸಿಸ್ ಕೇಂದ್ರಗಳು-3, ಜಿಲ್ಲಾ ಆಸ್ಪತ್ರೆ, ಕೊಡಗು, ತಾಲೂಕು ಆಸ್ಪತ್ರೆ ಸೋಮವಾರಪೇಟೆ, ತಾಲೂಕು ಆಸ್ಪತ್ರೆ ವೀರಾಜಪೇಟೆ, ಈ ಕೇಂದ್ರಗಳಿಗೆ ಇಲಾಖಾ ವತಿಯಿಂದ ಸಿಬ್ಬಂದಿಗಳನ್ನು ನಿಯೋಜಿಸಿರುವದಿಲ್ಲ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಕೊಡಗು ಜಿಲ್ಲೆಯಲ್ಲಿ ಡಯಾಲಿಸಿಸ್ ಕೇಂದ್ರಗಳು ಸ್ಥಾಪನೆಯಾಗಿವೆಯೇ; ಹಾಗೂ ಅವು ಕಾರ್ಯ ನಿರ್ವಹಿಸುತ್ತಿವೆಯೇ? ಎಂಬ ಪ್ರಶ್ನೆಗೆ ಹೌದು ಎಂದು ಸಚಿವರು ತಿಳಿಸಿದ್ದಾರೆ ಇದರೊಂದಿಗೆ ಕೊಡಗು ಜಿಲ್ಲೆಯ ಮಡಿಕೇರಿ-ಮೂರ್ನಾಡು-ನಾಪೋಕ್ಲು-ಎಮ್ಮೆಮಾಡು-ಭಾಗಮಂಡಲ-ಕರಿಕೆ-ಪಾಣತ್ತೂರು-ಕಾಸರಗೋಡು ಈ ಮಾರ್ಗದಲ್ಲಿ ಸೂಕ್ತ ಬಸ್ ಸಂಚಾರ ವ್ಯವಸ್ಥೆ ಇಲ್ಲದಿರುವದರಿಂದ ಸಾರ್ವಜನಿಕರಿಗೆ ತೊಂದರೆಯಾಗಿರುವದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ವೀಣಾ ಅಚ್ಚಯ್ಯ ಪ್ರಶ್ನಿಸಿದ್ದಾರೆ. ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು, ಮಡಿಕೇರಿ-ಕಾಸರಗೋಡು ಮಾರ್ಗದ ಮೂರ್ನಾಡು, ನಾಪೋಕ್ಲು, ಎಮ್ಮೆಮಾಡು, ಭಾಗಮಂಡಲ, ಕರಿಕೆ, ಪಾಣತ್ತೂರು ಮಾರ್ಗ ಅಂತರರಾಜ್ಯ ಮಾರ್ಗವಾಗಿದೆ. ಈ ಮಾರ್ಗವು ಪ್ರಸ್ತುತ ಚಾಲ್ತಿಯಲ್ಲಿರುವ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ನಡುವಿನ ಅಂತರರಾಜ್ಯ ಪೂರಕ ಸಾರಿಗೆ ಒಪ್ಪಂದದಲ್ಲಿ ಸೇರಿರುವದಿಲ್ಲ, ಆದರೂ ಸಾರ್ವಜನಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ಮಂಗಳೂರು ವಿಭಾಗ ಮಂಗಳೂರು-3ನೇ ಘಟಕದ ಅನುಸೂಚಿಯಂತೆ ಮೈಸೂರು-ಮಡಿಕೇರಿ-ಮಂಗಳೂರು ಮಾರ್ಗ ಮೂರ್ನಾಡು, ನಾಪೋಕ್ಲು, ಎಮ್ಮೆಮಾಡು, ಭಾಗಮಂಡಲ, ಕರಿಕೆ, ಪಾಣತ್ತೂರು, ಕಾಸರಗೋಡು ಮಾರ್ಗದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಮಡಿಕೇರಿಯಿಂದ ಭಾಗಮಂಡಲ, ಕರಿಕೆ ನಂತರ ಬರುವ ಕರ್ನಾಟಕ-ಕೇರಳ ರಾಜ್ಯ ಗಡಿವರೆಗಿನ ಮಾರ್ಗ ರಾಷ್ಟ್ರೀಕೃತವಾಗದ ವಲಯದಲ್ಲಿದ್ದು, ಖಾಸಗಿ ಪ್ರವರ್ತಕರ ಸಾರಿಗೆ ಸೌಲಭ್ಯವಿದೆ ಎಂದು ಉತ್ತರಿಸಿದರು. ಸರ್ಕಾರ ಕೈಗೊಂಡಿರುವ ಕ್ರಮಗಳೇನು ಹಾಗೂ ಈ ಮಾರ್ಗದಲ್ಲಿ ಸಾಕಷ್ಟು ಸರ್ಕಾರಿ ಬಸ್ಗಳು ಸಂಚರಿಸುವಂತೆ ಯಾವ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲಾಗುವದು? ಎಂಬ ಪ್ರಶ್ನೆಗೆ. ಈ ಮಾರ್ಗದ ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ನಿಗಮದ ಮಂಗಳೂರು-1 ನೇ ಘಟಕದಿಂದ ಅನುಸೂಚಿ ಸಂಖ್ಯೆ 194/195 ರಲ್ಲಿ ಮಂಗಳೂರು-ಮೈಸೂರು ವಯಾ ಕಾಸರಗೋಡು, ಪಾಣತ್ತೂರು, ಕರಿಕೆ, ಭಾಗಮಂಡಲ, ಎಮ್ಮೆಮಾಡು, ನಾಪೋಕ್ಲು, ಮಡಿಕೇರಿ ಮಾರ್ಗದಲ್ಲಿ ಹಾಗೂ ಅನುಸೂಚಿ ಸಂಖ್ಯೆ 196/197 ರಲ್ಲಿ ಮಂಗಳೂರು-ಮೈಸೂರು ವಯಾ ಕಾಸರಗೋಡು, ಪಾಣತ್ತೂರು, ಕರಿಕೆ, ಭಾಗಮಂಡಲ, ಎಮ್ಮೆಮಾಡು, ನಾಪೋಕ್ಲು, ವೀರಾಜಪೇಟೆ ಮಾರ್ಗದಲ್ಲಿ ಅನುಕ್ರಮವಾಗಿ ದಿನಾಂಕ 13.3.2018 ಹಾಗೂ 14.3.2018 ರಿಂದ ನೂತನ ಸಾರಿಗೆಗಳನ್ನು ಪ್ರಾರಂಭಿಸಲಾಗಿತ್ತು. ಆದರೆ ಈ ಸಾರಿಗೆ ಸಂಪರ್ಕ ಸಂಬಂಧ ಸಾರ್ವಜನಿಕ ಪ್ರಯಾಣಿಕರಿಂದ ನಿರೀಕ್ಷಿತ ಪ್ರಮಾಣದಲ್ಲಿ ಉತ್ತೇಜನ ದೊರಕದೆ ನಷ್ಟ ಅನುಭವಿಸಿದ ಕಾರಣ, ಈ ಸಾರಿಗೆ ಮಾರ್ಗವನ್ನು ಏಪ್ರಿಲ್ 30 ರಿಂದ ರದ್ದುಗೊಳಿಸಲಾಗಿದೆ. ಈ ಸಾರಿಗೆಗಳು ನಷ್ಟ ಅನುಭವಿಸಿದ್ದರಿಂದ ಇವುಗಳನ್ನು ಪುನಃ ಪ್ರಾರಂಭಿಸುವ ಪ್ರಸ್ತಾವನೆ ಇಲ್ಲ ಎಂದು ಸಾರಿಗೆ ಸಚಿವರು ಮಾಹಿತಿ ನೀಡಿದ್ದಾರೆ.