ಮಡಿಕೇರಿ, ಜು. 10: ಮುಂದುವರಿದ ವರುಣನ ಮುನಿಸು ಜಿಲ್ಲೆಯ ಹಲವೆಡೆಗಳಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸುವದರೊಂದಿಗೆ, ನಿರಂತರ ಮಳೆ-ಗಾಳಿಯಿಂದ ಅಲ್ಲಲ್ಲಿ ಭೂಕುಸಿತದಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಂಡಿದೆ. ವಿದ್ಯುತ್ ಕಂಬಗಳು ಕೆಲವೆಡೆ ಧರೆಗುರುಳಿದ್ದು, ನಷ್ಟ ಉಂಟಾಗಿದೆ. ಜಿಲ್ಲಾಡಳಿತದಿಂದ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದೆ ಕೆಲವು ಶಾಲೆಗಳಿಗೆ ಆಯಾ ಆಡಳಿತ ಮಂಡಳಿ ವಿವೇಚನೆಯಡಿ ರಜೆ ಘೋಷಿಸಿತ್ತು.

ಮಂಗಳೂರು ಹೆದ್ದಾರಿಯ ಜೋಡುಪಾಲ ಬಳಿ ದೇವರಕೊಲ್ಲಿಯಲ್ಲಿ ರಸ್ತೆಗೆ ಅಡ್ಡಲಾಗಿ ವಾಲಿದ್ದ ವಿದ್ಯುತ್ ಕಂಬದಡಿ ನುಸುಳಲು ಯತ್ನಿಸಿದ ರಾಜ್ಯ ಸಾರಿಗೆ ಬಸ್ಸೊಂದು ಇಂದು ಬೆಳಿಗ್ಗೆ ಸಿಲುಕಿಕೊಂಡು ಅಗ್ನಿ ಶಾಮಕ ದಳ ಹಾಗೂ ಇತರ ಇಲಾಖೆಗಳ ನೆರವಿನಿಂದ ಯಾವದೇ ಅಪಾಯವಿಲ್ಲದೆ ಕಂಬ ಸರಿಪಡಿಸಿ, ಬಸ್ ಅನ್ನು ದಾಟಿಸಿದ ಪ್ರಸಂಗವೂ ನಡೆಯಿತು.ಸಂಚಾರಕ್ಕೆ ಧಕ್ಕೆ: ಇನ್ನು ಜೋಡುಪಾಲ ಬಳಿ ಲಾರಿಯೊಂದರ ಮೇಲೆ ಮರ ಮುರಿದು ಬೀಳುವದರೊಂದಿಗೆ, ಮರ ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಲಾಯಿತು. ಇತ್ತ ಬೋಯಿಕೇರಿ-ಕಡಗದಾಳು ಮಾರ್ಗದಲ್ಲಿ ಮರ ಬಿದ್ದು ಸಂಪರ್ಕ ಕಡಿತಗೊಂಡಿತು. ಮಂಗಳೂರು ರಸ್ತೆಯ 3ನೇ ಮೈಲು ಬಳಿ ಭೂಕುಸಿತ ಉಂಟಾಗಿ ಮಣ್ಣು ತೆರವುಗೊಳಿಸಿ ಸಂಚಾರ ವ್ಯವಸ್ಥೆ ಕಲ್ಪಿಸಲಾಯಿತು. ನಗರದ ಚೈನ್‍ಗೇಟ್ ಬಳಿಯೂ ರಸ್ತೆ ಬದಿ ಮಣ್ಣು ಕುಸಿದಿದೆ.

ಮನೆಗಳಿಗೆ ಹಾನಿ: ಮಹದೇವಪೇಟೆಯಲ್ಲಿ ವಿಮಲ ಎಂಬವರು ಇದ್ದ ಬಾಡಿಗೆ ಮನೆಯ ಮಾಡು ಹಾನಿಗೊಂಡು ಮಳೆಯಿಂದ ನಷ್ಟ ಸಂಭವಿಸಿದೆ. ಹೆಬ್ಬೆಟ್ಟಗೇರಿಯ ನಿವಾಸಿ ಅಂಬಿಕ ರಾಜನ್ ಎಂಬವರ ಮನೆ ಬಳಿ ಭೂಕುಸಿದು ಹಾನಿಯಾಗಿದ್ದು, ಗಾಳಿಬೀಡು ನಿವಾಸಿ ಕೆ. ತಿಮ್ಮ ಎಂಬವರ ಮನೆ ಹಿಂಭಾಗ ಬರೆ ಕುಸಿದು ನಷ್ಟ ಉಂಟಾಗಿದೆ.

ತೆರವು ಕಾರ್ಯಾಚರಣೆ: ಗಾಳಿಬೀಡು-ಕಾಲೂರು ನಡುವೆ ನಿನ್ನೆ ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ತಹಶೀಲ್ದಾರ್ ಕುಸುಮ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಅಲ್ಲದೆ ಮಂಗಳೂರು ವಿಭಾಗದ ಪಂಚಾಯತ್ ರಾಜ್ ಇಲಾಖೆಯ ಪ್ರಧಾನಮಂತ್ರಿ ಗ್ರಾಮ ಸಡಕ್ ರಸ್ತೆ ಮೇಲುಸ್ತುವಾರಿ

(ಮೊದಲ ಪುಟದಿಂದ) ಅಧೀಕ್ಷಕ ಅಭಿಯಂತರ ಎಸ್. ರವೀಂದ್ರ ಕಿಣಿ, ಕಾರ್ಯಪಾಲಕ ಅಭಿಯಂತರ ಗುಂಡಪ್ಪ, ಸಹಾಯಕ ಅಭಿಯಂತರ ಪೂವಯ್ಯ ಹಾಗೂ ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಭೇಟಿ ನೀಡಿ ಮಣ್ಣು ಕುಸಿತ ತೆರವಿಗೆ ಕ್ರಮಕೈಗೊಂಡಿದ್ದಾರೆ. ಗುತ್ತಿಗೆದಾರ ಗೋಪಾಲ್ ನೇತೃತ್ವದಲ್ಲಿ ಇಂದು ರಸ್ತೆಯಲ್ಲಿ ಮರಗಳನ್ನು ತೆರವುಗೊಳಿಸಲಾಯಿತು. ತಾ. 11 ರಂದು (ಇಂದು) ಮಣ್ಣು ತೆಗೆಸಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವದು ಎಂದು ಅಧೀಕ್ಷಕ ಅಭಿಯಂತರ ಎಸ್. ರವೀಂದ್ರ ಕಿಣಿ ‘ಶಕ್ತಿ’ ಯೊಂದಿಗೆ ತಿಳಿಸಿದರು.

ಮಳೆ ಪರಿಹಾರಕ್ಕೆ ಸಲಹೆ: ಘಟನೆ ಸ್ಥಳದಲ್ಲಿ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ರಸ್ತೆ ನಿರ್ಮಾಣಗೊಳಿಸಿ 4 ವರ್ಷವಾಗಿದ್ದು, ಪ್ರಸಕ್ತ ಭೂಕುಸಿತದಿಂದ ಹಾನಿಯನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ಗಮನ ಹರಿಸಿ, ಪ್ರಕೃತಿ ವಿಕೋಪ ನಿಧಿಯನ್ನು ಗುತ್ತಿಗೆದಾರರಿಗೆ ಕಲ್ಪಿಸಲು ಕಾಳಜಿ ವಹಿಸುವಂತೆ ಸಲಹೆ ನೀಡಿದರು.

ಅಲ್ಲದೆ ಈ ರಸ್ತೆಯ ಬದಿ ಬೆಟ್ಟ ಪ್ರದೇಶವಾಗಿದ್ದು, ಹಿಂದಿನ ವರ್ಷವೂ ಭೂಕುಸಿದಿದ್ದು, ಮುಂದೆಯೂ ಅಪಾಯ ಎದುರಾಗುವ ಸಂಭವವಿರುವದಾಗಿ ಅಭಿಪ್ರಾಯಪಟ್ಟರು.

ಆತಂಕ ಸೃಷ್ಟಿ: ದಕ್ಷಿಣ ಕೊಡಗಿನ ಕೋರಿಮಲೆ ಬೆಟ್ಟ ಪ್ರದೇಶದಲ್ಲಿ ಭೂಕುಸಿತದೊಂದಿಗೆ ಪೂಜೆಕಲ್ಲು ವ್ಯಾಪ್ತಿಯಲ್ಲಿ ಕೈಬುಲೀರ ಹಾಗೂ ಮಾಚಿಮಾಡ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇಲ್ಲಿನ ರಾಮತೀರ್ಥ ಹಾಗೂ ಲಕ್ಷ್ಮಣತೀರ್ಥ ನದಿಗಳು ತುಂಬಿ ಹರಿಯುವದರೊಂದಿಗೆ ಸುತ್ತ ಮುತ್ತಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವ ಸಂಭವವಿದೆಯೆಂದು ಹೊಟ್ಟೆಂಗಡ ತಿಮ್ಮ ‘ಶಕ್ತಿ’ಯೊಂದಿಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಜಿ.ಪಂ. ಅಧ್ಯಕ್ಷರ ಭೇಟಿ: ಭಾಗಮಂಡಲ ಸಂಗಮ ಕ್ಷೇತ್ರ ಕಳೆದೆರಡು ದಿನಗಳಿಂದ ಜಲಾವೃತಗೊಂಡು ಅಯ್ಯಂಗೇರಿ ರಸ್ತೆಯಲ್ಲಿ ಐದು ಅಡಿಯಷ್ಟು ನೀರು ಹರಿಯುತ್ತಾ, ನಾಪೋಕ್ಲು-ಭಾಗಮಂಡಲ ನಡುವೆ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ ರಸ್ತೆಯಲ್ಲಿ ಎರಡು ಅಡಿ ನೀರು ಆವರಿಸಿದ್ದು, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ಸದಸ್ಯ ಕುಮಾರ್ ಖುದ್ದು ಪರಿಸ್ಥಿತಿ ವೀಕ್ಷಿಸಿದರು.

ನಿನ್ನೆ ಸಾರ್ವಜನಿಕ ಸಂಚಾರಕ್ಕೆ ದೋಣಿ ಸೌಲಭ್ಯವಿಲ್ಲದೆ ಪರದಾಟವಾದರೆ, ಇಂದು ದೋಣಿ ವ್ಯವಸ್ಥೆಯಲ್ಲಿ ಜನರನ್ನು ನದಿ ದಾಟಿಸುವ ಪ್ರಯತ್ನ ನಡೆದರೂ, ನುರಿತವರ ಕೊರತೆಯಿಂದ ಭಯದ ನಡುವೆ ಅನಿವಾರ್ಯವಾಗಿ ಸ್ಥಳೀಯರು ತೆರಳಬೇಕಾಯಿತು.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ನಗರದ ಸೋಮವಾರಪೇಟೆ ರಸ್ತೆಯ ರಾಜರಾಜೇಶ್ವರಿ ಶಾಲೆ ಬಳಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಂಬ ಮುರಿದು ಕಾರಿನ ಮೇಲೆ ನಿಂತಿದ್ದು, ಯಾವದೇ ಅನಾಹುತ ಸಂಭವಿಸಿಲ್ಲ. ಈ ಕಾರು ಮಕ್ಕಂದೂರಿನ ವ್ಯಕ್ತಿಗೆ ಸೇರಿದ್ದೆನ್ನಲಾಗಿದೆ.

ಮಕ್ಕಳ ಪರದಾಟ: ಇಂದು ಜಿಲ್ಲಾಡಳಿತದಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದ ಪರಿಣಾಮ ವಿದ್ಯಾರ್ಥಿ ಸಮೂಹ ಎಲ್ಲೆಡೆ ಮಳೆಯ ನಡುವೆ ಸಂಕಷ್ಟ ಅನುಭವಿಸಬೇಕಾಯಿತು. ಅನೇಕ ಕಡೆಗಳಲ್ಲಿ ವಿಪರೀತ ಗಾಳಿ-ಮಳೆಯೊಂದಿಗೆ ಚಿಣ್ಣರು ಆತಂಕದಲ್ಲಿ ಹೆಜ್ಜೆ ಇರಿಸುತ್ತಿದ್ದ ದೃಶ್ಯ ಕಂಡುಬಂತು. ಮಕ್ಕಳ ಪೋಷಕರು ಕೂಡ ಪತ್ರಿಕಾಲಯಕ್ಕೆ ಕರೆ ಮಾಡಿ ರಜೆ ಘೋಷಣೆ ಸಂಬಂಧ ಪ್ರಶ್ನಿಸುತ್ತಾ, ಆತಂಕ ಹಂಚಿಕೊಳ್ಳುತ್ತಿದ್ದ ಸ್ಥಿತಿ ಎದುರಾಯಿತು.

ಮುಳುಗಿದ ಗದ್ದೆಗಳು

ಸೋಮವಾರಪೇಟೆ: ತಾಲೂಕಿನಾದ್ಯಂತ ಮಳೆಯ ಆರ್ಭಟ ಹೆಚ್ಚಾಗಿದ್ದು, ರಸ್ತೆಯ ಬದಿಯ ಚರಂಡಿಗಳೇ ತೋಡಿನಂತಾಗಿವೆ. ಇಂದು ಬೆಳಗ್ಗಿನಿಂದಲೇ ಭಾರೀ ವರ್ಷಾಧಾರೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಲೂಕಿನ ಹರಗ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಗದ್ದೆಗಳು ಮುಳುಗಡೆಯಾಗಿವೆ. ಹರಗ ಹೊಳೆ ತುಂಬಿ ಹರಿದ ಪರಿಣಾಮ ಹೊಳೆಪಾತ್ರದ ಗದ್ದೆಗಳಿಗೆ ನೀರು ನುಗ್ಗಿ ಸಸಿಮಡಿಗಳಿಗೆ ಹಾನಿಯಾಗಿವೆ.

ಹರಗ ಗ್ರಾಮದ ಮಂಜುನಾಥ್, ಡಿ.ವಿಜಯ, ಲಿಂಗರಾಜು, ಹೆಚ್.ಪಿ. ದಿನೇಶ್, ದೀಪಕ್, ಬಿ.ಈ. ಹುಚ್ಚಯ್ಯ ಸೇರಿದಂತೆ ಇತರರ ಗದ್ದೆಗಳಿಗೆ ನೀರು ನುಗ್ಗಿದ್ದು, ಸಸಿಮಡಿ ಹಾನಿಯಾಗಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 7 ಇಂಚಿನಷ್ಟು ಮಳೆ ದಾಖಲಾಗಿದೆ ಎಂದು ಹರಗ ಗ್ರಾಮದ ದಿನೇಶ್ ತಿಳಿಸಿದ್ದಾರೆ.

ಇದರೊಂದಿಗೆ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಭಾರೀ ವರ್ಷಾಧಾರೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ದಿನದ 24 ಗಂಟೆಯೂ ಮಳೆಯಾಗುತ್ತಿದ್ದು, ಜನರು ಮನೆಯಿಂದ ಹೊರಬರಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಮಳೆ ಕಡಿಮೆಯಾಗದ ಹೊರತು ಕೃಷಿ ಕಾರ್ಯಕೈಗೊಳ್ಳಲು ಸಾಧ್ಯವಾಗುವದಿಲ್ಲ ಎಂದು ಹರಗ ಗ್ರಾಮದ ಶರಣ್ ಅಭಿಪ್ರಾಯಿಸಿದ್ದಾರೆ.

ವೀರಾಜಪೇಟೆ ವಿಭಾಗಕ್ಕೆ ಮಳೆ

ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗಿನಿಂದÀ ಇಂದಿನ ಬೆಳಗಿನ 8 ಗಂಟೆಯ ತನಕ 1.66 ಇಂಚು ಮಳೆ ಸುರಿದಿದೆ. ಇಂದು ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಇದ್ದು ಭಾರೀ ಮಳೆ ಮುಂದುವರೆದಿದೆ.

ಹಳೆÀಗೋಟೆ ಸಂಚಾರಕ್ಕೆ ಅಡ್ಡಿ

ಹೆಬ್ಬಾಲೆ: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳೆಗೋಟೆ ಗ್ರಾಮದಲ್ಲಿ ಹಾದುಹೋಗಿರುವ ಹಾರಂಗಿ ಎಡದಂಡೆ ನಾಲೆ ಕುಸಿದು ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಗೋಟೆ ಗ್ರಾಮದ ಎಡದಂಡೆ ನಾಲೆಗೆ ಹೊಂದಿಕೊಂಡಿರುವ ಮಣ್ಣಿನ ರಸ್ತೆಯ ಬರೆ ಕುಸಿದು ದೊಡ್ಡ ಹೊಂಡ ನಿರ್ಮಾಣವಾಗಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಮಳೆಯಿಂದಾಗಿ ಬರೆ ಕುಸಿದು ಎತ್ತಿನ ಗಾಡಿ ಹಾಗೂ ವಾಹನಗಳ ಸಂಚಾರಕ್ಕೂ ಅನಾನುಕೂಲವಾಗಿದೆ. ಇದರಿಂದ ರೈತರಿಗೆ ತುಂಬಾ ತೊಂದರೆ ಉಂಟಾಗಿದೆ. ಈ ಭಾಗದಲ್ಲಿ ಕಾಡಾನೆ ಹಾವಳಿ ಕೂಡ ಇದ್ದು, ರಾತ್ರಿ ವೇಳೆಯಲ್ಲಿ ಸಂಚರಿಸಲು ತುಂಬ ಕಷ್ಟವಾಗಿದೆ. ನಾಲೆ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾಗುವ ಮುನ್ನ ನೀರಾವರಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಕೂಡಲೇ ನಾಲೆ ದುರಸ್ತಿಪಡಿಸಲು ಕ್ರಮ ಕೈಗೊಳ್ಳುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ನಿವಾಸಿ ರವಿಕುಮಾರ್ ಒತ್ತಾಯಿಸಿದ್ದಾರೆ.

ತಿತಿಮತಿ ಸಂಚಾರ ಸುಗಮ

ಗೋಣಿಕೊಪ್ಪ ವರದಿ : ಭೂ ಕುಸಿತ ಹಾಗೂ ಕೆಸರಿನಿಂದಾಗಿ ಸಂಪರ್ಕ ಕಳೆದುಕೊಂಡಿದ್ದ ತಿತಿಮತಿ ಸೇತುವೆ ಮೂಲಕ ಮಂಗಳವಾರದಿಂದ ವಾಹನ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ನರಕಯಾತನೆಯಿಂದ ಸಂಚಾರಕ್ಕೆ ಮುಕ್ತವಾಗಿದೆ. ಬಸ್ ಸೇರಿದಂತೆ ಎಲ್ಲಾ ವಾಹನಗಳು ಸಂಚಾರ ಆರಂಭಿಸಿವೆ.

ಭಾನುವಾರ ಬಿದ್ದ ಭಾರೀ ಮಳೆಗೆ ತಾತ್ಕಾಲಿಕ ಸೇತುವೆಯಲ್ಲಿ ಭೂಕುಸಿತಗೊಂಡು ಸಂಪರ್ಕಕ್ಕೆ ತೊಡಕುಂಟಾಗಿತ್ತು. ಸೇತುವೆಯ ರಸ್ತೆ ತೀರಾ ಕೆಸರಿನಿಂದ ಕೂಡಿದ್ದರಿಂದ ತೊಂದರೆ ಉಂಟಾಗಿತ್ತು. ವಾಹನಗಳು ಸಾಲು, ಸಾಲು ನಿಂತು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರದ ಎರಡು ದಿನಗಳ ಕಾಲ ನೂತನ ಸೇತುವೆ ಮೇಲೆ ಕಲ್ಲು ಹಾಕಿ ವಾಹನ ಸಂಚರಿಸಲು ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಇದರಿಂದಾಗಿ ಮಾಲ್ದಾರೆ, ನಾಗರಹೊಳೆ ಮೂಲಕ ದೂರದ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳು ಮತ್ತೆ ಇದೇ ಮಾರ್ಗದಲ್ಲಿ ಸಂಚರಿಸುವಂತಾಗಿದೆ. ನಿನ್ನೆ ರಾತ್ರಿ 9 ಗಂಟೆ ಬಳಿಕ ಸಂಚಾರ ಸುಗಮಗೊಂಡಿದೆ ಎಂದು ಕರ್ನಾಟಕ ರಸ್ತೆ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಸಹಾಯಕ ಅಭಿಯಂತರ ರಮೇಶ್ ಖಚಿತ ಪಡಿಸಿದ್ದಾರೆ.

ಹೆದ್ದಾರಿಯಲ್ಲಿ ಬಿದ್ದ ಮರ : ಸಂಚಾರಕ್ಕೆ ಅಡಚಣೆ

ಕರಿಕೆ: ಕರಿಕೆ-ಭಾಗಮಂಡಲ ಅಂತರರಾಜ್ಯ ಹೆದ್ದಾರಿ ಮೇಲಡ್ಕ ಸಮೀಪ ರಸ್ತೆಗೆ ತಡರಾತ್ರಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಬೆಳಗ್ಗಿನವರೆಗೂ ರಸ್ತೆಯಲ್ಲೇ ಉಳಿಯಬೇಕಾಯಿತು.

ಬೆಳಿಗ್ಗೆ ಖಾಸಗಿ, ಸಾರಿಗೆ ಬಸ್ ಸೇರಿದಂತೆ ಅನೇಕ ವಾಹನಗಳು ರಸ್ತೆಯಲ್ಲಿ ನಿಲ್ಲಿಸಲ್ಪಟ್ಟಿದ್ದವು. ಪ್ರಯಾಣಿಕರು ಹಾಗೂ ಗ್ರಾಮಸ್ಥರ ಸಹಕಾರದಿಂದ ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.

ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಅಪಾಯದ ಅಂಚಿನಲ್ಲಿರುವ ಮರ ತೆರವುಗೊಳಿಸಲು ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಎಚ್ಚೆತ್ತುಕೊಂಡು ರಸ್ತೆ ಬದಿ ಮರ ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಕುಶಾಲನಗರ: ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಅಣೆಕಟ್ಟು ತುಂಬಿ ತುಳುಕುತ್ತಿದ್ದರೆ ಇತ್ತ ಹಾರಂಗಿ ಪ್ರವಾಸಿ ಮಂದಿರ ನೀರು ಪಾಲಾಗುತ್ತಿರುವ ದೃಶ್ಯ ಗೋಚರಿಸಿದೆ. ಇತ್ತೀಚೆಗೆ ಬಂದ ಗಾಳಿ ಮಳೆಗೆ ಪ್ರವಾಸಿ ಮಂದಿರದ ಹಂಚುಗಳು ಹಾರಿಹೋಗಿದ್ದು ಮಳೆ ನೀರು ಕಟ್ಟಡದ ಒಳಗೆ ಬೀಳುತ್ತಿರುವ ದೃಶ್ಯ ಕಂಡುಬಂದಿದೆ.

ಮಳೆಯಿಂದ ಮಕ್ಕಳಿಗೆ ರಜೆ

ಶ್ರೀಮಂಗಲ:ದಕ್ಷಿಣ ಕೊಡಗಿನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಹಗಲು ತೀವ್ರಗೊಂಡಿದ್ದು, ಶ್ರೀಮಂಗಲ,ಟಿ. ಶೆಟ್ಟಿಗೇರಿ, ಬಿರುನಾಣಿ,ಬಿ.ಶೆಟ್ಟಿಗೇರಿ, ಹುದಿಕೇರಿ ಗ್ರಾ.ಪಂ.ವ್ಯಾಪ್ತಿಗೆ ಬಾರಿ ಮಳೆಯಾಗುತ್ತಿದೆ.24 ಗಂಟೆಯಲ್ಲಿ ಬಿರುನಾಣಿ ವ್ಯಾಪ್ತಿಗೆ 5.57 ಇಂಚು,ಬಾಡಗರಕೇರಿ 4.93 ಇಂಚು,ಶ್ರೀಮಂಗಲ ವ್ಯಾಪ್ತಿಗೆ 4.76 ಇಂಚು ದಾಖಲೆಯ ಮಳೆ ಸುರಿದಿದೆ.ಮಂಗಳವಾರ ದಿನ ಪೂರ್ತಿ ಎಡೆಬಿಡದೆ ಸುರಿದ ಮಳೆಯಿಂದ ಈ ವ್ಯಾಪ್ತಿಯ ಲಕ್ಷ್ಮಣ ತೀರ್ಥ,ಕಕ್ಕಟ್ ನದಿಗಳು ಉಕ್ಕಿ ಹರಿಯುತ್ತಿದೆ.

ತೀವ್ರ ಮಳೆ ಗಾಳಿಯಿಂದ ಈ ವ್ಯಾಪ್ತಿಯ ಖಾಸಗಿ ಶಾಲೆ ಮಂಡಳಿ ವಿವೇಚನೆ ಮೇರೆಗೆ ರಜೆ ಘೋಷಣೆ ಮಾಡಿದೆ. ಅಧಿಕ ಮಳೆಯಾಗುತ್ತಿದ್ದರೂ ಜಿಲ್ಲಾಡಳಿತ ಶಾಲಾ-ಕಾಲೇಜಿಗೆ ರಜೆ ನೀಡದ ಹಿನ್ನೆಲೆ, ಟಿ. ಶೆಟ್ಟಿಗೇರಿಯ ರೂಟ್ಸ್ ವಿದ್ಯಾಸಂಸ್ಥೆ ರಜೆ ಘೋಷಣೆ ಮಾಡಿತು.

ಶಾಲಾ ಬಸ್ಸು ಗ್ರಾಮೀಣ ಭಾಗಕ್ಕೆ ತೆರಳಿ ಮಕ್ಕಳನ್ನು ಕರೆತರಲು ಅಡಚಣೆ ಹಿನ್ನೆಲೆ ರಜೆ ಘೋಷಣೆ ಮಾಡಿತ್ತು. ಶಾಲೆಯ ವಿವಿಧ ಕಡೆಯ ವಿದ್ಯಾರ್ಥಿಗಳ ಪೋಷಕರಿಂದ ಮಳೆಯ ತೀವ್ರತೆಯ ಮಾಹಿತಿ ಪಡೆದು ರಜೆ ಘೋಷಣೆ ಮಾಡಿದೆ.

ಬಹುತೇಕ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುವದನ್ನು ಅರಿತು ಈ ಕ್ರಮ ಕೈಗೊಂಡಿದೆ. ಪೋಷಕರ ಮನವಿಯಂತೆ ವಿದ್ಯಾರ್ಥಿಗಳ ಸುರಕ್ಷತೆಗೆ,ಶಾಲಾ ಕಾಲೇಜಿನ ಆಡಳಿತ ಮಂಡಳಿ ರಜೆ ಘೋಷಣೆ ಮಾಡಲಾಗಿದೆ ಎಂದು ಶಿಕ್ಷಣ ಸಂಸ್ಥೆ ತಿಳಿಸಿದೆ.

ಕೂಡಿಗೆ : ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕಾವೇರಿ ನದಿ ಹಾಗೂ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಹರಿವಿಕೆ ಹೆಚ್ಚಳವಾಗಿದೆ. ಪರಿಣಾಮ ಕಣಿವೆ ಸಮೀಪದ ದಿವಾಕರ್ ಎಂಬವರಿಗೆ ಸೇರಿದ ಚೆಂಡು ಹೂವಿನ ಬೆಳೆ 2 ಎಕರೆ ಪ್ರದೇಶ ಸಂಪೂರ್ಣ ಜಲಾವೃತಗೊಂಡು ಭಾರೀ ನಷ್ಟವುಂಟಾಗಿದೆ.