ಅದು 6 ಪ್ರಬಲ ತಂಡಗಳ ಜಿದ್ದಾಜಿದ್ದಿಯ ಹೋರಾಟದ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ, ಇಲ್ಲಿ ಗೆಲುವು ಸವಾಲಿನ ಸಾಧನೆಯೇ ಸರಿ. ಇಂತಹ ಕದನ ಕುತೂಹಲದ ರಣಾಂಗಣದಲ್ಲಿ ಹಾಕಿ ಮಹಾ ವಿಶ್ವ ಸಮರ ನಡೆದಿದ್ದು ನೆದರ್ಲೆಂಡ್ಸ್‍ನ ಬ್ರೆಡಾದಲ್ಲಿ, ಪ್ರತೀ ಪಂದ್ಯವೂ ಗೆಲುವಿನ ಅವಶ್ಯಕತೆಯನ್ನು ಬಯಸುತ್ತಿತ್ತು. ಪಂದ್ಯಗಳ ಪ್ರತೀ ಗೆಲುವು ಮುನ್ನಡೆಗೆ ಸಹಕಾರಿಯಾಗುತ್ತಿತ್ತು. ಸ್ವಲ್ಪ ಯಮಾರಿದರೂ ಫೈನಲ್ ಕನಸು ನನಸಾಗದೇ ಇರುವ ಸಂಭವವೇ ಹೆಚ್ಚಿತ್ತು. ವಿಜಯಗಳ ಯಾತ್ರೆಗೆ ಪ್ರತೀ ತಂಡವು ಹಂಬಲಿಸುತ್ತಿತ್ತು.
ಭಾರತ ಈ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಭರ್ಜರಿ ತಯಾರಿಯನ್ನೇ ನಡೆಸಿತ್ತು. ಭಾರತದ ನೂತನ ಹಾಕಿ ಕೋಚ್ ಹರೇಂದ್ರಸಿಂಗ್ ಮಾರ್ಗದರ್ಶನ ದಲ್ಲಿ ಪ್ರಬುದ್ಧ ಗರಡಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಅಖಾಡಕ್ಕೆ ಫೆವರೇಟ್ ಸ್ಪರ್ಧಿಯಾಗೇ ಧುಮುಕಿತ್ತು. ಈ ಹಿಂದೆ ಗೋಲ್ಡ್ ಕೋಸ್ಟ್ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತದ ಪ್ರದರ್ಶನ ತೀರಾ ಕಳಪೆ ಎನ್ನಿಸಿತ್ತು. ಇದೀಗ ಅದರಿಂದ ಹೊರ ಬಂದು, ಮತ್ತೆ ಲಯ ಕಂಡುಕೊಳ್ಳಲು ಚಾಂಪಿಯನ್ಸ್ ಟ್ರೋಫಿ ಸಮರ ಕಣ ಸೂಕ್ತ ವೇದಿಕೆಯಾಗಿತ್ತು. ಈ ಪುರುಷರ ಹಾಕಿ ಸ್ಪರ್ಧೆಯಲ್ಲಿ ಭಾರತ ಕಳೆದ 36 ವರ್ಷಗಳಿಂದಲೂ ಗೆಲುವು ಕಂಡಿಲ್ಲ. 2016ರಲ್ಲಿ ರನ್ನರ್‍ಅಪ್ ಸ್ಥಾನ ಪಡೆದ ಸಾಧನೆಯೇ ಈಗ ಉತ್ತಮ ಸಾಧನೆ ಎನ್ನಿಸಿದ್ದು, 2018 ಚಾಂಪಿಯನ್ಸ್ ಟ್ರೋಫಿ ಗೆಲುವು ಭಾರತ ಕನಸಾಗಿದ್ದು, ಇದರ ಸಾಧನೆಗಾಗಿ ಪಣ ತೊಟ್ಟಿತ್ತು. ಭಾರತದ ಬಲವು ಸತತ ಅಭ್ಯಾಸ, ಪರಿಶ್ರಮದಿಂದ ವೃದ್ಧಿಸಿತ್ತು.
ಇತ್ತೀಚೆಗೆ ನಡೆದ ಈ ಪಂದ್ಯಾವಳಿಯಲ್ಲಿದ್ದವು. ವಿಶ್ವದ ಪ್ರಬಲ ರಾಷ್ಟ್ರಗಳಾದ ಆಸ್ಟ್ರೇಲಿಯಾ ಅತಿಥೇಯ ನೆದರ್ಲೆಂಡ್, ಬೆಲ್ಜಿಯಂ, ಅರ್ಜೆಂಟೀನಾ, ಪಾಕಿಸ್ತಾನ ಹಾಗೂ ಭಾರತ. ಈ ಬಲಾಡ್ಯ ತಂಡಗಳು ಭಾರತಕ್ಕೆ ಕಠಿಣ ಸ್ಪರ್ಧೆಯನ್ನು ನೀಡುವದಂತೂ ಖಡಾಖಂಡಿತವಾಗಿತ್ತು. ಭಾರತಕ್ಕೆ ಪ್ರಥಮ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಬೇಕಾಗಿತ್ತು. ಪಾಕಿಸ್ತಾನವನ್ನು ಮಣಿಸಿದ ಭಾರತ ಬಲಿಷ್ಠ, ಅರ್ಜೆಂಟೀನಾ ತಂಡವನ್ನು ಸೋಲಿಸಿ ಹೆಮ್ಮೆಯ ಸಾಧನೆ ಮಾಡಿ ಇತರೆ ಘಟಾನುಘಟಿ ತಂಡಗಳಲ್ಲಿ ನಡುಕ ಮೂಡಿಸಿತು. ರಿಯೋ ಒಲಂಪಿಕ್ಸ್ ಬೆಳ್ಳಿ ವಿಜೇತ ಬೆಲ್ಜಿಯಂ ವಿರುದ್ಧ ಕೊನೇ ಕ್ಷಣದ ತನಕವು ತನ್ನ ಅದ್ಭುತ ಆಟದಿಂದ 1-0 ಮುನ್ನಡೆಯಲಿದ್ದ ಭಾರತ, ಅಂತಿಮ ಕ್ಷಣದಲ್ಲಿ, ಒತ್ತಡವನ್ನು ನಿಭಾಯಿಸಲು ಅಸಮರ್ಥವಾಗಿ ಒಂದು ಗೋಲು ಬಿಟ್ಟುಕೊಟ್ಟು ಡ್ರಾ ಕಾಣು ವಂತಾಯಿತು. ಈ ಹಿಂದೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ, ಅದ್ಭುತ ಪ್ರದರ್ಶನ ತೋರಿದ ಶ್ರೀಜೇಶ್ ನಾಯಕತ್ವದ ತಂಡ ಅಂತಿಮವಾಗಿ 2-3ರಿಂದ ಸೋಲು ಕಂಡಿತ್ತು. ನಂತರ ನಡೆದ ಅತಿಥೇಯ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂತಿಮ ಕ್ಷಣದವರೆಗೂ ಭಾರೀ ಹೋರಾಟ ನಡೆಸಿದ ಭಾರತ, ನೆದರ್ಲೆಂಡ್ ಆಕ್ರಮಣಕಾರಿ ಆಟವನ್ನು ತಡೆಗಟ್ಟುವಲ್ಲೇ ಹೆಚ್ಚಿನ ಮುತುವರ್ಜಿ ವಹಿಸಿ, ಜಯ ಕಾಣದೇ ಹೋದರೂ 1-1 ಗೋಲುಗಳನ್ನು ಗಳಿಸಿ ಡ್ರಾ ಸಾಧಿಸಿಕೊಳ್ಳಲು ಶಕ್ತವಾಯಿತು.
ವೀರಾವೇಶದ ಹೋರಾಟ ದಿಂದ ನೆದರ್ಲೆಂಡ್ ವಿರುದ್ಧ ಡ್ರಾ ಮಾಡಿಕೊಂಡ ಭಾರತ ಚಾಂಪಿಯನ್ಸ್ ಟ್ರೋಫಿ ಪೈನಲ್ ಪ್ರವೇಶವನ್ನು ಪಡೆದು, ಉತ್ಸಾಹದಿಂದಲೇ ಫೈನಲ್ಸ್‍ಗೆ ಅಣಿಯಾಯಿತು. ಫೈನಲ್‍ನಲ್ಲಿ ಮತ್ತೆ ಎದುರಾಗಿದ್ದು, ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ಲೀಗ್ ಹಂತದಲ್ಲಿ ಸೋಲು ಕಂಡಿದ್ದ ಭಾರತಕ್ಕೆ ಇದೀಗ ಸೋಲಿನ ಸೇಡನ್ನು ತೀರಿಸಿಕೊಂಡು, ಟೂರ್ನಿ ಗೆಲ್ಲುವ ಉತ್ತಮ ಅವಕಾಶ ಲಭಿಸಿತ್ತು. ಭಾರತ ಆಸ್ಟ್ರೇಲಿಯಾ ವಿರುದ್ಧ ಪ್ರಬಲ ಹೋರಾಟವನ್ನೇ ನೀಡಿತು. ಹಲವಾರು ಬಾರಿ, ತನ್ನ ಉತ್ತಮ ಆಕ್ರಮಣಕಾರಿ ನಡೆಗಳಿಂದ ಆಸ್ಟ್ರೇಲಿಯಾವನ್ನು ಕಂಗೆಡಿಸಿತು. ಆಸ್ಟ್ರೇಲಿಯಾದ ಆಕ್ರಮಣಕ್ಕೆ ಉತ್ತಮ ಪ್ರತಿರೋಧವನ್ನೇ ಒಡ್ಡಿತು. ದಿಟ್ಟ ಹೋರಾಟ ಕಂಡು ಬಂದ ಫೈನಲ್ಸ್‍ನಲ್ಲಿ ಪ್ರಬಲ ಆಸ್ಟ್ರೇಲಿಯಾಕ್ಕೆ ಬೆವರಿಳಿಸಿ 1-1 ಡ್ರಾ ಸಾಧಿಸಿತು. ನಂತರ ಪೆನಾಲ್ಟಿ ಶೂಟೌಟ್‍ನಲ್ಲಿ ಮೊದಲೆರೆಡು ಪ್ರಯತ್ನಗಳಲ್ಲಿ ಆಸ್ಟ್ರೇಲಿಯಾ ಗೋಲು ಬಾರಿಸಿ ಯಶಸ್ಸು ಕಂಡರೆ, ಭಾರತದ ಹರ್ಮಾನ್‍ಸಿಂಗ್, ಸರ್ದಾರ್‍ಸಿಂಗ್ ವಿಫಲರಾಗಿ ನಿರಾಸೆ ಮೂಡಿಸಿದರು. ಮೂರು ಮತ್ತು ನಾಲ್ಕನೇ ಪ್ರಯತ್ನದಲ್ಲಿ ಶ್ರೀಜೇಶ್ ಉತ್ತಮ ಕಡೆ ಒಡ್ಡಿದರೆ, ಮನ್‍ಪ್ರೀತ್ ಗೋಲು ಬಾರಿಸಿದಾಗ, ಸಡನ್‍ಡೆತ್ ಆಸೆ ಮೂಡಿದರೂ 5ನೇ ಯತ್ನದಲ್ಲಿ ಆಸೀಸ್ ಗೋಲು ಬಾರಿಸಿ, ಸತತ 2ನೇ ಬಾರಿ, ಒಟ್ಟಾರೆ 15ನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ಮಡಿಲಿಗೇರಿಸಿಕೊಂಡಿತು.
ಭಾರತ ಸತತ 2ನೇ ಬಾರಿ ರನ್ನರ್‍ಅಪ್ ಆದರೂ, ನೂತನ ಕೋಚ್ ಮಾರ್ಗದರ್ಶನದಲ್ಲಿ, ಶ್ರೀಜೇಶ್ ನಾಯಕತ್ವದಲ್ಲಿ ಕೆಚ್ಚೆದೆಯ ಹೋರಾಟ ನೀಡಿ, ತನ್ನ ಲಯಕ್ಕೆ ಮರಳಿ, ಮುಂಬರುದವ ಟೂರ್ನಿಗಳಲ್ಲಿ ಜಯಗಳಿಸುವ ಆತ್ಮವಿಶ್ವಾಸದಿಂದ ಬೀಗಿತು.
?ಹರೀಶ್‍ಸರಳಾಯ,
ಮಡಿಕೇರಿ.