ಮಡಿಕೇರಿ, ಜು. 10: ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ದೈನಂದಿನ ಒತ್ತಡಗಳೊಂದಿಗೆ ನಡೆಸುವ, ಮನದೊಳಗಿನ ಯುದ್ಧವನ್ನು (ಗೊಂದಲ) ಎದುರಿಸಲು ಜೀವನಕಲೆ ಅತ್ಯವಶ್ಯಕವೆಂದು ಆರ್ಟ್ ಆಫ್ ಲಿವಿಂಗ್‍ನ ಕಾರ್ಯದರ್ಶಿ ಕೃಷ್ಣಶಾಸ್ತ್ರಿ ಅಭಿಪ್ರಾಯಪಟ್ಟರು.

ಅವರು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, ಇಂದಿನ ಜೀವನದಲ್ಲಿ ಮನುಷ್ಯ ಒತ್ತಡದಿಂದ ಪಾರಾಗಲು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಏರ್ಪಡಿಸುವ ಜೀವನಕಲೆ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆಯೂ ಸಲಹೆ ನೀಡಿದರು.

ಆರ್ಟ್ ಆಫ್ ಲಿವಿಂಗ್‍ನಿಂದ ‘ಹ್ಯಾಪಿನೆಸ್ ಪ್ರೋಗ್ರಾಮ್’ ಹೆಸರಿನಲ್ಲಿ ಕೇವಲ 4 ದಿನಗಳ ಶಿಬಿರ ನಡೆಯಲಿದ್ದು, ಆ ಮುಖಾಂತರ ಸಹಜ ಸಮಾಧಿ, ಧ್ಯಾನ, ಯೋಗ, ಆಧ್ಯಾತ್ಮಿಕತೆಯ ಸರ್ವತ್ರ ಅರಿವು ಮೂಡಿಸಲಾಗುವದು ಎಂದು ವಿವರಿಸಿದರು. ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬರಿಗೆ ತಮ್ಮನ್ನು ತಮಗೇ ಪರಿಚಯಿಸಿಕೊಳ್ಳುವ ವಿಧಾನವೇ ಈ ಜೀವನ ಕಲೆ ಎಂದು ಶಾಸ್ತ್ರಿ ನೆನಪಿಸಿದರು.

ಮಾನವ ತನ್ನೊಳಗಿನ ಅಂಗಾಂಗಳ ಕಂಪನ ಹಾಗೂ ತನ್ನ ಮನದೊಳಗಿನ ಸಂಘರ್ಷವನ್ನು ಹತೋಟಿಗೆ ತಂದುಕೊಂಡು, ಆ ಮೂಲಕ ಆನಂದ ಅನುಭವಿಸಲು ಜೀವನ ಕಲೆ ಶಿಬಿರ ಅವಶ್ಯಕವೆಂದ ಅವರು, ಇನ್ನೊಬ್ಬರ ಸಹಾಯ, ಮಾರ್ಗದರ್ಶನ ಅಥವಾ ಗುರುವಿನ ಮೂಲಕ ಇಂತಹ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಲಿದ್ದು, ಆ ದಿಸೆಯಲ್ಲಿ ಸಂಸ್ಥೆ ಕಾಳಜಿ ತೋರುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮೊದಲಿಗೆ ಪ್ರತಿಯೊಬ್ಬರು ತನ್ನ ಮನಸ್ಸು, ಮನೆ, ಸಮಾಜ, ಸ್ನೇಹ, ಒಡನಾಟದಲ್ಲಿದ್ದು, ಕ್ಷಣಿಕವಾದ ಮಾತಿನಿಂದ ಬೇರೆ ಬೇರೆ ಆಗುವ ಸಂದರ್ಭ ಹೆಚ್ಚಾಗಿದ್ದು, ಆ ಕ್ಷಣ ಕಾಲವನ್ನು ಸಂಯಮದಿಂದ ಎದುರಿಸಲು ಪ್ರಯತ್ನಿಸಿ ಯಶಸ್ಸು ಕಾಣುವಂತಾದರೆ ಮಿಕ್ಕೆಲ್ಲ ಜೀವನಪೂರ್ತಿ ಸುಂದರವಾಗಲಿದೆ ಎಂದು ವ್ಯಾಖ್ಯಾನಿಸಿದರು.

ಸರ್ವತ್ರ ಹೊಗಳಿಕೆಯನ್ನೇ ಬಯಸುವ ನಮ್ಮ ಮನಸ್ಸು ಕ್ಷಣಕಾಲದ ತೆಗಳಿಕೆಯನ್ನು ಸಹಿಸಿಕೊಳ್ಳಲು ತಯಾರಿರಬೇಕು ಎಂದು ಪ್ರತಿಪಾದಿಸಿದ ಅವರು, ಇದೇ ಮಾನಸಿಕತೆಯನ್ನು ಮಕ್ಕಳಲ್ಲೂ ಸದೃಢಗೊಳಿಸುವ ಉತ್ತಮ ಶಿಕ್ಷಣ ಒದಗಿಸಬೇಕೆಂದು ಪ್ರತಿಪಾದಿಸಿದರು.

ಪ್ರತಿ ಹಂತದಲ್ಲಿ ಮಕ್ಕಳ ಸಹಿತ ಇಂದು ಎಲ್ಲರಿಗೆ ಪ್ರಾಪಂಚಿಕ ಜ್ಞಾನದ ಅರಿವು ಅವಶ್ಯಕವೆಂದ ಶಾಸ್ತ್ರಿ, ಜೀವನದ ತೊಳಲಾಟದಿಂದ ಮನಃಶಾಂತಿ ಕಂಡುಕೊಳ್ಳಲು ಆಧ್ಯಾತ್ಮಿಕ ಶಿಕ್ಷಣ ತೀರಾ ಅವಶ್ಯಕವೆಂದರು.

ಪ್ರತಿಯೊಬ್ಬರು ಅನ್ಯರಿಂದ ಪ್ರೀತಿ, ವಿಶ್ವಾಸ, ನಂಬಿಕೆ ಬಯಸುತ್ತಿರುವಾಗ, ಅದನ್ನೇ ಬೇರೆಯವರಿಗೆ ತಮ್ಮಿಂದ ಕೊಡುವ ಬಗ್ಗೆಯೂ ಅರ್ಥೈಸಿಕೊಳ್ಳಲು ಜೀವನ ಕಲೆ ಶಿಬಿರದಲ್ಲಿ ಪಾಲ್ಗೊಳ್ಳುವದು ಅಗತ್ಯವೆಂದು ಬೊಟ್ಟು ಮಾಡಿದರು. ನಮ್ಮ ಇಂದ್ರಿಯಗಳ ಸಮತೋಲನದೊಂದಿಗೆ ಮನಸ್ಸು ಆನಂದವಾಗಿರಲು ಸಂಗೀತ ಪರಿಕರಗಳು ಸಹಕಾರಿಯಾಗುವಂತೆ, ಆರೋಗ್ಯ ಪೂರ್ಣ ಆನಂದ ಜೀವನಕ್ಕೆ ಚಿಕ್ಕಂದಿನಿಂದಲೇ ಯೋಗ ಶಿಕ್ಷಣವೂ ಅವಶ್ಯಕವೆಂದರು.

ನಮ್ಮ ಶರೀರ, ಮನಸ್ಸು, ಬುದ್ಧಿ, ಶ್ವಾಸ, ಚಿತ್ತ, ಅಹಂಕಾರ ಇತ್ಯಾದಿಯನ್ನು ನಿಗ್ರಹಿಸುವ ಮುಖಾಂತರ ಚೈತನ್ಯಪೂರ್ಣ ಜೀವನ ರೂಪಿಸಿಕೊಳ್ಳಬೇಕಾದರೆ ನಿರಂತರ ಪರಿಶ್ರಮ ಅವಶ್ಯಕವೆಂದು ತಿಳಿಸಿದ ಕೃಷ್ಣಶಾಸ್ತ್ರಿ, ಆ ದಿಸೆಯಲ್ಲಿ ಆಗಸ್ಟ್ ಮಾಸಾಂತ್ಯಕ್ಕೆ 4 ದಿನ ಶಿಬಿರ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದರು.

ಅಲ್ಲದೆ ಮಕ್ಕಳಲ್ಲಿ ಸುಪ್ತ ಪ್ರತಿಭೆಯನ್ನು ಹೊರ ಹಾಕುವ ನಿಟ್ಟಿನಲ್ಲಿ ಪ್ರಜ್ಞಾಯೋಗ ಕಾರ್ಯಕ್ರಮಗಳನ್ನು ಕೇವಲ 2 ದಿನಗಳಲ್ಲಿ ಕ್ರಮವಾಗಿ 2 ಗಂಟೆ ಸಮಯ ನೀಡಲಾಗುವದು ಎಂದು ವಿವರಿಸಿದರು. ಎಲ್ಲರಿಂದಲೂ ಒಳಿತನ್ನು ಬಯಸುವ ನಾವು, ನಮ್ಮ ಮೂಲಕವೂ ಬೇರೆಯವರಿಗೆ ಒಳ್ಳೆಯದ್ದನ್ನೇ ಮಾಡುವಂತಾದರೆ ಇಡೀ ಸಮಾಜ ಸುಖಮಯವಾಗಿರುವದು. ಇದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶಯವೆಂದು ಅವರು ಮಾತಿಗೆ ತೆರೆ ಎಳೆದರು.