ಕೂಡಿಗೆ, ಜು. 11: ಮುಳ್ಳುಸೋಗೆ ಗ್ರಾ.ಪಂ. ಮುಳ್ಳುಸೋಗೆ ಪ್ರಥಮ ವಾರ್ಡಿನ ವಾರ್ಡ್ ಸಭೆ ಸದಸ್ಯ ಸಂತೋಷ್ ಅಧ್ಯಕ್ಷತೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.

ಮುಳ್ಳುಸೋಗೆ ಗ್ರಾ.ಪಂ. ಅನುಮತಿ ಪಡೆಯದೆ ಈ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದು, ಇವುಗಳ ಬಗ್ಗೆ ಅಧ್ಯಕ್ಷರು ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾರ್ಡ್‍ನ ಮಾಜಿ ಅಧ್ಯಕ್ಷ ರಾಜೇಶ್ ಸಭೆಯ ಗಮನಕ್ಕೆ ತಂದರು.

ಶಾಲಾಭಿವೃದ್ಧಿ ಸಮಿತಿ ಸದಸ್ಯ ಆನಂದ್ ಶಾಲೆಗೆ ತಡೆಗೋಡೆ ಕಟ್ಟಿಸಿ, ಕ್ರೀಡಾ ಸಾಮಗ್ರಿಗಳನ್ನು ಒದಗಿಸು ವಂತೆ ಒತ್ತಾಯಿಸಿದರು. ನಿವೇಶನ ಮತ್ತು ವಸತಿ ರಹಿತರು ಅರ್ಜಿಗಳನ್ನು ನೀಡಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಮನೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವದು. ಈ ವಾರ್ಡ್‍ನ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಹೆಚ್ಚಿನ ಗಮನಹರಿಸಲಾಗುವದು ಎಂದು ತಿಳಿಸಿದರು. ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಭವ್ಯ, ಉಪಾಧ್ಯಕ್ಷ ತಾರಾನಾಥ್, ಸದಸ್ಯರಾದ ಕುಮಾರ್, ಪಾರ್ವತಿ ಹಾಗೂ ವಾರ್ಡ್‍ನ ಗ್ರಾಮಸ್ಥರು ಇದ್ದರು. 2ನೇ ವಾರ್ಡ್ ಸಭೆ ಜನತಾ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.