ಮಡಿಕೇರಿ, ಜು. 11: ಪ್ರಸಕ್ತ ನಡೆಯುತ್ತಿರುವ ರಾಜ್ಯ ಸಮ್ಮಿಶ್ರ ಸರಕಾರದ ಮೊದಲ ಅಧಿವೇಶನದಲ್ಲಿ ಕೊಡಗು ಜಿಲ್ಲೆಯ ಹಲವು ಸಮಸ್ಯೆ ಅಗತ್ಯತೆಗಳ ಕುರಿತು ಜಿಲ್ಲೆಯ ಶಾಸಕರು ದನಿ ಎತ್ತುತ್ತಿದ್ದಾರೆ. ಇವರುಗಳ ಪ್ರಶ್ನೆಗೆ ಸಂಬಂಧಿಸಿದ ಸಚಿವರು ಸರಕಾರ ನೀಡಿರುವ ಉತ್ತರಗಳು...
ಮಳೆಹಾನಿ- ಪರಿಹಾರದ ಕುರಿತು ಸುನಿಲ್ ಪ್ರಶ್ನೆ
2018ರ ಮೇ ಹಾಗೂ ಜೂನ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಪರಿಣಾಮ ಹಾಗೂ ಇದಕ್ಕೆ ಸರ್ಕಾರ ಕೈಗೊಂಡ ಕ್ರಮ ಮತ್ತು ನಷ್ಟ ಪರಿಹಾರದ ಕುರಿತು ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಪ್ರಶ್ನಿಸಿದ್ದಾರೆ.
ಸಚಿವರ ಉತ್ತರ: ಸುನಿಲ್ ಅವರ ಪ್ರಶ್ನೆಗೆ ಕಂದಾಯ ಸಚಿವರಾದ ಆರ್.ವಿ. ದೇಶಪಾಂಡೆ ಅವರು ನೀಡಿರುವ ಉತ್ತರ ಇಂತಿದೆ: ಮೇ ತಿಂಗಳಿನಿಂದ 6.7.2018ರ ವರೆಗೆ ಜಿಲ್ಲೆಯಲ್ಲಿ 3 ಮಾನವ ಪ್ರಾಣಹಾನಿಯಾಗಿದ್ದು, 143 ಮನೆಗಳು ಜಖಂಗೊಂಡಿವೆ. ಒಂದು ಜಾನುವಾರು ಸಾವು ಸೇರಿದಂತೆ ಒಟ್ಟು 147 ಪ್ರಕರಣಗಳು ಸಂಭವಿಸಿದ್ದು, ಒಟ್ಟು 49.26 ಲಕ್ಷ ನಷ್ಟ ಸಂಭವಿಸಿದೆ. ಸಾರ್ವಜನಿಕರ ಆಸ್ತಿ - ಪಾಸ್ತಿಗೆ ಹಾನಿಯಲ್ಲಿ ಲೋಕೋಪಯೋಗಿ ಇಲಾಖೆಗೆ 825.25 ಲಕ್ಷ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ 627.40 ಲಕ್ಷ, ಚೆಸ್ಕಾಂಗೆ 92.44 ಲಕ್ಷ, ಮಡಿಕೇರಿ ನಗರಸಭೆಗೆ ರೂ. 69 ಲಕ್ಷ ಹಾಗೂ ಇತರ ಸ್ಥಳೀಯ ಸಂಸ್ಥೆಗಳಿಗೆ ರೂ. 37.16 ಲಕ್ಷ ನಷ್ಟ ಸೇರಿದಂತೆ ಒಟ್ಟು 1679.25 ಲಕ್ಷದಷ್ಟು ಹಾನಿಯಾಗಿವೆ.
ನೈಸರ್ಗಿಕ ವಿಕೋಪದಿಂದ ಮನೆ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಹಾಗೂ ಶೇ.15ರಿಂದ 75ರವರೆಗಿನ ಶೇಕಡವಾರನ್ನು ಅಲವಂಬಿಸಿ ಪರಿಹಾರವನ್ನು ನೀಡುವದು ಹಾಗೂ ಶೇ. 75ಕ್ಕಿಂತ ಹೆಚ್ಚಿನ ಹಾನಿಯಾದಲ್ಲಿ ಮಾರ್ಗಸೂಚಿಯಲ್ಲಿ ಮನೆ ಹಾನಿ ಪರಿಹಾರಕ್ಕೆ ನಿಗದಿಪಡಿಸಿರುವ ಗರಿಷ್ಠ ಮೊತ್ತ ರೂ. 95,100/-ಗಳನ್ನು ಪಾವತಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಕೊಡಗು ಜಿಲ್ಲೆಗೆ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗಾಗಿ ದಿನಾಂಕ 14.06.2018ರಂದು ರೂ. 5.00 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ರೂ. 10.22 ಕೋಟಿ ಅನುದಾನ ಲಭ್ಯವಿರುತ್ತದೆ. ಸದರಿ ಅನುದಾನದಲ್ಲಿ ಕೇಂದ್ರ ಸರಕಾರದ ಎಸ್.ಡಿ.ಆರ್.ಎಫ್ / ಎನ್.ಡಿ.ಆರ್.ಎಫ್. ಮಾರ್ಗಸೂಚಿಯ ಪ್ರಕಾರ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮಳೆಯಿಂದ ಉಂಟಾಗಿರುವ ನಷ್ಟದ ಪ್ರಕರಣಗಳಿಗೆ ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್./ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಈ ಕೆಳಕಂಡಂತೆ ಪರಿಹಾರ ಪಾವತಿಸಲಾಗಿದೆ.
ಮಾನವ ಜೀವ ಹಾನಿ 2 ಪ್ರಕರಣಗಳಿಗೆ ರೂ. 10.00 ಲಕ್ಷ, ಜಾನುವಾರು ಹಾನಿ 1 ಪ್ರಕರಣಕ್ಕೆ ರೂ. .25 ಲಕ್ಷ.
ಅಕ್ರಮ ಹರಳು ದಂಧೆ ಚರ್ಚೆಗೆ
ಅಕ್ರಮ ಹರಳು ದಂಧೆ ಕುರಿತು ಸುನಿಲ್ ಪ್ರಸ್ತಾಪಿಸಿ, ಇದು ಚರ್ಚೆಗೆ ಬಂದಿದ್ದು, ಸರಕಾರದಿಂದ ಉತ್ತರ ಲಭಿಸಿಲ್ಲ. ಕೊಡಗು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಹೊಂದಿಕೊಂಡಂತಿರುವ ಸುಬ್ರಹ್ಮಣ್ಯ ವಲಯ ಮತ್ತು ಪುಷ್ಪಗಿರಿ ಅರಣ್ಯ ವಲಯಗಳಡಿಯಲ್ಲಿ ಬರುವ ಕೂಜಿಮಲೆ ಮತ್ತು ಸುಟ್ಟತ್ಮಲೆಗಳಲ್ಲಿ ಅಕ್ರಮ ಹರಳು ದಂಧೆ ನಡೆಯುತ್ತಿದೆ. ಇದು ಸುಮಾರು ವರ್ಷಗಳ ಹಿಂದೆ ಪ್ರಾರಂಭವಾಗಿ ನಡೆಯುತ್ತಿತ್ತು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಹಿಂದೆ ಇದಕ್ಕೆ ಕಡಿವಾಣ ಹಾಕಿದ್ದರು. ಆದರೆ ಇದೀಗ ಮತ್ತೆ ಈ ಅಕ್ರಮ ಹರಳು ದಂಧೆ ಪ್ರಾರಂಭವಾಗಿದೆ. ಮೇಲ್ನೋಟಕ್ಕೆ ಹರಳು ಕಲ್ಲು ದಂಧೆ ನಿಯಂತ್ರಿಸಲ್ಪಟ್ಟಂತೆ ಭಾಸವಾದರೂ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ದಂಧೆಕೋರರು ಒಳ ಒಪ್ಪಂದ ಮಾಡಿಕೊಂಡು ಕಳ್ಳ ಮಾರ್ಗದಿಂದ ಕೃತ್ಯ ಮುಂದುವರೆಸಿದ್ದಾರೆ. ಕೂಜಿಮಲೆಗೆ ಸೀಮಿತವಾಗಿದ್ದ ಹರಳು ಕಲ್ಲು ನಿಕ್ಷೇಪ ಅಗೆಯುವ ಕೆಲಸ ಬಾಳುಗೋಡುವಿನ ಸುಟ್ಟತ್ಮಲೆ, ಉಪ್ಪುಕಳಗಳಿಗೂ ಈಗ ವಿಸ್ತಾರಗೊಂಡಿದೆ.
ಇತ್ತೀಚೆಗೆ ಗಡಿ ಭಾಗವಾದ ಪೆರಾಜೆಯಲ್ಲಿ ಹರಳು ಸಾಗಾಟ ಪ್ರಕರಣವೊಂದು ಕಂಡು ಬಂದಿರುತ್ತದೆ. ಭೂ ವಿಜ್ಞಾನಿಗಳ ಪ್ರಕಾರ ಈ ಪ್ರದೇಶದಲ್ಲಿ ‘ಕೊರೆಂಡಂ’ ಜಾತಿಗೆ ಸೇರಿದ ಹರಳಾಗಿದ್ದು, ಅಷ್ಟೇನು ಬೆಳೆ ಬಾಳುವಂತದ್ದಲ್ಲ ಎಂದು ಹೇಳಲಾಗಿದ್ದರೂ, ಸಂರಕ್ಷಿತ ಮೀಸಲು ಅರಣ್ಯವಾದ ಪಶ್ಚಿಮ ಘಟ್ಟವನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರವು ಈ ದಂಧೆಕೋರರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಮನೆ ಕುಸಿತ - ಪರಿಹಾರದ ಬಗ್ಗೆ ವೀಣಾ ಪ್ರಶ್ನೆ
ಅತಿವೃಷ್ಟಿಯಿಂದ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಂಭವಿಸಿದ ಮನೆ ಕುಸಿತ ಹಾಗೂ ನೀಡಿರುವ ಪರಿಹಾರದ ಕುರಿತು ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನಿಸಿದ್ದಾರೆ.
ಇದಕ್ಕೆ ಕಂದಾಯ ಸಚಿವ ದೇಶಪಾಂಡೆ ಅವರು ನೀಡಿರುವ ಉತ್ತರ ಇಂತಿದೆ:
ಮಡಿಕೇರಿ ತಾಲೂಕಿನಲ್ಲಿ 50, ಸೋಮವಾರಪೇಟೆಯಲ್ಲಿ 54 ಹಾಗೂ ವೀರಾಜಪೇಟೆಯಲ್ಲಿ 39 ಪ್ರಕರಣ ಸೇರಿ ಒಟ್ಟು 143 ಪ್ರಕರಣ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೂ. 12.16 ಲಕ್ಷ ನೀಡಲಾಗಿದೆ. ಮನೆ ಜಖಂ ಕುರಿತಂತೆ ಶೇ. 15ರಿಂದ 75ರವರೆಗಿನ ಶೇಕಡವಾರನ್ನು ಅವಲಂಬಿಸಿ ಪರಿಹಾರ ನೀಡುವದು ಹಾಗೂ ಶೇ. 75ಕ್ಕಿಂತ ಹಾನಿಯಾದಲ್ಲಿ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಗರಿಷ್ಠ ಮೊತ್ತ ರೂ. 95,100ನ್ನು ಪಾವತಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕ್ರಮಗಳು
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 24x7 ಮಾದರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ವಿಪತ್ತಿಗೆ ಸಂಬಂಧಿಸಿದಂತೆ ಯಾವದೇ ಕರೆ ಬಂದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಲಾಗುವದು. ಎಲ್ಲಾ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ರೂ. 5.00 ಕೋಟಿಗಳಿಗಿಂತ ಕಡಿಮೆ ಅನುದಾನ ಇರದಂತೆ ನೋಡಿಕೊಳ್ಳಲಾಗುತ್ತಿದೆ. ಒಂದು ವೇಳೆ ಯಾವದೇ ಜಿಲ್ಲಾಧಿಕಾರಿಗಳಿಂದ ಅನುದಾನದ ಬೇಡಿಕೆ ಬಂದಲ್ಲಿ ಕೂಡಲೇ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವದು. ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 2 ಸಭೆ ಹಾಗೂ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ 2 ಸಭೆಗಳನ್ನು ನಡೆಸಿ ನೆರೆ ಪರಿಸ್ಥಿತಿಯನ್ನು ಅವಲೋಕಿಸಲಾಗಿರುತ್ತದೆ. ನೆರೆ ಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವರು ಖುದ್ದು ಭೇಟಿ ನೀಡಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವದಾಗಿ ತಿಳಿಸಿದ್ದಾರೆ.