ಮಡಿಕೇರಿ, ಜು. 10: ಲೀಡ್ ಬ್ಯಾಂಕ್ ವತಿಯಿಂದ 2018-19ನೇ ಸಾಲಿಗೆ ತಯಾರಿಸಲಾದ ರೂ. 5 ಸಾವಿರ ಕೋಟಿ ಸಾಲ ಯೋಜನೆಯನ್ನು ಇತ್ತೀಚೆಗೆ ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಬಿಡುಗಡೆ ಮಾಡಿದರು.
ನಗರದ ಲೀಡ್ ಬ್ಯಾಂಕ್ ಕಾರ್ಪೊರೇಷನ್ ಬ್ಯಾಂಕ್ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ತಯಾರಿಸಲಾದ 2018-19ನೇ ಸಾಲಿನ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಣ್ಣ ಮತ್ತು ಅತೀ ಸಣ್ಣ ಉದ್ಯಮಗಳಿಂದ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು, ಈ ಕ್ಷೇತ್ರಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಸಕಾಲದಲ್ಲಿ ದೊರೆಯುವಂತಾಗಬೇಕು ಎಂದರು.
ಸಾಲ ಯೋಜನೆ ಸಂಬಂಧಿಸಿದಂತೆ ಜನವರಿಯಲ್ಲಿ ತರಾತುರಿಯಲ್ಲಿ ಸಾಲ ನೀಡುವದಲ್ಲ. ಈಗಿನಿಂದಲೇ ಸಾಲ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ರೈತರು, ಕಾರ್ಮಿಕರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಹೀಗೆ ಎಲ್ಲರಿಗೂ ಸಾಲ ನೀಡಲು ಬ್ಯಾಂಕುಗಳು ಸಹಕರಿಸಬೇಕು ಎಂದರು.
ಪ್ರಧಾನಮಂತ್ರಿ ಮುದ್ರಾ ಯೋಜನೆ, ಸ್ಟಾಂಡ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಹಾಗೂ ಇತರ ಸರ್ಕಾರಿ ಪ್ರಯೋಜಿತ ಯೋಜನೆಗಳು ಜನರನ್ನು ತಲಪುವಂತಾಗಬೇಕು. ಜೊತೆಗೆ ಪ್ರತಿಯೊಬ್ಬರಲ್ಲೂ ಸ್ವಾವಲಂಬನೆ ಬದುಕು ಕಾಣುವಂತಾಗಲು ಸಾಲವನ್ನು ನೀಡಿ ಸಹಕರಿಸಬೇಕು ಎಂದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ. ನಾಣಯ್ಯ ಮಾತನಾಡಿ, ರೈತರಿಗೆ ವಿಶೇಷವಾಗಿ ಬೆಳೆಸಾಲ ಮತ್ತು ಕೃಷಿಗೆ ಸಂಬಂಧಿಸಿದ ಅವಧಿ ಸಾಲವನ್ನು ಸೂಕ್ತವಾದ ಸಮಯದಲ್ಲಿ ನೀಡಬೇಕು. ಜೊತೆಗೆ ಬ್ಯಾಂಕುಗಳು ರೈತ ಸ್ನೇಹಿಯಾಗಿ ದುಡಿಯಬೇಕು ಎಂದು ಅವರು ಸಲಹೆಯಿತ್ತರು.
ಈಗಾಗಲೇ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರ ಮಹತ್ತರವಾಗಿದೆ ಎಂದು ನಬಾರ್ಡ್ನ ಸಹಾಯಕ ಮಹಾ ಪ್ರಬಂಧಕರು ತಿಳಿಸಿದರು.
ಕೃಷಿ, ಕೈಗಾರಿಕೆ, ಸಣ್ಣ ಉದ್ಯಮ, ಹೀಗೆ ಆದ್ಯತಾ ವಲಯಕ್ಕೆ ಸೇರಿದಂತೆ ರೂ. 5 ಸಾವಿರ ಕೋಟಿ ಸಾಲ ಯೋಜನೆಯನ್ನು ಪ್ರಸಕ್ತ ಸಾಲಿಗೆ ತಯಾರಿಸಲಾಗಿದ್ದು, ಬ್ಯಾಂಕ್ ವ್ಯವಸ್ಥಾಪಕರು ಪ್ರಗತಿ ಸಾಧಿಸಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದು ಕೋರಿದರು.
ಕಾರ್ಪೋರೇಷನ್ ಬ್ಯಾಂಕಿನ ಮೈಸೂರು ವಲಯದ ಉಪ ಮಹಾ ಪ್ರಬಂಧಕ ಎಸ್.ಎಲ್. ಗಣಪತಿ ಮಾತನಾಡಿ, ಬ್ಯಾಂಕ್ಗಳ ವ್ಯವಸ್ಥಾಪಕರು ಸಮಯಕ್ಕೆ ಸರಿಯಾಗಿ ಸಾಲವನ್ನು ನೀಡಿ ಉದ್ಯಮಿಗಳು, ಕೃಷಿಕರು, ವ್ಯಾಪಾರಿ ಉದ್ಯಮಿಗಳು ಮತ್ತಿತರರಿಗೆ ಉತ್ತೇಜನ ನೀಡುವಂತಾಗಬೇಕು. ಉದ್ಯಮಿಗಳು, ವ್ಯಾಪಾರಿ ಉದ್ಯಮಿಗಳು, ಕೃಷಿಕರು ಮತ್ತಿತರರ ಜೊತೆ ಸಮನ್ವಯತೆ ಸಾಧಿಸಿ ಸಾಲ ಯೋಜನೆ ತಲಪಿಸಲು ಮುಂದಾಗಬೇಕು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಂಗಾರು ಗುಪ್ತಾಜೀ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ವ್ಯಾಪಾರ, ವಾಣಿಜ್ಯ ಹೀಗೆ ಇತರೆ ಕ್ಷೇತ್ರಗಳಿಗೆ ಸಾಲವನ್ನು ನೀಡುವಂತಾಗಬೇಕು ಎಂದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದ್ದು, ಸಾರ್ವಜನಿಕರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಸರಳೀಕರಣದತ್ತ ಹೆಜ್ಜೆ ಇಡಲಾಗಿದೆ. ಆ ದಿಸೆಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವಲ್ಲಿ ಬ್ಯಾಂಕ್ ಅಧಿಕಾರಿಗಳು ಮುಂದಾಗಬೇಕಿದೆ ಎಂದು ಸಲಹೆಯಿತ್ತರು.
ಜಿಲ್ಲೆಯ 2018-19ನೇ ಸಾಲಿನ ಸಮಗ್ರ ಸಾಲ ಯೋಜನೆ ಬಿಡುಗಡೆಯ ಮಾಹಿತಿಯನ್ನು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಂಗಾರು ಗುಪ್ತಾಜೀ ನೀಡಿದರು.
ವಿವರ: ಜಿಲ್ಲೆಯ ಲೀಡ್ ಬ್ಯಾಂಕ್ ವತಿಯಿಂದ ತಯಾರಿಸಲಾದ 2018-19ನೇ ಸಾಲಿನ ಸಮಗ್ರ ರೂ.. 5 ಸಾವಿರ ಕೋಟಿ ಗುರಿಯು ಕಳೆದ ವರ್ಷಕ್ಕಿಂತ ಶೇ. 14 ರಷ್ಟು ಹೆಚ್ಚಳವಾಗಿದ್ದು, ಇದರಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.
ಬೆಳೆ ಸಾಲಕ್ಕೆ ರೂ. 2,520 ಕೋಟಿ, ಅವಧಿ ಸಾಲಕ್ಕೆ ರೂ. 790 ಕೋಟಿ, ಕೃಷಿಗೆ ಸಂಬಂಧಿಸಿದ ಮೂಲ ಸೌಕರ್ಯ ಒದಗಿಸಲು ರೂ. 160 ಕೋಟಿ, ಹೀಗೆ ಒಟ್ಟು ಕೃಷಿ ಕ್ಷೇತ್ರಕ್ಕಾಗಿ ರೂ. 3470 ಕೋಟಿ ಗುರಿಯನ್ನು ನಿಗದಿಪಡಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮ, ಶೈಕ್ಷಣಿಕ ಸಾಲ, ರಫ್ತು, ಗೃಹ ನಿರ್ಮಾಣ, ಸಾಮಾಜಿಕ ಮೂಲ ಸೌಕರ್ಯ, ನವೀಕೃತ ಇಂಧನ ಹೀಗೆ ಇತರ ಆದ್ಯತಾ ವಲಯಕ್ಕೆ ರೂ. 730 ಕೋಟಿ ನಿಗದಿಪಡಿಸಲಾಗಿದೆ. ಆದ್ಯತಾ ವಲಯವಲ್ಲದ ಕ್ಷೇತ್ರಕ್ಕೆ ರೂ. 800 ಕೋಟಿ ನಿಗದಿಪಡಿಸಲಾಗಿದ್ದು, ಒಟ್ಟಾರೆ ರೂ. 5 ಸಾವಿರ ಕೋಟಿ ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.
ಈ ಸಂದರ್ಭ ಕಾರ್ಪೋರೇಷನ್ ಬ್ಯಾಂಕಿನ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಡಾ. ಸುರೇಶ್, ಜಿಲ್ಲೆಯ ವಿವಿಧ ಬ್ಯಾಂಕುಗಳ ಪ್ರತಿನಿಧಿಗಳು ಮತ್ತು ಶಾಖಾ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.