ಚೆಟ್ಟಳ್ಳಿ, ಜು. 11: ಚೆಟ್ಟಳ್ಳಿ ಸಹಕಾರ ಸಂಘವನ್ನು ಹಿರಿಯರು ಕಟ್ಟಿ ಬೆಳೆಸಿದ್ದು, ಅದನ್ನು ರೈತರೇ ಸಹಕಾರ ಸಂಘದ ಬೆನ್ನೆಲುಬಾಗಿ ನಿಂತು ಉಳಿಸಿ ಬೆಳೆಸುವಲ್ಲಿ ಶ್ರಮಿಸಬೇಕೆಂದು ಶ್ರೀ ನರೇಂದ್ರ ಮೋದಿ ಭವನದಲ್ಲಿ ನಡೆದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 41ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.

ಈ ವರ್ಷ ರೂ. 23.63 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 12, ಡಿವಿಡೆಂಡ್ ಜೊತೆಗೆ ಮಹಾಸಭೆಯ ಊಟದ ಭತ್ಯೆ ರೂ. 150 ಏರಿಸಲಾಗಿದೆ. ಸಂಘದ ಕೆಲವು ರೈತರು ಸಹಕಾರಿ ಸಂಘದ ಬಡ್ಡಿ ರಹಿತ ಸಾಲ, ಸಾಲ ಮನ್ನಾದಂತ ಸೌಲಭ್ಯವನ್ನು ಪಡೆದು ಖಾಸಗಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ವ್ಯವಹಾರ ನಡೆಸುತ್ತಿರುವದು ಸರಿಯಲ್ಲ. ಸಹಕಾರ ಸಂಘವು ಶೇ. 100 ಕೃಷಿ ಸಾಲ ವಸೂಲಿ ಮಾಡಿದ ಫಲವಾಗಿ ಜಿಲ್ಲಾ ಸಹಕಾರ ಬ್ಯಾಂಕಿನ ಹಾಗೂ ಅಪೆಕ್ಸ್ ಬ್ಯಾಂಕಿನ ಪ್ರಶಸ್ತಿ ಬಂದಿದೆ. ಸಹಕಾರ ಸಂಘದ ರೈತ ಸದಸ್ಯರ ಸಹಕಾರದ ಫಲವಾಗಿ ಶ್ರೀ ನರೇಂದ್ರ ಮೋದಿ ಭವನವನ್ನು ಯಾವದೇ ಸಾಲ ಪಡೆಯದೆ ಕಟ್ಟಲಾಗಿದೆ. ಎರಡು ಲಕ್ಷ ಲಾಭ ಬಂದಿದೆ. ಸಂಘದ ಒತ್ತಿನಲ್ಲಿರುವ ಜಾಗವನ್ನು ಸಂಘಕ್ಕೆ ಪಡೆಯಲು ಹೋರಾಟ ನಡೆಯುತ್ತಿದ್ದು, ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿದೆ. ಆಗಸ್ಟ್ 18 ರಂದು ಸಹಕಾರ ಸಂಘದ ಚುನಾವಣೆ ಇದ್ದು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದವರು ಸಹಕಾರ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಶ್ರಮಿಸಬೇಕೆಂದರು.

ಸನ್ಮಾನ ಕಾರ್ಯಕ್ರಮ

ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಅವರನ್ನು ಸನ್ಮಾನಿಸಲಾಯಿತು. 2016-17ನೇ ಸಾಲಿನ ವಾರ್ಷಿಕ ಮಹಾಸಭೆಯ ಹಾಗೂ ಆಡಳಿತ ಮಂಡಳಿ ವರದಿ 2017-18ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ, ಅಂಗೀಕಾರ, ಲೆಕ್ಕ ಪರಿಶೋಧಕರ ನೇಮಕಾತಿ, ಮುಂದಿನ ಯೋಜನೆ ಹಾಗೂ ಕಾರ್ಯಕ್ರಮದ ಅನುಮೋದನೆ ನಿವ್ವಳ ಲಾಭ ವಿಲೇವಾರಿ ಮಾಡಿದನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.

ಸಂಘದ ಮೃತಪಟ್ಟ ಸದಸ್ಯರಿಗೆ ಮೌನಾಚರಿಸಿ ಶಾಂತಿ ಕೋರಲಾಯಿತು. ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂರ್ಣಿಮ ವಂದಿಸಿ, ಲೆಕ್ಕಿಗರಾದ ನಂದಿನಿ ಪ್ರಾರ್ಥಿಸಿ, ನಿರ್ದೇಶಕ ನೂಜಿಬೈಲು ನಾಣಯ್ಯ ಇತರರಿದ್ದರು.