ಸೋಮವಾರಪೇಟೆ,ಜು.10: ರಾಜ್ಯ ಸರ್ಕಾರ ಮಂಡಿಸಿರುವ ಮುಂಗಡ ಪತ್ರದಲ್ಲಿ ರೈತರ ಸಾಲಮನ್ನಾ ಘೋಷಿಸಿದ್ದರೂ ಸಹ ಕಾಫಿ ಬೆಳೆಗಾರರಿಗೆ ಇದರಿಂದ ಕಿಂಚಿತ್ತೂ ಪ್ರಯೋಜನವಾಗಿಲ್ಲ. ತಕ್ಷಣ ಬೆಳೆಗಾರರ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದರ ಜತೆಗೆ ಜನಪ್ರತಿನಿಧಿಗಳಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವದು. ತಪ್ಪಿದಲ್ಲಿ ಬೆಳೆಗಾರರ ಸಂಘದಿಂದಲೇ ಅಭ್ಯರ್ಥಿಯನ್ನು ಘೋಷಿಸಲಾಗುವದು ಎಂದು ತಾಲೂಕು ಕಾಫಿ ಬೆಳೆಗಾರರ ಸಂಘ ಎಚ್ಚರಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಅವರು,ಸರ್ಕಾರದ ಮುಂಗಡ ಪತ್ರದಲ್ಲಿ ರೈತರ ಸಾಲಮನ್ನಾ ಘೋಷಿಸಿದ್ದು, ಇದರಿಂದ ಕಾಫಿ ಬೆಳೆಗಾರರಿಗೆ ಯಾವದೇ ಲಾಭವಿಲ್ಲ. ಕಾಫಿಯಿಂದ ಸರ್ಕಾರಕ್ಕೆ ಕೋಟ್ಯಾಂತರ ಆದಾಯ ಬರುತ್ತಿದ್ದರೂ ಬೆಳೆಗಾರರನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಾ ಬಂದಿದೆ ಎಂದು ಆರೋಪಿಸಿದರು.

ಕಾಫಿ ಬೆಳೆಯುವ ಪ್ರದೇಶಗಳ ಬಗ್ಗೆ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ. ಇಂತಹ ಪ್ರದೇಶಗಳು ಭಾರತದಿಂದ ಹೊರಗಿವೆಯೇ ಎಂಬ ಸಂಶಯ ಮೂಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಾಫಿ ಹಾಗೂ ಕರಿಮೆಣಸು ಬೆಲೆ ಕುಸಿಯುತ್ತಿದ್ದು, ಹಿಂದಿನ 20 ವರ್ಷಗಳ ಬೆಲೆಗೆ ಸಮನಾಗಿದೆ. ನಿರ್ವಹಣಾ

(ಮೊದಲ ಪುಟದಿಂದ) ವೆಚ್ಚ 15 ಪಟ್ಟು ಅಧಿಕವಾಗಿದ್ದು, ಬೆಳೆಗಾರರು ತೀರಾ ಸಂಕಷ್ಟದಲ್ಲಿದ್ದಾರೆ. ಎಕರೆಯೊಂದಕ್ಕೆ 30 ಸಾವಿರ ನಷ್ಟ ಅನುಭವಿಸುತ್ತಿದ್ದರೂ ಸಹ ಬದುಕಿಗೋಸ್ಕರ ಸಾಲ ಮಾಡಿ ಆದಾಯದ ನಿರೀಕ್ಷೆಯಲ್ಲಿದ್ದಾರೆ ಎಂದು ಸಂಕಟ ತೋಡಿಕೊಂಡರು.

ಇದೀಗ ರಾಜ್ಯ ಸರ್ಕಾರ ಬೆಳೆಗಾರರನ್ನು ವಿಂಗಡಣೆ ಮಾಡುವ ಕೆಲಸಕ್ಕೆ ಮುಂದಾಗಿರುವದು ಖಂಡನೀಯ. ರಾಜ್ಯದ ಎಲ್ಲಾ ಬೆಳೆಗಾರರನ್ನು ಒಂದೇ ಸಮನಾಗಿ ಕಾಣಬೇಕು. ಸುಸ್ತಿದಾರರಿಗೆ ಮಾತ್ರ ಸಾಲಮನ್ನಾ ಮಾಡಿ, ಮರುಪಾವತಿ ಮಾಡಿರುವವರಿಗೆ 25 ಸಾವಿರ ನೀಡುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಮೋಹನ್ ಬೋಪಣ್ಣ ಕಿಡಿಕಾರಿದರು.

ಬೆಳೆಗಾರರು ಮನೆಯ ಚಿನ್ನಾಭರಣ ಅಡವಿಟ್ಟು, ಖಾಸಗಿ ಬಡ್ಡಿ ಸಾಲ ಪಡೆದು ಸಮಾಜದಲ್ಲಿನ ಗೌರವಕ್ಕೋಸ್ಕರ ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಸಾಲ ಮರುಪಾವತಿ ಮಾಡಿದ್ದಾರೆ. ಸರ್ಕಾರದ ಈ ಘೋಷಣೆಯಿಂದ ನಿಯತ್ತಾಗಿ ಸಾಲ ಮರುಪಾವತಿ ಮಾಡಿದ ಬೆಳೆಗಾರರಿಗೆ ಅನ್ಯಾಯವಾಗಿದೆ. ಕುಮಾರಸ್ವಾಮಿ ಅವರು ಚುನಾವಣಾ ಪೂರ್ವ ನೀಡಿದ ಪ್ರಣಾಳಿಕೆಯಲ್ಲಿನ ಭರವಸೆಯಂತೆ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ತಪ್ಪಿದಲ್ಲಿ ಬೆಳೆಗಾರರನ್ನು ಸಂಘಟಿಸಿ ಉಗ್ರ ಹೋರಾಟ ಸಂಘಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿದ್ದ ಸಂಘದ ಉಪಾಧ್ಯಕ್ಷ ಬಸಪ್ಪ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಪಕ್ಷಕ್ಕೆ ಬಹುಮತ ಬಂದಿಲ್ಲ;ಹಾಗಾಗಿ ಸಂಪೂರ್ಣ ಸಾಲಮನ್ನಾ ಮಾಡಲಾಗುವದಿಲ್ಲ ಎಂದು ಹೇಳಿಕೆ ನೀಡಿರುವದು ಖಂಡನೀಯ. ಕೇವಲ ಮೂರು ಜಿಲ್ಲೆಗಳನ್ನು ಪರಿಗಣಿಸಿ ಬಜೆಟ್ ಮಂಡಿಸಿರುವದು ಸರಿಯಲ್ಲ. ಕುಶಾಲನಗರಕ್ಕೆ ಚುನಾವಣಾ ಪ್ರಚಾರ ಸಂದರ್ಭ ಆಗಮಿಸಿದ ಸಂದರ್ಭವೂ ಬೆಳೆಗಾರರ ಸಾಲಮನ್ನಾ ಮಾಡುವದಾಗಿ ಘೋಷಿಸಿ ಇದೀಗ ಹಿಂದೆ ಸರಿದಿರುವದು ಸಮಂಜಸವಲ್ಲ ಎಂದರು.

ಸಂಘದ ನಿರ್ದೇಶಕ ಎಡದಂಟೆ ಲವ ಮಾತನಾಡಿ, ಕರಿಮೆಣಸು ಆಮದನ್ನು ತಕ್ಷಣ ನಿಲ್ಲಿಸಬೇಕು. ಕಾಫಿ ಮತ್ತು ಕರಿಮೆಣಸಿಗೆ ಬೆಂಬಲ ಬೆಲೆ ನೀಡಬೇಕು. ಕೊಡಗಿನ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದು, ಶಾಸಕರು ಮತ್ತು ಸಂಸದರು ಬೆಳೆಗಾರರ ಪಾಲಿಗೆ ಇದ್ದಾರೋ ಇಲ್ಲವೋ ಎಂಬ ಸಂಶಯ ಉದ್ಬವವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನ ಕಾಫಿ ಬೆಳೆಗಾರರ ಬಗ್ಗೆ ಶಾಸಕರುಗಳು, ಸಂಸದರು ಕಿಂಚಿತ್ತೂ ಕಾಳಜಿಯಿಲ್ಲದವರಂತೆ ವರ್ತಿಸುತ್ತಿರುವದು ಬೆಳೆಗಾರ ವರ್ಗದಲ್ಲಿ ನೋವುಂಟು ಮಾಡಿದೆ. ತಕ್ಷಣ ವಿಧಾನಮಂಡಲ ಅಧಿವೇಶನ ದಲ್ಲಿ ಬೆಳೆಗಾರರ ಬೇಡಿಕೆಗಳ ಬಗ್ಗೆ ಚರ್ಚಿಸಬೇಕು ಎಂದು ಪದಾಧಿಕಾರಿಗಳು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರಾದ ಪೂವಮ್ಮ ಗುರಪ್ಪ, ಸುರೇಶ್, ಲಿಂಗೇರಿ ರಾಜೇಶ್, ಖಜಾಂಚಿ ರಮೇಶ್ ಅವರುಗಳು ಉಪಸ್ಥಿತರಿದ್ದರು.