ಸೋಮವಾರಪೇಟೆ, ಜು.11: ಕನ್ನಡ ಸಾಹಿತ್ಯ ಪರಿಷತ್ ನಿಂದ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಆಯೋಜಿಸಲು ಉದ್ದೇಶಿಸಿರುವ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಜಲಾ ಕಾಳಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿನ ಕ.ಸಾ.ಪ. ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ.ವಿಜೇತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಲಾ ಕಾಳಪ್ಪ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. (ಮೊದಲ ಪುಟದಿಂದ) ಈ ಸಂದರ್ಭ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಈಗಾಗಲೇ ಆಲೂರು ಸಿದ್ದಾಪುರದಲ್ಲಿ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು, ವಿವಿಧ ಸಮಿತಿಗಳನ್ನು ರಚಿಸುವ ಮೂಲಕ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಈವರೆಗೆ ಆಯೋಜಿಸಿರುವ ಐದು ಸಮ್ಮೇಳನಗಳಲ್ಲಿ ಮಹಿಳೆಯರಿಗೆ ಆದ್ಯತೆ ಸಿಕ್ಕಿರಲಿಲ್ಲ. ಈ ಬಗ್ಗೆ ತಾಲೂಕು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳು ಚರ್ಚಿಸಿದ್ದು, ಅದರಂತೆ ಈ ಬಾರಿ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಕೋಶಾಧ್ಯಕ್ಷ ಎಸ್.ಎ. ಮುರಳೀಧರ್, ಮಾಧ್ಯಮ ಕಾರ್ಯದರ್ಶಿ ಎನ್.ಎ.ಅಶ್ವಥ್‍ಕುಮಾರ್, ಜಿಲ್ಲಾ ನಿರ್ದೇಶಕ ಕವನ್ ಕಾರ್ಯಪ್ಪ, ತಾಲೂಕು ಕಸಾಪದ ಗೌರವ ಕಾರ್ಯದರ್ಶಿ ಗಳಾದ ಕೆ.ಎ.ಆದಮ್, ಎಲ್.ಎಂ.ಪ್ರೇಮ, ನಿರ್ದೇಶಕರುಗಳಾದ ನಳಿನಿ ಗಣೇಶ್, ನ.ಲ.ವಿಜಯ, ಕೆ.ಎನ್.ಸುದೀಪ್, ಕೆ.ಪಿ.ದಿನೇಶ್ ಮತ್ತಿತರರು ಇದ್ದರು.