ಮಡಿಕೇರಿ, ಜು. 11: ವೀರಾಜಪೇಟೆ ಕ್ಷೇತ್ರದ ಜೆಡಿಎಸ್‍ನಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಂತೆ ಪಕ್ಷದ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರು ‘ನಾಟಿ ಮಾಡೋರು ಬೇರೆ... ಕದಿರು ತೆಗೆಯೋರು ಬೇರೆ...’ ಎಂಬಂತೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಪಕ್ಷದ ಜಿಲ್ಲಾಧ್ಯಕ್ಷರಾಗಿರುವ ಸಂಕೇತ್ ಪೂವಯ್ಯ ಅವರನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ನಿನ್ನೆ ಗೋಣಿಕೊಪ್ಪಲುವಿನಲ್ಲಿ ನಡೆದಿರುವ ಸಭೆಯ ಕುರಿತಾಗಿ ‘ಶಕ್ತಿ’ ಸಂಕೇತ್ ಅವರ ಪ್ರತಿಕ್ರಿಯೆ ಬಯಸಿದಾಗ ಅವರು ಮೇಲಿನಂತೆ ಉತ್ತರಿಸಿದರು.
ಪಕ್ಷದ ಕಾರ್ಯಕರ್ತರು ಎಂದು ಕೆಲವರು ನಿನ್ನೆ ಸಭೆ ನಡೆಸಿರುವದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಆದರೆ ಇದು ಪಕ್ಷದ ಅಧಿಕೃತ ಸಭೆ ಅಲ್ಲ. ಕ್ಷೇತ್ರ ಸಮಿತಿ ಅಧ್ಯಕ್ಷರಾಗಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಸಕ್ರಿಯವಾಗಿ ದುಡಿದವರಾಗಲಿ ಈ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಈ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವದು. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಇದನ್ನು ಹೊರತರುವ ಮುನ್ನ ವರಿಷ್ಠರ ಗಮನಕ್ಕೆ ತರಬೇಕು. ಈ ಕ್ಷೇತ್ರದಲ್ಲಿ ಪಕ್ಷ ಯಾವ ಸ್ಥಿತಿಯಲ್ಲಿತ್ತು ಎಂಬದು ವರಿಷ್ಠರಿಗೆ ತಿಳಿದಿದೆ.
ಆರೋಪ ಮಾಡಿದವರು ಈ ತನಕ ಪಕ್ಷ ಸಂಘಟನೆಗಾಗಿ ಎಷ್ಟು ದುಡಿದಿದ್ದಾರೆ ಎಂಬದು ಜನತೆಗೆ ಗೊತ್ತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ, ರೈತರಿಗೆ ಸ್ಪಂದಿಸಲಿದ್ದಾರೆ ಎಂದು ತಾವು ಈ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದು, ಪಕ್ಷ ಸಂಘಟನೆಯಲ್ಲಿ ನಿರತನಾಗಿದ್ದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಅಸಾಧ್ಯ ಎಂದು ಅರಿವಿತ್ತಾದರೂ ತಮ್ಮ ಪ್ರಯತ್ನದಿಂದ ಈ ಹಿಂದಿನ ಚುನಾವಣೆಗಿಂತ ದುಪ್ಪಟ್ಟು ಮತಗಳು ಬಂದಿವೆ ಎಂದರು.
ಜಿಲ್ಲೆಯಲ್ಲಿ ಕಾಡಾನೆ ಹಾವಳಿ, ಹುಲಿ ಹಾವಳಿಯಿಂದ ರೈತರು ಕೆಂಗೆಟ್ಟಿದ್ದಾರೆ. ಈ ನೋವು ಅನುಭವಿಸಿದವರಿಗಷ್ಟೆ ಗೊತ್ತು. ಸಂಕಷ್ಟದಲ್ಲಿರುವ ಇವರಿಗೆ ಯಾರೂ ಸ್ಪಂದಿಸುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ತಾವು ವೈಯಕ್ತಿಕವಾಗಿಯೂ ನೆರವು ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಯತ್ನಿಸಿದ್ದೇನೆ. ಚುನಾವಣೆಗೆ ಮುಂಚಿತವಾಗಿಯೂ ಸ್ಪಂದಿಸಿದ್ದು, ತಮ್ಮ ಪ್ರಯತ್ನ ಮುಂದೆಯೂ ಹೀಗೆಯೇ ಇರುತ್ತದೆ ಎಂದು ಅವರು ವಿವರಿಸಿದರು.