ಕುಶಾಲನಗರ, ಜು. 12: ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಶಿಥಿಲ ಕಟ್ಟಡದ ಮೇಲ್ಚಾವಣಿ ಮಳೆಗೆ ಎರಡನೇ ಬಾರಿ ಕುಸಿದಿದ್ದು ಭಾರೀ ಅಪಾಯ ತಪ್ಪಿದೆ. ಪಟ್ಟಣದ ಬಸ್ ನಿಲ್ದಾಣ ಸಮೀಪ ಮಡಿಕೇರಿಗೆ ತೆರಳುವ ರಸ್ತೆ ಬದಿಯಲ್ಲಿ ಇರುವ ಈ ವಿವಾದಿತ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೋಟಿಸ್ ನೀಡಿದರೂ ಇದರ ಕೆಳಭಾಗದಲ್ಲಿ ಅಕ್ರಮವಾಗಿ ವ್ಯಾಪಾರ ಮುಂದುವರೆದಿತ್ತು.

ಕಳೆದ 4 ದಿನಗಳ ಹಿಂದೆ ಈ ಕಟ್ಟಡದ ಸ್ವಲ್ಪ ಭಾಗದ ಮೇಲ್ಛಾವಣಿ ಕುಸಿದಿತ್ತು. ರಾತ್ರಿ ವೇಳೆ ಘಟನೆ ಸಂಭವಿಸಿದ ಹಿನ್ನೆಲೆ ಯಾವದೇ ಅಪಾಯ ಸಂಭವಿಸಿಲ್ಲ. ಪಕ್ಕದ ಹೊಟೇಲ್ ಒಂದರ ಮೇಲೆ ಕಟ್ಟಡ ಕುಸಿದು ಬಿದ್ದಿದ್ದು ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ. ಈ ಕಟ್ಟಡ ರಾಷ್ಟ್ರೀಯ ಹೆದ್ದಾರಿ ಒತ್ತಿನಲ್ಲಿದ್ದು ದಿನನಿತ್ಯ ಸಾವಿರಾರು ಜನ ಸೇರಿದಂತೆ ವಾಹನ ಸಂಚಾರ ಒತ್ತಡ ಅಧಿಕವಾಗಿದ್ದು ಕ್ರಮ ಕೈಗೊಳ್ಳುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಕಟ್ಟಡದ ಪ್ರಕರಣ ನ್ಯಾಯಾಲಯದಲ್ಲಿ ಇರುವದರಿಂದ ಕೈಚೆಲ್ಲಿದ್ದರು. ಸ್ಥಳೀಯ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಿಂದ ಅಪಾಯದ ಮುನ್ಸೂಚನೆ ಮಾಹಿತಿ ದೊರೆತ ಕುಶಾಲನಗರ ಸಂಚಾರಿ ಠಾಣಾಧಿಕಾರಿ ನವೀನ್‍ಗೌಡ ಮತ್ತು ಸಿಬ್ಬಂದಿಗಳು ಕಟ್ಟಡದ ವ್ಯಾಪ್ತಿಯಲ್ಲಿ ಯಾವದೇ ಜನರು ಓಡಾಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ತಕ್ಷಣ ಈ ಅಪಾಯಕಾರಿ ಕಟ್ಟಡ ನೆಲಸಮಗೊಳಿಸುವಂತೆ ಸಾರ್ವಜನಿಕರು ಸ್ಥಳೀಯ ಪಟ್ಟಣ ಪಂಚಾಯಿತಿ ಮೂಲಕ ಒತ್ತಾಯಿಸಿದ್ದು, ಈ ಬಗ್ಗೆ ಸಂಬಂಧಿಸಿದ ನ್ಯಾಯಾಲಯದ ಗಮನಕ್ಕೆ ತರುವಂತೆ ಆಗ್ರಹಿಸಿದ್ದಾರೆ.