ಸಿದ್ದಾಪುರ, ಜು. 12: ಕರಡಿಗೋಡುವಿನ ನದಿದಡದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಜಾಗವನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದರು.
ಸಿದ್ದಾಪುರದ ಕರಡಿಗೋಡುವಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಅವರು ನದಿ ದಡದ ನಿವಾಸಿಗಳಿಗೆ ಈ ಬಗ್ಗೆ ತಿಳಿಸಿದರು. ಪ್ರವಾಹದ ನೀರು ನದಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ದಡದ ನಿವಾಸಿಗಳು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದರು.
ಅಪಾಯದಲ್ಲಿರುವ ನದಿ ದಡದ ನಿವಾಸಿಗಳಿಗೆ ತಾತ್ಕಾಲಿಕವಾಗಿ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ತಮ್ಮ ಮಕ್ಕಳೊಂದಿಗೆ ಅಲ್ಲಿಗೆ ತೆರಳುವಂತೆ ತಿಳಿಸಿದ ಅವರು ಯಾವದೇ ಕಾರಣಕ್ಕೂ ಪ್ರವಾಹ ನೀರು ಏರಿಕೆಯಾಗುವ ಸಂದರ್ಭದಲ್ಲಿ ಇದೇ ಸ್ಥಳದಲ್ಲಿ ವಾಸ್ತವ್ಯ ಹೂಡದಂತೆ ಹಾಗೂ ಸುರಕ್ಷಿತ ಸ್ಥಳಕ್ಕೆ ತೆರಳಲು ನಿರಾಕರಿಸಬಾರದೆಂದು ಹೇಳಿದರು. ಈಗಾಗಲೇ ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳದಲ್ಲಿ ಕಂದಾಯ ಇಲಾಖಾಧಿಕಾರಿಗಳು ವಶಪಡಿಸಿ ಕೊಂಡಿರುವ ಒತ್ತುವರಿ ಜಾಗದಲ್ಲಿ 3 ಎಕರೆ ಜಾಗದಲ್ಲಿ ನದಿ ದಡದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸುವ ಬಗ್ಗೆ ಕ್ರಮಕೈಗೊಳ್ಳ ಲಾಗುವದೆಂದರು.
ಇದೇ ಸಂದರ್ಭ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳದಲ್ಲೇ ಇದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಜಿಲ್ಲಾಧಿಕಾರಿ ಯವರೊಂದಿಗೆ ಮಾತನಾಡಿ, ಕರಡಿಗೋಡು ಗ್ರಾಮದ ನದಿ ದಡದಲ್ಲಿ 150ಕ್ಕೂ ಅಧಿಕ ಕುಟುಂಬದವರು ಕಳೆದ 40 ವರ್ಷಗಳಿಂದ ಖಾಯಂ ಆಗಿ ವಾಸ ಮಾಡಿಕೊಂಡಿದ್ದು, ವರ್ಷಂಪ್ರತಿ ಮಳೆಗಾಲದ ಸಂದರ್ಭದಲ್ಲಿ ಪ್ರವಾಹದ ನೀರಿನ ಹೊಡೆತಕ್ಕೆ ಮನೆಗಳು ಬಿರುಕು ಬಿಡುತ್ತಿದ್ದು, ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ ಎಂದರು. ಅಲ್ಲದೆ, ನದಿ ದಡದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಿಕೊಡುವಂತೆ ಹಾಗೂ ಕರಡಿಗೋಡು ಚಿಕ್ಕನಳ್ಳಿ ಸಂಪರ್ಕ ರಸ್ತೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಸ್ಥಳದಲ್ಲೇ ಇದ್ದ ಸಿದ್ದಾಪುರ ಪಿಡಿಓ ವಿಶ್ವಾನಾಥ್ ಅವರಿಗೆ ಕೂಡಲೇ ಈ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಬೀದಿ ದೀಪ ಹಾಗೂ ತಡೆಗೋಡೆ ನಿರ್ಮಾಣ ಮಾಡಿಸಿಕೊಡುವಂತೆ ಸೂಚಿಸಿದರು. ಇದೇ ಸಂದರ್ಭ ನದಿ ದಡದ ನಿವಾಸಿಗಳು ಪಂಚಾಯಿತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಯಾವದೇ ರೀತಿಯ ಮೂಲಭೂತ ಸೌಕರ್ಯಗಳಿಗೆ ಪಂಚಾಯಿತಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ನಂತರ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ನದಿ ದಡದ ಅಪಾಯದಲ್ಲಿರುವ ಮನೆಗಳಿಗೆ ತೆರಳಿ ಖುದ್ದು ಪರಿಶೀಲಿಸಿದರು.
ಈ ಸಂದರ್ಭ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಅಮ್ಮತ್ತಿ ಕಂದಾಯ ಪರಿವೀಕ್ಷಕ, ಗ್ರಾಮ ಲೆಕ್ಕಿಗ ಅನಿಲ್ ಕುಮಾರ್, ಮಂಜುನಾಥ್, ಗ್ರಾ.ಪಂ. ಸದಸ್ಯೆ ಪೂವಮ್ಮ, ಕಾರ್ಮಿಕ ಮುಖಂಡ ಪಿ.ಆರ್. ಭರತ್, ಬೈಜು, ಕೃಷ್ಣ ಇನ್ನಿತರರು ಹಾಜರಿದ್ದರು.
ಇದೇ ಸಂದರ್ಭ ನೆಲ್ಯಹುದಿಕೇರಿ ಗ್ರಾಮದ ಪ್ರವಾಹ ಪೀಡಿತ ಬೆಟ್ಟದಕಾಡುವಿಗೆ ಡಿಸಿ ಹಾಗೂ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಚಿತ್ರ, ವರದಿ: ವಾಸು