ಸೋಮವಾರಪೇಟೆ, ಜು. 12: ಜನವಸತಿ ಪ್ರದೇಶದಲ್ಲಿರುವ ಕಾಫಿ ತೋಟದಲ್ಲಿ ಅಲೆದಾಡಿ ಅರಣ್ಯಕ್ಕೆ ತೆರಳುವ ಸಂದರ್ಭ ಕೆಸರಿಗೆ ಸಿಲುಕಿ ಹೆಣ್ಣು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಅಬ್ಬೂರುಕಟ್ಟೆ ಸಮೀಪದ ಹಿತ್ಲುಮಕ್ಕಿ ಕಾಡನೂರಿನಲ್ಲಿ ಸಂಭವಿಸಿದೆ.

ಮಾಲಂಬಿ ಮೀಸಲು ಅರಣ್ಯದಿಂದ ಹಿತ್ಲುಮಕ್ಕಿ ಭಾಗಕ್ಕೆ ಆಗಮಿಸಿರುವ ನಾಲ್ಕೈದು ಕಾಡಾನೆಗಳು ನಿನ್ನೆ ರಾತ್ರಿ ಮರಳಿ ಅರಣ್ಯಕ್ಕೆ ತೆರಳುವ ಸಂದರ್ಭ ಕಾಡನೂರು ಎಂಬಲ್ಲಿ ತೋಡಿನ ಪಕ್ಕದಲ್ಲೇ ಹೆಣ್ಣಾನೆ ಕೆಸರಿಗೆ ಸಿಲುಕಿದೆ. ಇದರಿಂದಾಗಿ ಮುಂಬದಿಯ ಎರಡು ಕಾಲುಗಳು ತಳಭಾಗಕ್ಕೆ ಮಡಚಿಕೊಂಡಿದ್ದು, ಸೊಂಡಿಲು ತೋಡಿನ ಒಳಗೆ ಸಿಲುಕಿದೆ. ಪರಿಣಾಮ ಸುಮಾರು 12 ವರ್ಷ ಪ್ರಾಯದ ಕಾಡಾನೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಮೃತಪಟ್ಟಿರ ಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿ ಗ್ರಾಮದ ಲಿಂಗರಾಜು ಅವರ ತೋಟಕ್ಕೆ ಆಗಮಿಸಿರುವ ಕಾಡಾನೆಗಳು ಮನಸೋಯಿಚ್ಚೆ ಸಂಚರಿಸಿದ್ದು, ಕಾಫಿ ಗಿಡಗಳು ಹಾನಿಗೊಂಡಿವೆ. ಬೆಳಗ್ಗಿನ ಜಾವ ಮಾಲಂಬಿ ಮೀಸಲು ಅರಣ್ಯಕ್ಕೆ ಹಿಂತೆರಳುವ ಸಂದರ್ಭ ಈ ಘಟನೆ ನಡೆದಿದೆ.

ಅರಣ್ಯಾಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಡಿ.ಎಫ್‍ಓ ಮಂಜುನಾಥ್, ಎಸಿಎಫ್ ಚಿಣ್ಣಪ್ಪ, ಆರ್‍ಎಫ್‍ಓ ಲಕ್ಷ್ಮೀಕಾಂತ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಎಸಿಎಫ್ ಚಿಣ್ಣಪ್ಪ, ತೋಡು ದಾಟುವ ಸಂದರ್ಭ ಆಕಸ್ಮಿಕವಾಗಿ ಕೆಳಬಿದ್ದಿರುವ ಕಾಡಾನೆಗೆ ಸ್ಥಳದಲ್ಲೇ ಹೃದಯಾಘಾತವಾಗಿರ ಬಹುದು. ಈ ಭಾಗದಲ್ಲಿ ತೋಟಗಳಿಗೆ ಸೋಲಾರ್ ತಂತಿ ಅಳವಡಿಸಿದ್ದರೂ ಸಹ ಸೋಲಾರ್‍ಗೆ ವಿದ್ಯುತ್ ಕಂಬಗಳಿಂದ ಅಕ್ರಮ ಸಂಪರ್ಕ ನೀಡಿಲ್ಲ ಎಂದರು.

ಇತ್ತೀಚಿನ ವರ್ಷಗಳವರೆಗೂ ಸಾವಿರಾರು ಏಕರೆ ವಿಸ್ತೀರ್ಣ ಹೊಂದಿರುವ ಟಾಟಾ ಕಾಫಿ ಎಸ್ಟೇಟ್‍ನಲ್ಲಿ ಬೀಡುಬಿಡುತ್ತಿದ್ದ ಕಾಡಾನೆಗಳು, ಇದೀಗ ಹೊರಭಾಗಕ್ಕೆ ಆಗಮಿಸುತ್ತಿವೆ. ಕೋವರ್‍ಕೊಲ್ಲಿ ಸಮೀಪ ಟಾಟಾ ಕಾಫಿ ಎಸ್ಟೇಟ್‍ಗೆ ಸಂಪೂರ್ಣವಾಗಿ ಸೋಲಾರ್ ಬೇಲಿ ಅಳವಡಿಸಿರುವದರಿಂದ ಎಸ್ಟೇಟ್‍ನ ಒಳಗೆ ತೆರಳಲು ಅಸಾಧ್ಯವಾಗಿರುವ ಹಿನ್ನೆಲೆ ಅಕ್ಕಪಕ್ಕದ ಕಾಫಿ ತೋಟಗಳಿಗೆ ಆಗಮಿಸುತ್ತಿವೆ ಎಂದು ತಿಳಿಸಿದರು.

ಆರ್‍ಎಫ್‍ಓ ಲಕ್ಷ್ಮೀಕಾಂತ್ ಮಾತನಾಡಿ, ಸೋಮವಾರಪೇಟೆ ರೇಂಜ್‍ಗೆ ಒಳಪಟ್ಟಂತೆ 18 ರಿಂದ 20 ಕಾಡಾನೆಗಳು ಸಂಚರಿಸುತ್ತಿದ್ದು, ಹಗಲಿನ ವೇಳೆಯಲ್ಲಿ ಅರಣ್ಯಕ್ಕೆ ತೆರಳುತ್ತವೆ. ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಬಾರದಿರಲಿ ಎಂಬ ಉದ್ದೇಶದಿಂದ ಅರಣ್ಯದ ಸುತ್ತಲೂ ಆನೆಕಂದಕ ನಿರ್ಮಿಸಲಾಗಿದೆ. ಇದರೊಂದಿಗೆ ಸೋಲಾರ್ ಬೇಲಿಯನ್ನೂ ಅಳವಡಿಸಲಾಗಿದೆ. ಆದರೂ ಸಹ ಕಾಡಾನೆಗಳು ಎಲ್ಲಾ ಅಡೆತಡೆಗಳನ್ನೂ ಮೀರಿ ಆಗಮಿಸುತ್ತಿವೆ ಎಂದು ಮಾಹಿತಿ ನೀಡಿದರು.

ಇದೀಗ ನೂತನವಾಗಿ ಟೆಂಟಗಲ್ ಫೆನ್ಸಿಂಗ್ ಅಳವಡಿಸಲಾಗುತ್ತಿದೆ. ಕಾಡಾನೆಗಳು ಪ್ರತಿದಿನ ಕನಿಷ್ಟ 25 ರಿಂದ 30 ಕಿ.ಮೀ. ಸಂಚರಿಸುತ್ತವೆ. ಈ ಹಿನ್ನೆಲೆ ಅವುಗಳನ್ನು ಒಂದೆಡೆ ‘ಬ್ಲಾಕ್’ ಮಾಡಲು ಸಾಧ್ಯವಾಗುತ್ತಿಲ್ಲ. ಕಾಡಾನೆಗಳಿಂದ ಯಾವದೇ ಹಾನಿಗಳು ಸಂಭವಿಸಿದರೆ ತಕ್ಷಣ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಲಕ್ಷ್ಮೀಕಾಂತ್ ಹೇಳಿದರು.

ಘೀಳಿಡುತ್ತಿದ್ದ ಸಹಪಾಠಿಗಳು: ತಮ್ಮ ಬಳಗದ ಸದಸ್ಯ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದರಿಂದ ಇತರ ಕಾಡಾನೆಗಳು ಘಟನಾ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿ ನಿಂತು ಘೀಳಿಡುತ್ತಿದ್ದವು. ಸಾವನ್ನಪ್ಪಿದ ಕಾಡಾನೆಯನ್ನು ನೋಡಲು ಸಾರ್ವಜನಿಕರು ಆಗಮಿಸುತ್ತಿದ್ದ ಸಂದರ್ಭ ಅರಣ್ಯದ ಅಂಚಿನಲ್ಲಿದ್ದ ಕಾಡಾನೆಗಳು ಘೀಳಿಟ್ಟವು. ನಂತರ ಅರಣ್ಯ ಇಲಾಖಾ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಾಡಾನೆಗಳನ್ನು ದೂರಕ್ಕೆ ಅಟ್ಟಿದರು.

ಮಧ್ಯಾಹ್ನ ನಂತರ ನಾಗರಹೊಳೆ ಯಿಂದ ಆಗಮಿಸಿದ ಅರಣ್ಯ ಇಲಾಖೆಯ ವೈದ್ಯಾಧಿಕಾರಿ ಮುಜೀಬ್ ಅವರು ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೇಬರವನ್ನು ಹೂಳಲಾಯಿತು.